ಪ್ರದ್ಯುಮ್ನ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸದಂತೆ ಕುಟುಂಬಸ್ಥರಲ್ಲಿ ಮನವಿ ಮಾಡಿದ್ದ ಹರ್ಯಾಣ ಮಂತ್ರಿ

Update: 2017-11-14 17:42 GMT

ಗುರುಗ್ರಾಂ, ನ.14: ರ್ಯಾನ್ ಅಂತಾರಾಷ್ಟ್ರೀಯ ಶಾಲಾ ವಿದ್ಯಾರ್ಥಿಯ ಹತ್ಯಾ ಪ್ರಕರಣವನ್ನು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಸಿಬಿಐ ತನಿಖೆಗೆ ಒಪ್ಪಿಸುವ ಒಂದು ದಿನ ಮೊದಲು ಹಿರಿಯ ಮಂತ್ರಿಯೊಬ್ಬರು ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಆಗ್ರಹಿಸದಂತೆ ಮೃತ ಬಾಲಕನ ಕುಟುಂಬಸ್ಥರಲ್ಲಿ ಮನವಿ ಮಾಡಿರುವ ಬಗ್ಗೆ ಮಾಹಿತಿ ಬಯಲಾಗಿದೆ. ತನ್ನ ಮಗನ ಹತ್ಯೆಯ ಪ್ರಕರಣವನ್ನು ಸಿಬಿಐಗೆ ನೀಡಲು ಆಗ್ರಹಿಸದಂತೆ ಹರ್ಯಾಣ ಸಂಪುಟ ಸಚಿವ ರಾವ್ ನರ್ಬೀರ್ ಸಿಂಗ್ ಮನವಿ ಮಾಡಿದ್ದರು ಎಂಬುದಾಗಿ ಮೃತ ಬಾಲಕ ಪ್ರದ್ಯುಮನ್ ಠಾಕೂರ್‌ನ ತಂದೆ ತಿಳಿಸಿದ್ದಾರೆ.

ಸೆಪ್ಟಂಬರ್ 14ರಂದು ತಮ್ಮ ಮನೆಗೆ ಆಗಮಿಸಿದ್ದ ಸಚಿವ ಸಿಂಗ್ ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಸಿಬಿಐ ಕೇವಲ ದೊಡ್ಡ ಹೆಸರಷ್ಟೇ ಮತ್ತೇನಿಲ್ಲ. ಈಗಾಗಲೇ ಸಂಸ್ಥೆಯ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಹಾಗಾಗಿ ಈ ಪ್ರಕರಣದ ತನಿಖೆ ನಡೆಸಲು ವರ್ಷಗಳೇ ಕಳೆಯಬಹುದು ಎಂದು ಹೇಳಿರುವುದಾಗಿ ಮೃತ ಬಾಲಕನ ತಂದೆ ವರುಣ್ ಠಾಕೂರ್ ತಿಳಿಸಿದ್ದಾರೆ. ಸಿಬಿಐಗಿಂತ ಹರ್ಯಾಣ ಪೊಲೀಸ್ ಪ್ರಕರಣದ ತನಿಖೆಯನ್ನು ನಿಗದಿತ ಸಮಯದಲ್ಲೇ ಮುಗಿಸಿ ಬಿಡುತ್ತದೆ ಹಾಗಾಗಿ ಪೊಲೀಸರು ತನಿಖೆ ನಡೆಸುವುದೇ ಸೂಕ್ತ ಎಂದು ಮಂತ್ರಿಗಳು ಹೇಳಿರುವುದಾಗಿ ಠಾಕೂರ್ ತಿಳಿಸಿದ್ದಾರೆ.

ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ ನಂತರವೇ ನೈಜ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ತಪ್ಪೆಸಗಿದ್ದಾರೆ ಮತ್ತು ಸಾಕ್ಷಿನಾಶ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಪ್ರಕರಣದಲ್ಲಿ ಪೊಲೀಸರಿಂದ ಬಂಧಿತನಾಗಿರುವ ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ಮೇಲೆ ಒತ್ತಡ ಹೇರುವ ಮೂಲಕ ಆತ ತನ್ನದಲ್ಲದ ತಪ್ಪನ್ನು ಒಪ್ಪುವಂತೆ ಮಾಡಲಾಗಿದೆ ಎಂದು ಸಿಬಿಐ ತಿಳಿಸಿತ್ತು.

ರ್ಯಾನ್ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದ ಪ್ರದ್ಯುಮನ್ ಠಾಕೂರ್‌ನ ಶವ ಶಾಲೆಯ ಶೌಚಾಲಯದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆಗೆ ಸಂಬಂಧಪಟ್ಟಂತೆ ಸಿಬಿಐ ಅಧಿಕಾರಿಗಳು ಅದೇ ಶಾಲೆಯ ಹನ್ನೊಂದನೆ ತರಗತಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News