‘ಹಾರ್ದಿಕ್‌ರಲ್ಲಿ ಸರ್ದಾರ್ ಪಟೇಲರ ಡಿಎನ್‌ಎ ಇದೆ’ ಎಂಬ ಕಾಂಗ್ರೆಸ್ ನಾಯಕನ ಹೇಳಿಕೆಗೆ ಬಿಜೆಪಿ ಟೀಕೆ

Update: 2017-11-14 12:55 GMT

ಅಹ್ಮದಾಬಾದ್,ನ.14: ಪಾಟಿದಾರ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಡಿಎನ್‌ಎ ಹೊಂದಿದ್ದಾರೆ ಎಂಬ ಹೇಳಿಕೆಯನ್ನು ನೀಡುವ ಮೂಲಕ ಗುಜರಾತ್‌ನ ಹಿರಿಯ ಕಾಂಗ್ರೆಸ್ ನಾಯಕ ಶಕ್ತಿಸಿನ್ಹ ಗೋಹಿಲ್ ಅವರು ವಿವಾದವೊಂದನ್ನು ಹುಟ್ಟುಹಾಕಿದ್ದು, ಇದನ್ನು ಟೀಕಿಸಿರುವ ಬಿಜೆಪಿಯು ಇಂತಹ ಹೋಲಿಕೆಯು ಸರ್ದಾರ್‌ಗೆ ಮಾಡಿರುವ ಅವಮಾನವಾಗಿದೆ ಎಂದು ಹೇಳಿದೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೋಹಿಲ್ ಅವರು, ರಾಜ್ಯದಲ್ಲಿ ಆಡಳಿತ ಬಿಜೆಪಿಯನ್ನು ಎದುರು ಹಾಕಿಕೊಳ್ಳುವ ಹಾರ್ದಿಕ್ ಅವರ ದೃಢವಾದ ಮತ್ತು ಪ್ರಾಮಾಣಿಕವಾದ ನಿಲುವು ಅವರು ಬ್ರಿಟಿಷ್‌ರಿಂದ ದಮನಿಸಲು ಸಾಧ್ಯವಾಗದಿದ್ದ ಸರ್ದಾರ್ ಪಟೇಲ್ ಅವರ ಡಿಎನ್‌ಎ ಹೊಂದಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ ಎಂದು ಹೇಳಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದ ಹಾರ್ದಿಕ್ ಅವರದ್ದೆನ್ನಲಾದ ಲೈಂಗಿಕ ದೃಶ್ಯದ ತುಣುಕಿನ ಕುರಿತು ಪ್ರತಿಕ್ರಿಯಿಸುತ್ತಿದ್ದ ಗೋಹಿಲ್, ಹಾರ್ದಿಕ್ ತನ್ನ ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ದೃಢವಾಗಿ ಮತ್ತು ಪ್ರಾಮಾಣಿಕತೆಯಿಂದ ಹೋರಾಡುತ್ತಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕೋಟ್ಯಂತರ ರೂಪಾಯಿಗಳೂ ಅವರನ್ನು ಖರೀದಿಸಲು ಸಾಧ್ಯವಾಗಿಲ್ಲ, ಅವರನ್ನು ತಿಂಗಳುಗಟ್ಟಲೆ ಜೈಲಿಗೆ ಹಾಕಿದರೂ ದಮನಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದರು.

ಗೋಹಿಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮನ್ಸುಖ್ ಮಾಂಡವೀಯ ಅವರು, ನಾಚಿಕೆಗೇಡಿನ ಕೃತ್ಯದಲ್ಲಿ ಸಿಕ್ಕಿಹಾಕಿಕೊಂಡಿರುವ ಹಾರ್ದಿಕರನ್ನು ಪಟೇಲ್‌ಗೆ ಹೋಲಿಸಿರುವುದು ಅವರಿಗೆ, ಗುಜರಾತ್‌ಗೆ ಮತ್ತು ದೇಶಕ್ಕೆ ಮಾಡಿರುವ ಅವಮಾನ ವಾಗಿದೆ ಎಂದು ಹೇಳಿದರು.

ಗೋಹಿಲ್ ಹೇಳಿಕೆಯನ್ನು ತಿರಸ್ಕರಿಸಿರುವ ಸರ್ದಾರ್ ಪಟೇಲ್ ಅವರ ಮರಿಮೊಮ್ಮಗ ಸಮೀರ ಪಟೇಲ್ ಅವರು, ಹಾರ್ದಿಕ್ ಪಟೇಲರ ಡಿಎನ್‌ಎ ಹೊಂದಿದ್ದಾರೆ ಎಂದು ಹೇಳುವುದು ಮೂರ್ಖತನವಾಗುತ್ತದೆ. ಸರ್ದಾರ್ ಅವರು ದೇಶದ ಏಕತೆಗಾಗಿ ಶ್ರಮಿಸಿದ್ದರೆ ಹಾರ್ದಿಕ್ ದೇಶವನ್ನು ಒಡೆಯುತ್ತಿದ್ದಾರೆ ಎಂದಿದ್ದಾರೆ.

ಗುಜರಾತ್‌ನ ಬಿಜೆಪಿ ಸರಕಾರದ ವಿರುದ್ಧ ತೊಡೆ ತಟ್ಟಿರುವ ಹಾರ್ದಿಕ್ ಅವರ ಹೋಲಿಕೆಯುಳ್ಳ ವ್ಯಕ್ತಿಯೋರ್ವ ಮಹಿಳೆಯೊಂದಿಗಿದ್ದ ಸೆಕ್ಸ್ ಕ್ಲಿಪ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಅವರು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

ಗುಜರಾತ್‌ನಲ್ಲಿ ಕಾಂಗ್ರೆಸ್ ಗೆದ್ದರೆ ಅದು ಪಟೇಲ ಸಮುದಾಯಕ್ಕೆ ಮೀಸಲಾತಿಯನ್ನು ಕಲ್ಪಿಸಲು ಮೂರು ಪರ್ಯಾಯಗಳನ್ನು ಮುಂದಿಟ್ಟಿದ್ದು, ಇದು ತನಗೆ ತೃಪ್ತಿಯನ್ನುಂಟು ಮಾಡಿದೆ ಮತ್ತು ಈ ಬಗ್ಗೆ ಸಮುದಾಯವು ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಹಾರ್ದಿಕ್ ಸೋಮವಾರ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News