ಐಟಿ ದಾಳಿಗಳು ರಾಜಕೀಯ ಪ್ರೇರಿತವೆಂಬಂತೆ ಕಾಣುತ್ತಿಲ್ಲ: ಶಶಿಕಲಾ ಸಂಬಂಧಿ

Update: 2017-11-14 12:59 GMT

ಚೆನ್ನೈ,ನ.14: ತಮ್ಮ ಕುಟುಂಬ ಸದಸ್ಯರು ಮತ್ತು ಸಹವರ್ತಿಗಳ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿಗಳು ರಾಜಕೀಯ ಪ್ರೇರಿತವೆಂಬಂತೆ ಕಂಡು ಬರುತ್ತಿಲ್ಲ ಎಂದು ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿರುವ ವಿ.ಕೆ.ಶಶಿಕಲಾ ಅವರ ಸಂಬಂಧಿ ಮತ್ತು ಜಯಾ ಟಿವಿಯ ಮುಖ್ಯಸ್ಥ ವಿವೇಕ ಜಯರಾಮನ್ ಅವರು ಮಂಗಳವಾರ ಇಲ್ಲಿ ಹೇಳಿದರು.

ಐಟಿ ಅಧಿಕಾರಿಗಳು ಕಳೆದ ಐದು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸಿರುವ ಸ್ಥಳಗಳಲ್ಲಿ ಜಯಾ ಟಿವಿ ಕಚೇರಿಯೂ ಸೇರಿದೆ. ಶಶಿಕಲಾ ಕುಟುಂಬ ಸದಸ್ಯರು ಮತ್ತು ಅವರ ಸಹವರ್ತಿಗಳ ವಿರುದ್ಧ ನಡೆದ ಶೋಧ ಕಾರ್ಯಾಚರಣೆಗಳಲ್ಲಿ ಐಟಿ ಅಧಿಕಾರಿಗಳು 1,430 ಕೋ.ರೂ.ಗಳ ಅಘೋಷಿತ ಆದಾಯವನ್ನು ಪತ್ತೆ ಹಚ್ಚಿದ್ದಾರೆ.

ತನ್ಮಧ್ಯೆ ಐಟಿ ಅಧಿಕಾರಿಗಳು ಮಂಗಳವಾರ ನೀಲಗಿರಿ ಜಿಲ್ಲೆಯ ಕರ್ಝನ್‌ನಲ್ಲಿರುವ ಗ್ರೀನ್ ಟೀ ಎಸ್ಟೇಟ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಮತ್ತು ಅವರ ಆಪ್ತ ಸ್ನೇಹಿತೆ ಶಶಿಕಲಾ ಐದು ವರ್ಷಗಳ ಹಿಂದೆ ಈ ಎಸ್ಟೇಟ್‌ನ್ನು ಖರೀದಿಸಿದ್ದರು.

ಜಾಝ್ ಸಿನೆಮಾಸ್ ಸೇರಿದಂತೆ ತನ್ನ ನೇತೃತ್ವದ ಕಂಪನಿಗಳ ಬಗ್ಗೆ ಹಾಗೂ ತಮ್ಮ ಮದುವೆಯ ಸಂದರ್ಭ ತನ್ನ ಪತ್ನಿ ಧರಿಸಿದ್ದ ಆಭರಣಗಳ ಬಗ್ಗೆಯೂ ಐಟಿ ಅಧಿಕಾರಿಗಳು ತನ್ನನ್ನು ಪ್ರಶ್ನಿಸಿದ್ದು, ತಾನು ಅವರಿಗೆ ವಿವರವಾದ ಉತ್ತರಗಳನ್ನು ನೀಡಿರುವುದಾಗಿ ಜಯರಾಮನ್ ತಿಳಿಸಿದರು.

 ಐಟಿ ದಾಳಿಗಳು ರಾಜಕೀಯ ಪ್ರೇರಿತವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು, ತನಗೇನೂ ಹಾಗೆ ಕಾಣುತ್ತಿಲ್ಲ. ಅವರು(ಐಟಿ ಅಧಿಕಾರಿಗಳು) ತಮ್ಮ ಕರ್ತವ್ಯ ಮಾಡಿದ್ದಾರೆ. ನಾವು ಅವರಿಗೆ ಉತ್ತರಿಸಬೇಕಾಗಿದೆ. ದೇಶದ ಪ್ರತಿಯೋರ್ವ ಪ್ರಜೆಯು ಆದಾಯ ತೆರಿಗೆಯನ್ನು ಪಾವತಿಸಬೇಕು. ಇದು ತನ್ನ ಸ್ಪಷ್ಟವಾದ ನಿಲುವು ಎಂದು ಉತ್ತರಿಸಿದರು.

ಐಟಿ ಅಧಿಕಾರಿಗಳು ಸೋಮವಾರ ಜಯರಾಮನ್ ಅವರನ್ನು ವಿಚಾರಣೆಗೊಳಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News