ಜಾರಿ ನಿರ್ದೇಶನಾಲಯ ಬಳಿ 9900 ಕೋಟಿ ರೂ. ಅಕ್ರಮ ಆಸ್ತಿಯ 3700 ಪ್ರಕರಣಗಳು
ಹೊಸದಿಲ್ಲಿ, ನ.10 : ನೋಟು ರದ್ದತಿಯ ನಂತರದ ಒಂದು ವರ್ಷದಲ್ಲಿ ಇಲಾಖೆಯು ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಪಟ್ಟಂತೆ 3,700ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿಕೊಂಡಿದೆ ಮತ್ತು ಸುಮಾರು 600 ಶೋಕಾಸ್ ನೊಟೀಸ್‌ಗಳನ್ನು ಜಾರಿ ಮಾಡಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ವರದಿ ಮಾಡಿದೆ. ಇಲಾಖೆಯು ದೇಶಾದ್ಯಂತ ನಡೆಸಿದ 620 ಕಾರ್ಯಾಚರಣೆಗಳಲ್ಲಿ ರೂ. 9,900 ಕೋಟಿಗೂ ಅಧಿಕ ಅಕ್ರಮ ಆಸ್ತಿಗಳನ್ನು ಪತ್ತೆಮಾಡಲಾಗಿದೆ. ನವೆಂಬರ್ 2016ರಿಂದ ಸೆಪ್ಟೆಂಬರ್ 2017ರ ಅವಧಿಯ ಅಂಕಿಅಂಶಗಳನ್ನು ಹೊಂದಿರುವ ಈ ವರದಿಯಲ್ಲಿ ಆ ಸಮಯದಲ್ಲಿ 54 ಮಂದಿಯನ್ನು ಹಣ ವಂಚನೆ ಸಂಬಂಧ ಬಂಧಿಸಲಾಗಿದೆ ಎಂದು ಇಡಿ ತಿಳಿಸಿದೆ.
ಇವುಗಳಲ್ಲಿ 3,567 ಪ್ರಕರಣಗಳನ್ನು ಫೆಮ ಕಾಯಿದೆ ಉಲ್ಲಂಘನೆ ಮಾಡಿದ ಕಾರಣ ದಾಖಲಿಸಲಾಗಿದ್ದು, ಇವುಗಳ ಮೊತ್ತ ರೂ. 4,600 ಕೋಟಿಯಾಗಿದೆ. ಹಣ ವಂಚನಾ ತಡೆ ಕಾಯಿದೆಯಡಿ 191 ಪ್ರಕರಣಗಳನ್ನು ದಾಖಲಿಸಲಾಗಿದ್ದು ರೂ. 5335 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸುತ್ತದೆ. ಯಾವ ರೀತಿ ಕಪ್ಪುಹಣವನ್ನು ಬಿಳಿ ಮಾಡಲಾಗುತ್ತಿತ್ತು ಎಂಬ ಬಗ್ಗೆಯೂ ವರದಿಯಲ್ಲಿ ವಿವರಿಸಲಾಗಿದೆ. ಇಲಾಖೆಯು ಪಟ್ಟಿ ಮಾಡಿರುವಂತೆ ಕಪ್ಪುಹಣವನ್ನು ಬಿಳಿ ಮಾಡುವ ಆರು ಜನಪ್ರಿಯ ದಾರಿಗಳು ಈ ರೀತಿಯಿವೆ, ಬ್ಯಾಂಕ್ ಅಧಿಕಾರಿಗಳಿಗೆ ಲಂಚ ನೀಡುವುದು, ನಕಲಿ ಕಂಪೆನಿಗಳ ಆರಂಭ, ಚಿನ್ನ ಖರೀದಿ, ಆಮದಿನಲ್ಲಿ ಹೆಚ್ಚಳ ತೋರಿಸುವುದು, ಹವಾಲಾ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ. ಇವುಗಳಲ್ಲಿ ಶೆಲ್ ಕಂಪೆನಿಗಳ ಉಪಯೋಗ ಅತೀಹೆಚ್ಚು ನಡೆದಿದೆ ಎಂದು ತಿಳಿಸಲಾಗಿದ್ದು 2017ರ ಎಪ್ರಿಲ್ ನಲ್ಲಿ ಇಡಿಯು 16 ರಾಜ್ಯಗಳಲ್ಲಿ 1000ಕ್ಕೂ ಅಧಿಕ ಶೆಲ್ ಕಂಪೆನಿಗಳಿಗಾಗಿ 134 ಕಡೆಗಳಲ್ಲಿ ಶೋಧ ನಡೆಸಿದ್ದವು ಎಂದು ವರದಿಯಲ್ಲಿ ತಿಳಿಸಿದೆ. ನೋಟು ಅಮಾನ್ಯದ ನಂತರ ದಾಖಲಾದ ದೂರುಗಳನ್ನು ಗಮನಿಸಿದಾಗ ತಮ್ಮ ಅಕ್ರಮ ಆಸ್ತಿಯನ್ನು ಸಕ್ರಮಗೊಳಿಸಲು ಉದ್ಯಮಿಗಳು ಮತ್ತು ವೃತ್ತಿಪರರು ಪರಸ್ಪರ ಕೈಜೋಡಿಸಿರುವುದು ತಿಳಿಯುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವರದಿಯಲ್ಲಿ ತಿಳಿಸಿರುವಂತೆ, ಭಾರತದಲ್ಲಿ ಆರ್ಥಿಕ ಸಂಸ್ಥೆಗಳನ್ನು ಶೆಲ್ ಕಂಪೆನಿಗಳು ಮತ್ತು ರಿಯಲ್ ಎಸ್ಟೇಟ್‌ಗಳನ್ನು ಬಳಸಿ ವಂಚಿಸುವ ಮೂಲಕ ಶೇಕಡಾ 43, ಸರಕಾರಿ ಅಧಿಕಾರಿಗಳಿಗೆ ಮತ್ತು ಉದ್ಯೋಗಿಗಳಿಗೆ ಲಂಚ ನೀಡುವ ಮೂಲಕ ಶೇಕಡಾ 31, ಮಾದಕ ದ್ರವ್ಯದ ಮೂಲಕ ಶೇಕಡಾ 6.5 ಮತ್ತು ಶಸ್ತ್ರಾಸ್ತ್ರದ ಮೂಲಕ ಶೇಕಡಾ 4.5 ಕಪ್ಪುಹಣ ಉತ್ಪತ್ತಿಯಾಗಿದೆ. ಶೆಲ್ ಕಂಪೆನಿಗಳ ಮೂಲಕವೇ ಅತೀಹೆಚ್ಚು ವಂಚನೆಗಳು ನಡೆದಿವೆ ಎಂದು ತಿಳಿಸಿರುವ ವರದಿಯು ಅವುಗಳ ಮೂಲಕ ಯಾವ ರೀತಿ ಕಪ್ಪುಹಣವನ್ನು ಬಿಳಿ ಮಾಡಲಾಗುತ್ತಿತ್ತು ಎಂಬುದರ ಬಗ್ಗೆ ಸಂಪೂರ್ಣ ವಿವರ ನೀಡಿದೆ. ಇಂತಹ ಬಹುತೇಕ ಕಂಪೆನಿಗಳ ನಿರ್ದೇಶಕರು ನಕಲಿಯಾಗಿದ್ದು ಅದನ್ನು ನಡೆಸುವವರ ಆದೇಶದಂತೆ ಬ್ಯಾಲೆನ್ಸ್ ಶೀಟ್‌ಗಳಿಗೆ ಮತ್ತು ಇತರ ದಾಖಲೆಗಳಿಗೆ ಸಹಿ ಹಾಕುತ್ತಾರೆ. ಇಂಥಾ ಕಂಪೆನಿಗಳ ವಿಳಾಸ ನಕಲಿಯಾಗಿರುತ್ತದೆ ಅಥವಾ ಒಂದು ಕೋಣೆಯಲ್ಲಿ ಕಾರ್ಯಾಚರಿಸುತ್ತವೆ ಎಂದು ವರದಿ ತಿಳಿಸುತ್ತದೆ.