ಐಎಫ್‌ಎಫ್‌ಐ ಮುಖ್ಯಸ್ಥ ಸುಜೋಯ್ ಘೋಷ್ ರಾಜಿನಾಮೆ

Update: 2017-11-14 14:16 GMT

ಮುಂಬೈ, ನ.14: ಸನಲ್ ಕುಮಾರ್ ಸಸಿಧರನ್ ನಿರ್ದೇಶನದ ಎಸ್ ದುರ್ಗಾ ಮತ್ತು ರವಿ ಜಾಧವ್ ಅವರ ನೂಡ್ ಸಿನಿಮಾಗಳನ್ನು 48ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಿಂದ ಕೈಬಿಟ್ಟಿರುರುವುದರಿಂದ ಅಸಮಾಧಾನಗೊಂಡಿರುವ ಚಿತ್ರೋತ್ಸವದ ಮುಖ್ಯ ತೀರ್ಪುಗಾರ ಸುಜೋಯ್ ಘೋಷ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ತನ್ನ ರಾಜಿನಾಮೆಯ ಬಗ್ಗೆ ನ್ಯೂಸ್ 18 ಸುದ್ದಿ ಮಾಧ್ಯಕ್ಕೆ ಮಾಹಿತಿ ನೀಡಿರುವ ಘೋಷ್ ಈ ಬಗ್ಗೆ ಹೆಚ್ಚಿನ ವಿವರಣೆ ನೀಡಲು ನಿರಾಕರಿಸಿದ್ದಾರೆ. ಘೋಷ್, ಕಹಾನಿ, ಅಹಲ್ಯ, ಕಹಾನಿ 2: ದುರ್ಗಾ ರಾಣಿ ಸಿಂಗ್ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ನವೆಂಬರ್ 9ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬಿಡುಗಡೆ ಮಾಡಿದ ಅಂತಿಮ ಪಟ್ಟಿಯಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ 26 ಚಲನಚಿತ್ರಗಳು ಮತ್ತು 16 ಇತರ ಸಿನಿಮಾಗಳನ್ನು ಹೆಸರಿಸಲಾಗಿತ್ತು. ಈ ಚಿತ್ರೋತ್ಸವವು ನವೆಂಬರ್ 20ರಿಂದ 28ರ ವರೆಗೆ ಗೋವಾದಲ್ಲಿ ನಡೆಯಲಿದೆ.

ಚಿತ್ರಗಳ ಪಟ್ಟಿಯು ಹೊರಬೀಳುತ್ತಿದ್ದಂತೆ ತೀರ್ಪುಗಾರ ಮಂಡಳಿಯ ಸದಸ್ಯರಾಗಿರುವ ಅಪೂರ್ವ ಅಸ್ರಾನಿ, ಸೆಕ್ಸಿ ದುರ್ಗಾ ಮತ್ತು ನೂಡ್ ಆಧುನಿಕ ಸಿನಿಮಾಗಳ ಪೈಕಿ ಅತ್ಯುತ್ತಮ ಸಿನಿಮಾಗಳಾಗಿದ್ದವು. ಅವೆರಡೂ ಕೂಡಾ ಇಂದಿನ ಭಾರತದ ಅತ್ಯಂತ ಶಕ್ತಿಶಾಲಿ ಮತ್ತು ಸಮರ್ಥ ಮಹಿಳೆಯ ರೂಪವನ್ನು ನಮ್ಮ ಮುಂದಿಡುತ್ತದೆ ಎಂದು ಟ್ವೀಟ್ ಮಾಡಿದ್ದರು.

 ನೂಡ್ ಮತ್ತು ಎಸ್ ದುರ್ಗಾ ಸಿನಿಮಾವನ್ನು ಘೋಷ್ ನೇತೃತ್ವದ 13 ಸದಸ್ಯರ ತೀರ್ಪುಗಾರರ ಮಂಡಳಿಯು ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆ ಮಾಡಿತ್ತು ಆದರೆ ಅದನ್ನು ನಂತರ ಸಚಿವಾಲಯವು ಕೈಬಿಟ್ಟಿತ್ತು ಎಂದು ಅಸ್ರಾನಿ ತಿಳಿಸಿದ್ದಾರೆ.

ರವಿ ನಿರ್ದೇಶನದ ನೂಡ್ ಸಿನಿಮಾ ಮುಂಬೈಯಂಥಾ ನಗರದಲ್ಲಿ ಮಹಿಳೆಯೊಬ್ಬಳು ನಗ್ನ ರೂಪದರ್ಶಿಯಾಗಿ ಹೇಗೆ ಸವಾಲುಗಳನ್ನು ಎದುರಿಸುತ್ತಾಳೆ ಎಂಬುದನ್ನು ತೋರಿಸಿದರೆ ಮಹಿಳೆಯೊಬ್ಬಳು ತನ್ನ ಮಿತಿಗಳಿಂದ ಆಚೆಗೆ ಬಂದಾಗ ಯಾವೆಲ್ಲಾ ಭಯಾನಕ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಸಸಿಧರನ್ ನಿರ್ದೇಶನದ ಎಸ್ ದುರ್ಗಾದಲ್ಲಿ ತೋರಿಸಲಾಗಿದೆ.

ಈ ಕುರಿತು ನ್ಯೂಸ್ 18 ಜೊತೆ ಮಾತನಾಡಿದ ರವಿ, ನಾನು ನನ್ನ ಸಿನಿಮಾವನ್ನು ಆಯ್ಕೆ ಮಾಡಲಾಗಿದೆ ಎಂದು ಭಾವಿಸಿದ್ದೆ. ಆದರೆ ಬೆಳಿಗ್ಗೆ ಪತ್ರಿಕೆಯನ್ನು ಓದಿದಾಗ ನನಗೆ ಬಹಳ ಬೇಸರವಾಯಿತು. ಯಾಕೆಂದರೆ ಒಮ್ಮೆ ತೀರ್ಪುಗಾರರು ತೀರ್ಮಾನಿಸಿದರೆ ಅದೇ ಅಂತಿಮವೆಂದು ನಾನು ಭಾವಿಸುತ್ತೇನೆ. ಅದರ ನಂತರ ಸಚಿವಾಲಯವು ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆ ಎಂದಾದರೆ ಸರಿ ಆದರೆ ಅದು ಕನಿಷ್ಟ ಆಯ್ಕೆ ಮಂಡಳಿಗಾದರೂ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಇನ್ನೊಂದೆಡೆ, ನಾನು ಇದನ್ನು ನಿರೀಕ್ಷಿಸಿದೆ. ಅವರಿಗೆ ನನ್ನ ಸಿನಿಮಾದ ಹೆಸರಿನ ಬಗ್ಗೆ ಆಕ್ಷೇಪವಿತ್ತು. ಅದನ್ನು ನಾನು ಎಸ್ ದುರ್ಗಾ ಎಂದು ಬದಲಾಯಿಸಿದೆ. ಅಲ್ಲಿಗೆ ಈ ವಿವಾದ ಕೊನೆಯಾಗಬೇಕಿತ್ತು. ಇನ್ಯಾಕೆ ಅವರು ಅದನ್ನು ಎಳೆಯುತ್ತಿದ್ದಾರೆ? ಮುಖ್ಯವಾಗಿ ಅವರಿಗೆ ನನ್ನ ಸಿನಿಮಾದ ಕತೆಯ ಬಗ್ಗೆ ಆಕ್ಷೇಪವಿದೆ ಎಂದು ಸಸಿಧರನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News