ಕೇರಳ: ಟಿಡಿಬಿ ಅಧಿಕಾರಾವಧಿ ಕಡಿತ ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

Update: 2017-11-14 14:02 GMT

ತಿರುವನಂತಪುರ,ನ.14: ಪ್ರಸಿದ್ಧ ಯಾತ್ರಾಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಳ ಸೇರಿದಂತೆ ರಾಜ್ಯದಲ್ಲಿನ ಸುಮಾರು 1240 ದೇವಸ್ಥಾನಗಳ ಆಡಳಿತವನ್ನು ನಿರ್ವಹಿಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ)ಯ ಅಧಿಕಾರಾವಧಿಯನ್ನು ಈಗಿನ ಮೂರು ವರ್ಷಗಳಿಂದ ಎರಡು ವರ್ಷಗಳಿಗೆ ತಗ್ಗಿಸುವ ಅಧ್ಯಾದೇಶಕ್ಕೆ ಕೇರಳ ರಾಜ್ಯಪಾಲ ಪಿ.ಸದಾಶಿವಂ ಅವರು ಮಂಗಳವಾರ ಅಂಕಿತ ಹಾಕಿದ್ದಾರೆ. ಇದಕ್ಕೂ ಮುನ್ನ ಅವರು ಕೇಳಿದ್ದ ಸ್ಪಷ್ಟನೆಗಳನ್ನು ರಾಜ್ಯದ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರಕಾರವು ಒದಗಿಸಿತ್ತು.

 ಸರಕಾರದ ಕ್ರಮವು ರಾಜಕೀಯ ಪ್ರೇರಿತವಾಗಿರುವುದರಿಂದ ಅಧ್ಯಾದೇಶಕ್ಕೆ ಸಹಿ ಹಾಕದಂತೆ ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ರಾಜ್ಯಪಾಲರು ತಿರುವಾಂಕೂರು ದೇವಸ್ವಂ ಮಂಡಳಿ ಕಾಯ್ದೆಯ ವಿವರಗಳು ಮತ್ತು ಟಿಡಿಬಿಯ ಅಧಿಕಾರಾವಧಿಯನ್ನು ಮೊಟಕುಗೊಳಿಸಲು ಕಾರಣಗಳನ್ನು ಒದಗಿಸುವಂತೆ ಸೋಮವಾರ ಸರಕಾರಕ್ಕೆ ಸೂಚಿಸಿದ್ದರು.

ಟಿಡಿಬಿಯ ಅಧಿಕಾರಾವಧಿಯನ್ನು ತಗ್ಗಿಸಿ ಅಧ್ಯಾದೇಶವನ್ನು ಹೊರಡಿಸಲು ನ.9ರಂದು ನಡೆದಿದ್ದ ವಿಶೇಷ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News