×
Ad

ನನ್ನನ್ನು ಬಲಿಪಶು ಮಾಡಲಾಗಿದೆ, ಪೊಲೀಸರ ವಿರುದ್ಧ ದೂರು ದಾಖಲಿಸುವೆ: ರ್ಯಾನ್ ಶಾಲೆ ಬಸ್ ಕಂಡಕ್ಟರ್

Update: 2017-11-10 21:13 IST

ಗುಡ್ಗಾಂವ್, ನ.10: :ರ್ಯಾನ್ ಅಂತಾರಾಷ್ಟ್ರೀಯ ಶಾಲೆ ವಿದ್ಯಾರ್ಥಿ ಕೊಲೆ ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ. ಇದಕ್ಕಾಗಿ ಪೊಲೀಸರು ಮತ್ತು ಶಾಲಾ ವ್ಯವಸ್ಥಾಪನಾ ಮಂಡಳಿಯ ವಿರುದ್ಧ ದೂರು ದಾಖಲಿಸುವುದಾಗಿ: ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ಹೇಳಿದ್ದಾರೆ. ರ್ಯಾನ್ ಶಾಲೆಯಲ್ಲಿ ನಡೆದ ವಿದ್ಯಾರ್ಥಿಯ ಹತ್ಯಾ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಶೋಕ್ ಕುಮಾರ್ ವಿರುದ್ಧ ಯಾವುದೇ ಸಾಕ್ಷಿ ಲಭಿಸಿಲ್ಲ ಎಂದು ತಿಳಿಸಿದೆ. ಜೊತೆಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹನ್ನೊಂದನೆ ತರಗತಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ.

ಸೆಪ್ಟೆಂಬರ್ 8ರಂದು ರ್ಯಾನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದ ಪ್ರದ್ಯುಮ್ನ ಠಾಕೂರ್‌ನನ್ನು ಶಾಲೆಯ ಶೌಚಾಲಯದಲ್ಲಿ ಕತ್ತುಸೀಳಿ ಕೊಲೆ ಮಾಡಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸರು ಶಾಲಾ ಬಸ್ ಕಂಡಕ್ಟರ್ ಅಶೋಕ್ ಕುಮಾರ್‌ನನ್ನು ಬಂಧಿಸಿದ್ದರು. ಆದರೆ ಈ ಪ್ರಕರಣವನ್ನು ಕೈಗೆತ್ತಿಕೊಂಡ ಸಿಬಿಐ ಅದೇ ಶಾಲೆಯಲ್ಲಿ ಹನ್ನೊಂದನೆ ತರಗತಿಯಲ್ಲಿ ಕಲಿಯುತ್ತಿದ್ದ 16ರ ಹರೆಯದ ವಿದ್ಯಾರ್ಥಿಯನ್ನು ಬಂಧಿಸುವ ಮೂಲಕ ಇಡೀ ಪ್ರಕರಣ ತಿರುವು ಪಡೆದುಕೊಂಡಿತು. ಪೊಲೀಸರು ಅಶೋಕ್ ಕುಮಾರ್‌ಗೆ ಮಾದಕ ದ್ರವ್ಯ ನೀಡಿ ಚಿತ್ರಹಿಂಸೆ ನೀಡುವ ಮೂಲಕ ತಪ್ಪೊಪ್ಪಿಕೊಳ್ಳುವಂತೆ ಮಾಡಿದ್ದಾರೆ. ನೈಜ ಆರೋಪಿಯನ್ನು ರಕ್ಷಿಸುವ ಸಲುವಾಗಿ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಕುಮಾರ್ ಪರ ವಕೀಲಾದ ಮೋಹಿತ್ ವರ್ಮಾ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರು ಸಂಪೂರ್ಣವಾಗಿ ಎಡವಿದ್ದಾರೆ. ವಿದ್ಯಾರ್ಥಿಯನ್ನು ಹತ್ಯೆ ಮಾಡಲು ಅಶೋಕ್ ಕುಮಾರ್‌ಗೆ ಉದ್ದೇಶವಿರಲಿಲ್ಲ ಎಂದು ಹೇಳಿರುವ ಸಿಬಿಐ ಇದೇ ವೇಳೆ ಬಂಧಿತ 16ರ ಹರೆಯದ ವಿದ್ಯಾರ್ಥಿಗೆ ಉದ್ದೇಶವಿತ್ತು ಎಂಬುದನ್ನು ಸಾಬೀತುಪಡಿಸಿದ್ದೆ ಎಂದು ತಿಳಿಸಿರುವ ವಕೀಲರು ಕುಮಾರ್‌ಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ ಹಾಗೂ ಅವಮಾನ ಮಾಡಿದ ಪೊಲೀಸರು ಮತ್ತು ಶಾಲಾ ಮಂಡಳಿಯ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದರು.

