ಭಾರತ ಸತತ 2ನೆ ಸೊಲು: ಕೂಟದಿಂದ ಔಟ್

Update: 2017-11-14 18:27 GMT

ಕೌಲಾಲಂಪುರ, ನ.14: ಮೂರು ದಿನಗಳಲ್ಲಿ ಸತತ ಎರಡನೆ ಸೋಲು ಅನುಭವಿಸಿರುವ ಹಾಲಿ ಚಾಂಪಿಯನ್ ಭಾರತದ ಕಿರಿಯರ ಕ್ರಿಕೆಟ್ ತಂಡ ಅಂಡರ್-19 ಏಷ್ಯಾಕಪ್‌ನಿಂದ ಹೊರನಡೆದಿದೆ.

 ಭಾರತ ರವಿವಾರ ನೇಪಾಳದ ವಿರುದ್ಧ ಸೋತಿತ್ತು. ಮಂಗಳವಾರ ಬಾಂಗ್ಲಾದೇಶದ ವಿರುದ್ಧವೂ 8 ವಿಕೆಟ್‌ಗಳಿಂದ ಸೋತಿರುವ ಭಾರತ ಟೂರ್ನಿಯಿಂದ ಹೊರ ನಡೆದಿದೆ. ಕೌಲಾಲಂಪುರದಲ್ಲಿ ಮಳೆ ಸುರಿಯುತ್ತಿದ್ದ ಕಾರಣ ಪಂದ್ಯವನ್ನು 32 ಓವರ್‌ಗೆ ಕಡಿತಗೊಳಿಸಲಾಯಿತು. ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡಿದ್ದ ಬಾಂಗ್ಲಾದೇಶ ತಂಡ ಭಾರತವನ್ನು 32 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 187 ರನ್‌ಗಳಿಗೆ ನಿಯಂತ್ರಿಸಿತು. ಅತ್ಯುತ್ತಮ ಪ್ರದರ್ಶನ ನೀಡಿದ ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳು ನಾಲ್ಕು ಓವರ್‌ಗಳು ಬಾಕಿ ಇರುವಾಗಲೇ 2 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಬಾಂಗ್ಲಾದೇಶದ ಪಿನಾಕ್ ಘೋಷ್(ಅಜೇಯ 81) ಹಾಗೂ ಮುಹಮ್ಮದ್ ನಯಿಮ್ ಶೇಖ್(38) ಮೊದಲ ವಿಕೆಟ್‌ಗೆ 82 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು. ಗೆಲುವಿಗೆ ಸುಲಭ ಸವಾಲು ಪಡೆದ ಬಾಂಗ್ಲಾದೇಶ ಎರಡು ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ಕೊನೆಯ ತನಕ ಕ್ರೀಸ್‌ನಲ್ಲಿದ್ದ ಘೋಷ್ ಅವರು ಮುಹಮ್ಮದ್ ತೌವಿದ್‌ರೊಂದಿಗೆ(ಅಜೇಯ 48) 4ನೆ ವಿಕೆಟ್‌ಗೆ 83 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ಭಾರತ 2 ಪಂದ್ಯಗಳಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರ ನಡೆದರೆ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿರುವ ನೇಪಾಳ ಹಾಗೂ ಬಾಂಗ್ಲಾದೇಶ ಸೆಮಿ ಫೈನಲ್‌ಗೆ ಅರ್ಹತೆ ಪಡೆದಿವೆ. ‘ಬಿ’ ಗುಂಪಿನಿಂದ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿವೆ. ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಭಾರತ ಒಂದು ಹಂತದಲ್ಲಿ 116 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. 7ನೆ ಕ್ರಮಾಂಕದಲ್ಲಿ ಆಡಿದ ಸಲ್ಮಾನ್ ಖಾನ್ ಔಟಾಗದೆ 39 ರನ್ ಗಳಿಸಿ ಭಾರತದ ಮೊತ್ತವನ್ನು 150ರ ಗಡಿ ದಾಟಿಸಿದರು. ಸಲ್ಮಾನ್ ತಂಡದ ಪರ ಅಗ್ರ ಸ್ಕೋರರ್ ಎನಿಸಿಕೊಂಡರು. ಅನುಜ್ ರಾವತ್(34), ಹಾರ್ವಿಕ್ ದೇಸಾಯಿ(21) ಹಾಗೂ ನಾಯಕ ಹಿಮಾಂಶು ರಾಣಾ(15) ಎರಡಂಕೆಯ ಸ್ಕೋರ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News