ಆಲ್ವಾರ್ ಹತ್ಯೆ: ಇಬ್ಬರ ಬಂಧನ,ಖಾನ್ ಮತ್ತು ಇತರ ಇಬ್ಬರ ವಿರುದ್ಧ ಗೋ ಕಳ್ಳಸಾಗಣೆ ಪ್ರಕರಣ

Update: 2017-11-14 14:08 GMT

ಜೈಪುರ,ನ,14:ಆಲ್ವಾರ್ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಣೆ ಆರೋಪದಲ್ಲಿ ಉಮರ್ ಖಾನ್(35) ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿರುವ ಪೊಲೀಸರು, ಖಾನ್ ಮತ್ತು ಆತನ ಸಹಚರರಾದ ತಾಹಿರ್ ಖಾನ್ ಮತ್ತು ಜಾವೇದ್ ವಿರುದ್ಧ ಗೋ ಕಳ್ಳಸಾಗಾಣಿಕೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಮಾರ್ಕಾಪುರ ಪ್ರದೇಶದ ನಿವಾಸಿಗಳಾದ ಭಗವಾನ ಸಿಂಗ್ ಗುರ್ಜರ್ ಅಲಿಯಾಸ್ ಕಾಲಾ ಮತ್ತು ರಾಮವೀರ ಗುರ್ಜರ್ ಅವರನ್ನು ಸೋಮವಾರ ತಡಸಂಜೆ ಬಂಧಿಸಲಾಗಿದೆ ಎಂದು ಆಲ್ವಾರ್ ಜಿಲ್ಲಾ ಎಸ್‌ಪಿ ರಾಹುಲ್ ಪ್ರಕಾಶ ತಿಳಿಸಿದರು.

ಬಂಧಿತರನ್ನು ವಿಚಾರಣೆಗೊಳಪಡಿಸಲಾಗಿದೆ ಮತ್ತು ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದರು.

ಆರೋಪಿಗಳು ಲೂಟಿಕೋರರೇ ಅಥವಾ ಗೋರಕ್ಷಕರೇ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು, ಪೊಲೀಸ್ ಶಬ್ದಕೋಶದಲ್ಲಿ ಗೋರಕ್ಷಕರಂತಹ ಶಬ್ದವಿಲ್ಲ ಎಂದು ಉತ್ತರಿಸಿದರು. ಇದೊಂದು ಕೊಲೆ ಪ್ರಕರಣವಾಗಿದೆ ಮತ್ತು ಆ ನಿಟ್ಟಿನಲ್ಲಿ ನಾವು ತನಿಖೆ ನಡೆಸುತ್ತಿದ್ದೇವೆ ಎಂದರು.

ಉಮರ್ ಖಾನ್ ಮೃತದೇಹವು ನ.11ರಂದು ರಾಮಗಡದಲ್ಲಿ ರೈಲ್ವೆ ಹಳಿಗಳ ಬಳಿ ಪತ್ತೆಯಾಗಿತ್ತು. ಮುನ್ನಾ ದಿನ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಗೋರಕ್ಷರು ಗುಂಡಿಟ್ಟು ಹತ್ಯೆಗೈದಿದ್ದಾರೆ ಎಂದು ಖಾನ್ ಕುಟುಂಬದ ಸದಸ್ಯರು ಮತ್ತು ಮಾನವ ಹಕ್ಕು ಕಾರ್ಯಕರ್ತರು ಆರೋಪಿಸಿದ್ದಾರೆ.

ಆಲ್ವಾರ್‌ನಲ್ಲಿ ಗೋರಕ್ಷಕರ ಗುಂಪಿನಿಂದ ಹರ್ಯಾಣದ ಹೈನುಗಾರ ಪೆಹ್ಲು ಖಾನ್ ಹತ್ಯೆಯ ನೆನಪು ಇನ್ನೂ ಹಸಿರಾಗಿರುವಾಗಲೇ ನಡೆದಿರುವ ಈ ಘಟನೆ ಆಕ್ರೋಶವನ್ನು ಸೃಷ್ಟಿಸಿದೆ.

ಜಾನುವಾರುಗಳಿದ್ದ ಪಿಕ್-ಅಪ್ ವ್ಯಾನ್ ಗೋವಿಂದಗಡದಲ್ಲಿ ಪತ್ತೆಯಾಗಿದ್ದು, ಇದು ಗೋ ಕಳ್ಳಸಾಗಾಣಿಕೆಯ ಸ್ಪಷ್ಟ ಪ್ರಕರಣವಾಗಿದೆ. ಖಾನ್ ಹತ್ಯೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ ಎಂದು ಪ್ರಕಾಶ ತಿಳಿಸಿದರು.

ತನ್ಮಧ್ಯೆ ಖಾನ್ ಮೃತದೇಹದ ಪೋಸ್ಟ್ ಮಾರ್ಟಮ್ ಮಂಗಳವಾರವೂ ನಡೆಯಲಿಲ್ಲ. ಹಲವಾರು ಪ್ರಯತ್ನಗಳ ಬಳಿಕವೂ ಖಾನ್ ಕುಟುಂಬದ ಸದಸ್ಯರು ಹಾಜರಾಗದ ಕಾರಣ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿಲ್ಲ ಎಂದು ಜೈಪುರದ ಎಸ್‌ಎಂಎಸ್ ಆಸ್ಪತ್ರೆಯ ಅಧೀಕ್ಷಕ ಡಾ.ಡಿ.ಎಸ್.ಮೀನಾ ತಿಳಿಸಿದರು.

ಉಮರ್ ಸತ್ತ ರೀತಿಯಲ್ಲಿ ಯಾರೂ ಸಾಯಬಾರದು. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳನ್ನು ಭೇಟಿಯಾಗಿ ಪ್ರಕರಣದಲ್ಲಿ ಸೂಕ್ತ ತನಿಖೆಗಾಗಿ ನಾವು ಆಗ್ರಹಿಸಿದ್ದೇವೆ ಎಂದು ಮೃತ ಖಾನ್ ಚಿಕ್ಕಪ್ಪ ರಝಾಕ್ ಖಾನ್ ಹೇಳಿದರು.

ಸರಕಾರವು ಖಾನ್ ಹೆತ್ತವರಿಗೆ 50 ಲ.ರೂ. ಮತ್ತು ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿರುವ ತಾಹಿರ್ ಖಾನ್ ಕುಟುಂಬಕ್ಕೆ 25 ಲ.ರೂ.ಪರಿಹಾರ ನೀಡಬೇಕು ಎಂದು ಅವರು ಹೇಳಿದರು.

ತಾವು ಊರಿಗೆ ಮರಳುತ್ತಿರುವಾಗ 6-8 ಜನರ ಗುಂಪು ತಮ್ಮ ಮೇಲೆ ದಾಳಿ ನಡೆಸಿ ಗುಂಡುಗಳನ್ನು ಹಾರಿಸಿತ್ತು ಎಂದು ತಾಹಿರ್ ಖಾನ್ ಮಾಹಿತಿ ನೀಡಿರುವುದಾಗಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News