ರಸಗುಲ್ಲಾ ಯುದ್ಧವನ್ನು ಗೆದ್ದೇ ಬಿಟ್ಟ ಪಶ್ಚಿಮ ಬಂಗಾಳ!

Update: 2017-11-14 10:07 GMT

ಹೊಸದಿಲ್ಲಿ, ನ.14: ಕಳೆದೆರಡು ವರ್ಷಗಳಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ನಡುವೆ ನಡೆಯುತ್ತಿದ್ದ ರಸಗುಲ್ಲಾ ಯುದ್ಧದಲ್ಲಿ ಇಂದು ಪಶ್ಚಿಮ ಬಂಗಾಳ ಕೊನೆಗೂ ಜಯ ಸಾಧಿಸಿದೆ.

ಎರಡೂ ರಾಜ್ಯಗಳು ಈ ಸಿಹಿ ತಿಂಡಿ ತಮ್ಮ ರಾಜ್ಯದಲ್ಲಿ ಆವಿಷ್ಕರಿಸಲ್ಪಟ್ಟಿತ್ತು ಎಂದು ಹೇಳಿಕೊಂಡಿದ್ದರೆ ಅಂತಿಮವಾಗಿ ಪಶ್ಚಿಮ ಬಂಗಾಳ ಜಿಯಾಗ್ರಿಫಿಕಲ್ ಇಂಡಿಕೇಶನ್ಸ್ ಆಫ್ ಗುಡ್ಸ್ ರಿಜಿಸ್ಟ್ರೇಶನ್, ಜಿಐ ಟ್ಯಾಗ್ ಅನ್ನು ರಸಗುಲ್ಲಾ ಸಿಹಿತಿಂಡಿಗಾಗಿ ಪಡೆದಿದೆ. ಇದರಿಂದಾಗಿ ಪಶ್ಚಿಮ ಬಂಗಾಳ ಅಧಿಕೃತವಾಗಿ ರಸಗುಲ್ಲಾ ತನ್ನ ಸಿಹಿತಿಂಡಿ ಎಂದು ಹೇಳಿಕೊಳ್ಳುವಂತಾಗಿದೆ.

ಎರಡೂ ರಾಜ್ಯಗಳ ನಡುವೆ ರಸಗುಲ್ಲಾ ಯುದ್ಧ ಸೆಪ್ಟೆಂಬರ್ 2015ರಲ್ಲಿ ಆರಂಭವಾಗಿತ್ತು. ಉಲ್ಟೊ ರಥ ಎಂಬ ಹಬ್ಬ ಆಚರಣೆಯ ದಿನವನ್ನು ಒಡಿಶಾ ಸರಕಾರ 'ರಸಗುಲ್ಲಾ ದಿವಸ್' ಎಂದು ಆಚರಿಸಲು ಆರಂಭಿಸಿದ್ದೇ ಈ ಯುದ್ಧಕ್ಕೆ ಹೇತುವಾಗಿತ್ತು. ಒಡಿಶಾದ ವಾದದಂತೆ ಪುರಾಣದಲ್ಲಿ ಒಮ್ಮೆ ತನ್ನನ್ನು ರಥಯಾತ್ರೆಯ ಸಂದರ್ಭ ಒಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದ ತನ್ನ ಗಂಡ ಜಗನ್ನಾಥನ ಮೇಲೆ ಲಕ್ಷ್ಮಿಗೆ ಕೋಪ ಉಂಟಾಗಿ ಆತನನ್ನು ಮನೆಯೊಳಗೆ ಪ್ರವೇಶಿಸಲು ಅನುಮತಿ ನಿರಾಕರಿಸಿದ್ದಳು. ಆಕೆಯನ್ನು ಸಂತೋಷ ಪಡಿಸಲು ಜಗನ್ನಾಥ ಆಕೆಗೆ ಒಂದು ತಟ್ಟೆ ತುಂಬಾ ರಸಗುಲ್ಲಾಗಳನ್ನು ನೀಡಿದ್ದನೆಂದು ಪುರಾಣದಲ್ಲಿ ಹೇಳಲಾಗಿದೆ ಎಂದು ಒಡಿಶಾ ವಾದಿಸಿತ್ತು.

ಆದರೆ ಈ ವಾದವನ್ನು ಒಪ್ಪದ ಪಶ್ಚಿಮ ಬಂಗಾಳ ರಸಗುಲ್ಲಾವನ್ನು ಹುಳಿಯಾದ ಹಾಲಿನಿಂದ ಮಾಡಲಾಗುವುದರಿಂದ ಅದನ್ನು ಅಶುದ್ಧವೆಂದು ಪರಿಗಣಿಸಲಾಗುವುದಲ್ಲದೆ ಅದನ್ನು ದೇವರುಗಳಿಗೆ ಯಾವತ್ತೂ ಅರ್ಪಿಸಲಾಗುವುದಿಲ್ಲ ಎಂದು ಹೇಳಿತ್ತು. ಅಲ್ಲದೆ ಜಗನ್ನಾಥ ರಸಗುಲ್ಲಾಗಳನ್ನು ಲಕ್ಷ್ಮಿಯ ಕೋಪ ತಣಿಸಲು ನೀಡಿದ್ದನೆಂಬುದನ್ನು ಒಪ್ಪಲು ತಾನು ಸಿದ್ಧವಿಲ್ಲ ಎಂದೂ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News