ಮಕ್ಕಳಿಗೆ ಸೋಂಕಿತ ಶ್ವಾಸಕೋಶ ನೀಡುತ್ತೀರಾ ?:ಎನ್‌ಜಿಟಿ

Update: 2017-11-14 16:34 GMT

ಹೊಸದಿಲ್ಲಿ, ನ. 14: ರಾಷ್ಟ್ರ ರಾಜಧಾನಿಯಲ್ಲಿ ಸಮ-ಬೆಸ ಸಂಚಾರ ವ್ಯವಸ್ಥೆ ಅನುಷ್ಠಾನಿಸಲು ದಿಲ್ಲಿ ಸರಕಾರ ಕೋರಿದ ವಿನಾಯತಿ ನಿರಾಕರಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ದಿಲ್ಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯಕ್ಕೆ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ ಹಾಗೂ ಮಕ್ಕಳಿಗೆ ಸೋಂಕಿತ ಶ್ವಾಸಕೋಶದ ಕೊಡುಗೆ ನೀಡುತ್ತಿರಾ ಎಂದು ಪ್ರಶ್ನಿಸಿದೆ.

 ಮಕ್ಕಳಿಗೆ ಸೋಂಕಿತ ಶ್ವಾಸಕೋಶವನ್ನು ಉಡುಗೊರೆಯಾಗಿ ನೀಡಬೇಡಿ. ಶಾಲೆಗೆ ಹೋಗುವಾಗ ಅವರು ಮುಖವಾಡ ಧರಿಸಲಿ. ನಿಮ್ಮ ಪ್ರಕಾರ ಆರೋಗ್ಯದ ತುರ್ತು ಅಂದರೆ ಏನು ? ಅಪಾಯಕಾರಿ ಮಾಲಿನ್ಯದ ಮಟ್ಟ ಪಿಎಂ 2.5 ಹಾಗೂ ಪಿಎಂ 10 ನಲ್ವತ್ತೆಂಟು ಗಂಟೆಗಳ ಕಾಲಕ್ಕಿಂತ ಹೆಚ್ಚು ಇದ್ದರೆ ಸರಕಾರ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮಂಡಳಿ ದಿಲ್ಲಿ ಸರಕಾರಕ್ಕೆ ತಿಳಿಸಿದೆ.

ಸೋಮವಾರದಿಂದ ಸಮ-ಬೆಸ ಸಾರಿಗೆ ವ್ಯವಸ್ಥೆ ಅನುಷ್ಠಾನ ಗೊಳಿಸಲು ಯೋಜಿಸಿರುವ ದಿಲ್ಲಿಯ ಆಪ್ ಸರಕಾರ, ಯೋಜನೆ ಬಗ್ಗೆ ವಿನಾಯಿತಿ ನಿರಾಕರಿಸಿ ಹಸಿರು ನ್ಯಾಯ ಮಂಡಳಿ ನೀಡಿರುವ ನಿರ್ದೇಶನ ಹಿಂದೆಗೆಯುವಂತೆ ಕೋರಿ ಮನವಿ ಸಲ್ಲಿಸಿತ್ತು.

ಈಗ ದಿಲ್ಲಿ ಸರಕಾರ ಮಾರ್ಪಾಡಿಗಾಗಿ ಮನವಿ ಹಿಂದೆ ತೆಗೆದಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು ಮತ್ತೊಮ್ಮೆ ಸಂಪರ್ಕಿಸಿ ವಿನಾಯತಿ ಕೋರುವಾಗ ತಾರ್ಕಿಕ ವಿವರಣೆ ನೀಡುವಂತೆ ಮಂಡಳಿ ದಿಲ್ಲಿ ಸರಕಾರಕ್ಕೆ ಸೂಚಿಸಿದೆ.

 ಸಮ-ಬೆಸ ಸಂಚಾರದ ಸಂದರ್ಭ ಸಮಸ್ಯೆ ಪರಿಹರಿಸಲು ವಿಶೇಷ ಮಹಿಳೆಯರ ಬಸ್ ಅನ್ನು ಸರಕಾರ ಯಾಕೆ ವ್ಯವಸ್ಥೆ ಮಾಡಿಲ್ಲ ಎಂದು ಮಂಡಳಿ ಈ ಹಿಂದೆ ದಿಲ್ಲಿ ಸರಕಾರವನ್ನು ಪ್ರಶ್ನಿಸಿತ್ತು.

ಶನಿವಾರ ವಿಶೇಷ ವಿಚಾರಣೆ ನಡೆಸಿದ ಮಂಡಳಿ ತುರ್ತು ಸೇವೆಯನ್ನು ಇದರಿಂದ ಹೊರತುಪಡಿಸಬೇಕು ಎಂಬ ನಿರ್ದೇಶನ ನೀಡಿದ ಬಳಿಕ ಸಮ-ಬೆಸ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News