×
Ad

25 ಮಿಲಿಯನ್ ಎನ್‌ಆರ್‌ಐಗಳಿಗೆ ಬದಲಿ ಮತದಾನದ ಹಕ್ಕು ನೀಡಲು ಕೇಂದ್ರ ಚಿಂತನೆ

Update: 2017-11-10 22:32 IST

ಹೊಸದಿಲ್ಲಿ. ನ.10: ವಿದೇಶಗಳಲ್ಲಿ ನೆಲೆಸಿರುವ 25 ಮಿಲಿಯನ್ ಅನಿವಾಸಿ ಭಾರತೀಯರಿಗೆ ಬದಲಿ ಮತದಾನದ ಹಕ್ಕು ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್  ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದರು.

ಇದಕ್ಕಾಗಿ ಸಂಬಂಧಿತ ಕೇಂದ್ರದ ಜನರ ಪ್ರತಿನಿಧಿತ್ವ ಕಾಯಿದೆಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದ್ದು ಸಂಸತ್‌ನ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಜಾರಿಗೆ ತರಲು ಸರಕಾರ ಉದ್ದೇಶಿಸಿದೆ ಎಂದವರು ತಿಳಿಸಿದರು.

ಮಸೂದೆಗೆ ಪೂರಕವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ವೋಚ್ಛ ನ್ಯಾಯಾಲಯವು ಸರಕಾರಕ್ಕೆ ಹನ್ನೆರಡು ವಾರಗಳ ಗಡುವು ನೀಡಿದೆ.

ಯುಎಇಯಲ್ಲಿ ನೆಲೆಸಿರುವ ವೈದ್ಯ ವಿಪಿ ಶಂಶೀರ್ ಮತ್ತು ಲಂಡನ್‌ನ ಪ್ರವಾಸಿ ಭಾರತ್‌ನ ಮುಖ್ಯಸ್ಥ ನಾಗೇಂದ್ರ ಚಿಂದಮ್ ಹಾಕಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡ ಸಂದರ್ಭದಲ್ಲಿ ಅಟಾರ್ನಿ ಜನರಲ್ ಈ ಬಗ್ಗೆ ವಿವರಣೆ ನೀಡಿದರು.

ಎನ್‌ಆರ್‌ಐ ಮತದಾರರ ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಚುನಾವಣಾ ಆಯೋಗವು ಈಗಾಗಲೇ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ. ಆಯೋಗವು ಸಾಗರೋತ್ತರ ಮತದಾರರಿಗೆ ಮತಚಲಾಯಿಸಲು ಸಾಧ್ಯವಿರುವ ಪರ್ಯಾಯ ಮಾರ್ಗಗಳ ಅನ್ವೇಷಣೆ ಎಂಬ ಹೆಸರಿನಡಿ ಸಿದ್ಧಪಡಿಸಿರುವ ವರದಿಯನ್ನು 2014ರ ಅಕ್ಟೋಬರ್‌ನಲ್ಲಿ ನ್ಯಾಯಾಲಯಕ್ಕೆ ಒಪ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News