ಪೊಲೀಸರು ಅಸ್ಪಷ್ಟವಾಗಿದೆ ಎಂದು ತಳ್ಳಿಹಾಕಿದ್ದ ಸಿಸಿ ಟಿವಿ ಕ್ಯಾಮೆರಾದ ಮೂಲಕವೇ ಸಿಬಿಐ ಅಧಿಕಾರಿಗಳು ನೈಜ ಆರೋಪಿಯನ್ನು ಬಂಧಿಸಿದ್ದಾರೆ. ಹಾಗಾಗಿ ಪೊಲೀಸರು ಇಡೀ ಪ್ರಕರಣವನ್ನು ಮರುರೂಪಿಸಿದ್ದರು. ಅವರು ಒರ್ವ ಮುಗ್ಧ ವ್ಯಕ್ತಿಯನ್ನು ಆರೋಪಿಯನ್ನಾಗಿಸಿದರು. ಪೊಲೀಸರು ಯಾರ ಒತ್ತಡಕ್ಕೆ ಮಣಿದು ಹೀಗೆ ಮಾಡಿದರು ಎಂಬುದು ತನಿಖೆಯಿಂದ ತಿಳಿಯಬೇಕು. ಆದರೆ ಅಶೋಕ್ ಕುಮಾರ್ ಮೇಲೆ ನಡೆದಿರುವುದು ಚಿತ್ರಹಿಂಸೆ ಎಂದು ವರ್ಮಾ ತಿಳಿಸಿದರು.

ಪ್ರಕರಣದಲ್ಲಿ ಕುಮಾರ್ ವಿರುದ್ಧ ಸಿಬಿಐಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ ಆದರೂ ಅವರನ್ನು ಇನ್ನೂ ಪ್ರಕರಣದಿಂದ ಮುಕ್ತಗೊಳಿಸಿಲ್ಲ. ಸಿಬಿಐಗೆ ಮೃತ ವಿದ್ಯಾರ್ಥಿಯ ಮೇಲೆ ಲೈಂಗಿಕ ಶೋಷಣೆ ನಡೆದಿದೆ ಎಂಬುದಕ್ಕೂ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ವರ್ಮಾ ವಿವರಿಸಿದರು.

ವಿದ್ಯಾರ್ಥಿಯ ಹತ್ಯಾ ಪ್ರಕರಣದಲ್ಲಿ ಅಶೋಕ್ ಕುಮಾರ್ ಬಂಧನವಾದಾಗ ಆತನ ಪರ ನ್ಯಾಯಾಲಯದಲ್ಲಿ ವಾದಿಸಬಾರದು ಎಂದು ಗುಡ್ಗಾಂವ್‌ನ ಸೊಹ್ನಾದ ವಕೀಲರ ಮಂಡಳಿ ಜಂಟಿಯಾಗಿ ಆದೇಶ ಹೊರಡಿಸಿತ್ತು. ಹಾಗಾಗಿ ಕುಮಾರ್ ಕುಟುಂಬ ವರ್ಮಾರನ್ನು ವಾದಿಸುವಂತೆ ಮನವಿ ಮಾಡಿತ್ತು. ಸದ್ಯ ಬಂಧನಕ್ಕೊಳಗಾಗಿರುವ ವಿದ್ಯಾರ್ಥಿಯು ತನ್ನ ತಂದೆ ಹಾಗೂ ಒರ್ವ ಸ್ವತಂತ್ರ ಸಾಕ್ಷಿಯ ಮುಂದೆ ಕೊಲೆ ಆರೋಪವನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿರುವ ಸಿಬಿಐ ಅಧಿಕಾರಿಗಳು ನ್ಯಾಯಾಲಯವು ಆತನನ್ನು ಮೂರು ದಿನ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News