ಬಾಲಿವುಡ್ ನಲ್ಲಿ ಒಂದೇ ಕಥೆ, ಎರಡು ಸಿನೆಮಾ

Update: 2017-11-10 13:59 GMT

ಬಾಲಿವುಡ್‌ನಲ್ಲಿ ಈಗ ಐತಿಹಾಸಿಕ ಹಿನ್ನೆಲೆಯ ಚಿತ್ರಗಳ ಸುವರ್ಣ ಯುಗವಾಗಿದೆ. ‘ಬಾಜೀರಾವ್ ಮಸ್ತಾನಿ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ, ಪದ್ಮಾವತಿ ಬೆಳ್ಳಿತೆರೆಗೆ ಬರಲು ಸಿದ್ಧವಾಗುತ್ತಿದೆ. ಇನ್ನೊಂದೆಡೆ ದಾಮಿನಿ ಖ್ಯಾತಿಯ ನಿರ್ದೇಶಕ. ರಾಜ್‌ಕುಮಾರ್ ಸಂತೋಷಿ ಕೂಡಾ ಭಾರೀ ವೆಚ್ಚದಲ್ಲಿ ಐತಿಹಾಸಿಕ ಚಿತ್ರವೊಂದರ ತಯಾರಿಗೆ ಸಿದ್ಧತೆ ನಡೆಸುತ್ತಿದ್ದಾರೆ. 1897ರಲ್ಲಿ ನಡೆದ ಸಾರಾಘರ್‌ಹಿ ಯುದ್ಧದ ಕಥಾವಸ್ತುವನ್ನು ಆಧರಿಸಿದ ಐತಿಹಾಸಿಕ ಚಿತ್ರವು ಮುಂದಿನ ವಾರದಿಂದ ಶೂಟಿಂಗ್ ಆರಂಭಿಸಲಿದೆ. ರಣದೀಪ್ ಹೂಡಾ ನಾಯಕನಾಗಿರುವ ಈ ಚಿತ್ರದ ಶೂಟಿಂಗ್ ಪಂಜಾಬ್‌ನಲ್ಲಿ ಆರಂಭಗೊಳ್ಳಲಿದೆ. ಡ್ಯಾನಿ ಡೆಂರೆಪಾ ನೆಗೆಟಿವ್ ಪಾತ್ರದಲ್ಲಿ ನಟಿಸಲಿದ್ದಾರೆ.

ಪಂಜಾಬ್‌ನಲ್ಲಿ 40 ದಿನಗಳ ದೀರ್ಘಾವಧಿಯ ಶೂಟಿಂಗ್ ಬಳಿಕ ಚಿತ್ರತಂಡ ಕಝಕಸ್ತಾನಕ್ಕೆ ಪ್ರಯಾಣಿ ಸಲಿದೆ. ಚಿತ್ರಕ್ಕಾಗಿಯೇ ಅಲ್ಲೊಂದು ಬೃಹತ್ ಸೆಟ್ ನಿರ್ಮಿಸಲಾಗುವುದಂತೆ.

ಆದರೆ ಆರಂಭದಲ್ಲೇ ಚಿತ್ರಕ್ಕೆ ಸಮಸ್ಯೆ ಎದುರಾಗಿದೆ. ಇದೇ ಕಥಾವಸ್ತುವನ್ನು ಆಧರಿಸಿ ತಾನೊಂದು ಚಿತ್ರ ನಿರ್ಮಿಸುವುದಾಗಿ ನಿರ್ಮಾಪಕ ಕರಣ್‌ಜೋಹರ್ ಇತ್ತೀಚೆಗೆ ಘೋಷಿಸಿದ್ದಾರೆ. ಅಕ್ಷಯ್ ಕುಮಾರ್ ನಾಯಕನಾಗಿ ನಟಿಸಲಿರುವ ಈ ಚಿತ್ರಕ್ಕೆ ‘ಕೇಸರ್’ ಎಂದು ಹೆಸರಿಡುವುದಾಗಿ ಕರಣ್ ಹೇಳಿಕೊಂಡಿದ್ದಾರೆ. ಆದರೆ ಆ ಬಗ್ಗೆ ತನಗೆ ಯಾವುದೇ ಚಿಂತೆಯಿಲ್ಲವೆಂದು ರಾಜ್‌ಕುಮಾರ್ ಸಂತೋಷಿ ಹೇಳುತ್ತಾರೆ. ಯಾವುದೇ ಐತಿಹಾಸಿಕ ಕಥಾವಸ್ತುವಿನ ಮೇಲೆ ಹಕ್ಕು ಸಾಧಿಸಲು ಯಾರಿಗೂ ಅಧಿಕಾರವಿಲ್ಲವೆಂದು ಅವರು ಹೇಳುತ್ತಾರೆ.

ತಾನು ಹೊಸಬರನ್ನೇ ಹಾಕಿಕೊಂಡು ಈ ಚಿತ್ರ ನಿರ್ಮಿಸುತ್ತಿದ್ದು, ನಾಯಕನಟನಾಗಿರುವ ರಣದೀಪ್ ಹೂಡಾಗೂ ಯಾವುದೇ ಸೂಪರ್‌ಸ್ಟಾರ್ ಪಟ್ಟವಿಲ್ಲ. ಆದಾಗ್ಯೂ ತನ್ನ ಕರಣ್ ನಿರ್ಮಾಣದ ಚಿತ್ರದ ಮುಂದೆ ಸ್ಪರ್ಧೆ ಎದುರಿಸಲು ಸಿದ್ಧವಿದೆಯೆಂದು ಸಂತೋಷಿ ಹೇಳಿಕೊಂಡಿದ್ದಾರೆ.

ಕೇಸರ್‌ಗಿಂತ ತನ್ನ ಚಿತ್ರ ಕಡಿಮೆ ಬಜೆಟ್‌ನದ್ದಾಗಿರಬಹುದು. ಆದರೆ ನಾನೊಂದು ಪ್ರಾಮಾಣಿಕ ವಾದಂತಹ ಚಿತ್ರ ನಿರ್ಮಿಸುತ್ತಿದ್ದೇನೆ. ಬಜೆಟ್ ನೋಡಿ ಜನ ಚಿತ್ರವನ್ನು ಅಳೆಯಲು ಸಾಧ್ಯವಿಲ್ಲ. 300 ಕೋಟಿ ರೂ.ಬಜೆಟ್ ಚಿತ್ರಗಳು ಸೋತು, 30 ಕೋಟಿ ರೂ. ವೆಚ್ಚದ ಚಿತ್ರ ಗೆದ್ದ ಉದಾಹರಣೆಗಳು ನಮ್ಮ ಮುಂದೆ ಇವೆ ಎಂದು ಸಂತೋಷಿ ಹೇಳುತ್ತಾರೆ.

ಒಟ್ಟಿನಲ್ಲಿ ಬಾಲಿವುಡ್‌ನಲ್ಲಿ ಬ್ಯಾಟಲ್ ಆಫ್ ಸಾರಾಘರ್‌ಹಿ, ಚಿತ್ರರಂಗದ ಇಬ್ಬರು ದಿಗ್ಗಜರ ನಡುವೆ ಪ್ರಬಲ ಸ್ಪರ್ಧೆಗೆ ಸಾಕ್ಷಿಯಾಗಲಿರುವುದಂತೂ ನಿಜ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News