ಜಾತ್ಯತೀತ ಪದ ಅತಿ ದೊಡ್ಡ ಸುಳ್ಳು: ಮುಖ್ಯಮಂತ್ರಿ ಆದಿತ್ಯನಾಥ್

Update: 2017-11-14 16:21 GMT

 ಲಕ್ನೋ, ನ. 14: ಭಾರತ ಸ್ವಾತಂತ್ರ ಗಳಿಸಿದ ಬಳಿಕ ಬಳಸಲಾದ ಜಾತ್ಯತೀತ ಪದ ಅತಿ ದೊಡ್ಡ ಸುಳ್ಳು ಎಂದು ಹೇಳಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಈ ಪದ ಬಳಸುವ ವ್ಯಕ್ತಿ ಕ್ಷಮೆ ಕೋರಬೇಕು. ಯಾವುದೇ ವ್ಯವಸ್ಥೆ ಜಾತ್ಯತೀತವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.

 ಛತ್ತೀಸ್‌ಗಡ, ರಾಯಪುರದಲ್ಲಿ ದೈನಿಕ ಜಾಗರಣ್ ಗುಂಪು ಮಂಗಳವಾರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಆದಿತ್ಯನಾಥ್ ಕೋಮುವಾದ ಹಾಗೂ ಜಾತ್ಯತೀತ ವಾದಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.

 ಸ್ವಾತಂತ್ರದ ಬಳಿಕ ಭಾರತದಲ್ಲಿ ಬಳಕೆಯಾಗುತ್ತಿರುವ ಜಾತ್ಯತೀತ ಎಂಬ ಪದ ಅತಿ ದೊಡ್ಡ ಸುಳ್ಳು ಎಂಬುದು ನನ್ನ ಭಾವನೆ. ಈ ಪದದ ಹುಟ್ಟಿಗೆ ಕಾರಣರಾದವರು ಹಾಗೂ ಇದನ್ನು ಬಳಸುತ್ತಿರುವವರು ಕ್ಷಮೆ ಕೋರಬೇಕು ಎಂದು ಅವರು ಹೇಳಿದರು.

 ಇದಕ್ಕಿಂತ ಮೊದಲು ಬಲ್ಬೀರ್ ಸಿಂಗ್ ಜುನೇಜಾ ಒಳಾಂಗಣ ಕ್ರೀಡಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜನರ ಭಾವನೆಗಳೊಂದಿಗೆ ಆಟವಾಡುತ್ತಿದೆ. ಸ್ವಹಿತಾಸಕ್ತಿಗಾಗಿ ಜನರನ್ನು ಜಾತಿ, ಧರ್ಮ ಹಾಗೂ ಭಾಷೆಯ ಆಧಾರದಲ್ಲಿ ವಿಭಜಿಸುತ್ತಿದೆ ಎಂದರು.

ರಾಜಕೀಯ ಲಾಭಕ್ಕಾಗಿ ತುಷ್ಟೀಕರಣದ ರಾಜಕೀಯವನ್ನು ಕಾಂಗ್ರೆಸ್ ಅನುಸರಿಸುತ್ತಿದೆ ಹಾಗೂ ಭಯೋತ್ಪಾದನೆ, ನಕ್ಸಲೀಯತೆ, ಪ್ರತ್ಯೇಕತಾವಾದಕ್ಕೆ ಕಾರಣವಾಗುತ್ತಿದೆ. ಈಗ ದೇಶ ಇದಕ್ಕಾಗಿ ಬೆಲೆ ತೆರುತ್ತಿದೆ ಎಂದು ಅವರು ಹೇಳಿದರು.

 ಆದಿತ್ಯನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್, ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರವನ್ನು ಆದಿತ್ಯನಾಥ್ ರಾಮರಾಜ್ಯಕ್ಕೆ ಹೋಲಿಸುತ್ತಿರುವುದು ಅತೀ ದೊಡ್ಡ ಸುಳ್ಳು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News