ರಶ್ಯದ ವೇಟ್ ಲಿಫ್ಟರ್ ಅಲ್ಬೆಗೊವ್ ಅಮಾನತು

Update: 2017-11-13 18:51 GMT

ಬುಡಾಪೆಸ್ಟ್, ನ.13: ಡೋಪಿಂಗ್ ಪ್ರಕರಣಕ್ಕೆ ಸಂಬಂಧಿಸಿ ರಶ್ಯದ ವೇಟ್‌ಲಿಫ್ಟರ್ ಹಾಗೂ ಒಲಿಂಪಿಕ್ಸ್ ಪದಕ ವಿಜೇತ ರುಸ್ಲಾನ್ ಅಲ್ಬೆಗೊವ್‌ರನ್ನು ಅಮಾನತುಗೊಳಿಸಲಾಗಿದೆ.

 ನಿಷೇಧಿತ ಉದ್ದೀಪನಾ ದ್ರವ್ಯವನ್ನು ಸೇವಿಸಲು ಯತ್ನಿಸಿ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಅಲ್ಬೆಗೊವ್‌ರನ್ನು ಅಮಾನತುಗೊಳಿಸಲಾಗಿದೆ ಎಂದು ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ತಿಳಿಸಿದೆ. ಡೋಪಿಂಗ್ ಕೇಸ್‌ಗೆ ಸಂಬಂಧಿಸಿ ಅಂತಿಮ ತೀರ್ಪು ಬರುವ ತನಕ ಅಲ್ಬೆಗೊವ್‌ರನ್ನು ಅಮಾನತಿನಲ್ಲಿಡಲಾಗಿದೆ. ಅಲ್ಬೆಗೊವ್ 2012ರ ಒಲಿಂಪಿಕ್ಸ್‌ನಲ್ಲಿ ಪುರುಷರ ವೇಟ್‌ಲಿಫ್ಟಿಂಗ್‌ನ 105 ಕೆಜಿ ವಿಭಾಗದಲ್ಲಿ ಕಂಚು ಜಯಿಸಿದ್ದರು. 2012ರ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿರುವ 6 ರಶ್ಯದ ಲಿಫ್ಟರ್‌ಗಳ ಪೈಕಿ ಐವರನ್ನು ಈಗಾಗಲೇ ಅನರ್ಹಗೊಳಿಸಲಾಗಿದೆ. ಪದೇ ಪದೇ ಡೋಪಿಂಗ್ ಪ್ರಕರಣದಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ರಶ್ಯದ ವೇಟ್‌ಲಿಫ್ಟಿಂಗ್ ತಂಡವನ್ನು ಕಳೆದ ವರ್ಷದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಂತೆ ನಿಷೇಧಿಸಲಾಗಿತ್ತು. 2016ರ ಒಲಿಂಪಿಕ್ಸ್ ನಲ್ಲಿ ಡೋಪಿಂಗ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಒಂದು ವರ್ಷ ಕಾಲ ಅಂತಾರಾಷ್ಟ್ರೀಯ ಸ್ಪರ್ಧೆಗಳಿಂದ ನಿಷೇಧಿಸಲ್ಪಟ್ಟ 9 ದೇಶಗಳಲ್ಲಿ ರಶ್ಯ ಕೂಡ ಒಂದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News