×
Ad

ಬಾಂದ್ರಾದಲ್ಲಿ ತಲೆಎತ್ತಲಿದೆ ಅಪೂರ್ವ ಯೋಗಪಾರ್ಕ್

Update: 2017-11-10 23:42 IST

ಮುಂಬೈ, ನ.10: ಬಾಂಧ್ರಾದ ಸಮುದ್ರತಡಿಯ ಬಳಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಯೋಗಪಾರ್ಕ್ 2018ರ ಜನವರಿ 26ರ ವೇಳೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಸಂಸ್ಥೆಗಳ ಸಾಮಾಜಿಕ ಬಾಧ್ಯತೆ (ಸಿಎಸ್‌ಆರ್) ಯೋಜನೆಯ ಮೂಲಕ ನಿಧಿ ಸಂಗ್ರಹಿಸಿ 2 ಹಂತಗಳಲ್ಲಿ ಯೋಗಪಾರ್ಕ್ ನಿರ್ಮಿಸಲಾಗುವುದು ಎಂದು ಬಿಜೆಪಿಯ ಮುಂಬೈ ಘಟಕದ ಅಧ್ಯಕ್ಷ ಹಾಗೂ ಶಾಸಕ ಆಶಿಷ್ ಶೆಲರ್ ತಿಳಿಸಿದ್ದಾರೆ. ಈ ಯೋಜನೆಗಾಗಿ ಬಾಂಧ್ರಾದಲ್ಲಿ ಒಂದು ಎಕರೆ ಜಮೀನನ್ನು ಗುರುತಿಸಲಾಗಿದೆ. 1 ಕೋಟಿ ರೂ. ವೆಚ್ಚದ ಪ್ರಥಮ ಹಂತದ ಕಾಮಗಾರಿಯಲ್ಲಿ ಪಾರ್ಕ್‌ನ ಪ್ರವೇಶಸ್ಥಳದ ಗೋಡೆಗಳ ಮೇಲೆ ವಿವಿಧ ಯೋಗಾಸನಗಳ ಪೋಸ್ಟರ್ ರಚಿಸಲಾಗುತ್ತದೆ. ದ್ವಿತೀಯ ಹಂತದ ಕಾಮಗಾರಿಯಲ್ಲಿ ಯೋಗ ಆಸನಗಳ ಭಂಗಿಯನ್ನು ಶಿಲ್ಪಕೃತಿಗಳನ್ನು ರಚಿಸಲಾಗುತ್ತದೆ . ರಾಷ್ಟ್ರಧ್ವಜ ಸ್ತಂಭ, ಭಿತ್ತಿಚಿತ್ರಗಳನ್ನು ಒಳಗೊಂಡಿರುವ ಈ ಯೋಗಪಾರ್ಕ್ ‘ಬಾಂದ್ರ ಪ್ರವೇಶಸ್ಥಳ ಸುಂದರೀಕರಣ ಯೋಜನೆ’ಯ ಒಂದು ಭಾಗವಾಗಿರುತ್ತದೆ . ಈ ಬಯಲುಪ್ರದೇಶವನ್ನು ಇದುವರೆಗೆ ಕಿಡಿಗೇಡಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದರು. ಇನ್ನು ಮುಂದೆ ಈ ಸ್ಥಳ ಯೋಗ ಮಾಡಲು ಯೋಗ್ಯ ಸ್ಥಳವಾಗಲಿದೆ ಎಂದು ಎಂದು ಶೆಲರ್ ತಿಳಿಸಿದ್ದಾರೆ. ಇಲ್ಲಿರುವ ಕಾಲುದಾರಿ ಹಾಗೂ ಸುರಂಗಮಾರ್ಗಗಳಿಗೆ ಸೂಕ್ತ ದಾರಿ ದೀಪದ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.

 ಈ ಪ್ರದೇಶದಲ್ಲಿ ಸೂಕ್ತ ದಾರಿದೀಪದ ವ್ಯವಸ್ಥೆ ಮಾಡಬೇಕಿದೆ. ಸ್ಥಳೀಯರೂ ಸುಲಭವಾಗಿ ಯೋಗ ಪಾರ್ಕ್‌ಗೆ ಪ್ರವೇಶ ಪಡೆಯುವಂತಾಗಬೇಕು ಎಂದು ಬಾಂಧ್ರ ರಿಕ್ಲಮೇಷನ್ ಏರಿಯ ವಾಲಂಟಿಯರ್ಸ್ ಆರ್ಗನೈಸೇಷನ್(ಬಿಆರ್‌ಎವಿಒ) ಸದಸ್ಯೆ ಅಲ್ಕಾ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಪ್ರದೇಶದ ಗರಿಷ್ಠ ಜನತೆಗೆ ಇದರಿಂದ ಪ್ರಯೋಜನವಾಗಬೇಕು. ಪಾರ್ಕ್‌ನಲ್ಲಿ ಸಾಕಷ್ಟು ನೆರಳಿನ ಅಗತ್ಯವಿದೆ ಎಂದು ಸ್ಥಳೀಯರಾದ ವಿದ್ಯಾಧರ್ ದಾತೆ ಎಂಬವರು ತಿಳಿಸಿದ್ದಾರೆ.

 ಹೆದ್ದಾರಿ ಪಕ್ಕದಲ್ಲಿ ಯೋಗಪಾರ್ಕ್ ನಿರ್ಮಾಣಗೊಳ್ಳುವ ಕಾರಣ ಇದೊಂದು ಪ್ರತಿಷ್ಠಿತ ಸ್ಥಳವಾಗಿ ಮಾನ್ಯವಾಗಲಿದೆ. ಆದ್ದರಿಂದ ಈ ಪಾರ್ಕ್‌ಗೆ ಪ್ರವೇಶಾವಕಾಶವನ್ನು ನಿಯಮಿತಗೊಳಿಸಬೇಕು ಎಂದು ರಂಗನಾಥನ್ ಎಂಬವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News