ಉತ್ತರಭಾರತದಲ್ಲಿ ವಾಯು ಮಾಲಿನ್ಯ: ಕೇಜ್ರಿವಾಲ್-ಖಟ್ಟರ್ ಮಾತುಕತೆ
ಹೊಸದಿಲ್ಲಿ, ನ. 14: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಬುಧವಾರ ಇಲ್ಲಿ ಭೇಟಿಯಾಗಿ 90 ನಿಮಿಷಗಳ ಕಾಲ ಮಾತುಕತೆ ನಡೆಸಿದರು ಹಾಗೂ ಮುಂದಿನ ವರ್ಷ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಹೊಗೆ ನಿಯಂತ್ರಿಸಲು ಕ್ರಮಕೈಗೊಳ್ಳಲು ಪರಸ್ಪರ ಒಪ್ಪಿಗೆ ನೀಡಿದರು.
ನಾವು ರಚನಾತ್ಮಕವಾಗಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಸಮಸ್ಯೆ ನಿವಾರಿಸಲು ಸಾಮೂಹಿಕ ಪ್ರಯತ್ನ ಅಗತ್ಯ. ಬೆಳೆ ತ್ಯಾಜ್ಯ ದಹನ, ವಾಹನದಿಂದ ಮಾಲಿನ್ಯ ನಿವಾರಣೆ, ಸಿಎನ್‌ಜಿ ಬಳಕೆ ಹಾಗೂ ದಿಲ್ಲಿ- ಗುರುಗ್ರಾಮ್ ನಡುವೆ ಸಂಚಾರ ವ್ಯವಸ್ಥೆ ಸುಧಾರಿಸುವುದು ಮೊದಲಾದ ವಿಷಯಗಳ ಬಗ್ಗೆ ನಾವು ಪ್ರಮುಖವಾಗಿ ಚರ್ಚೆ ನಡೆಸಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು.
ನಾವು ಗಾಳಿಯ ದಿಕ್ಕು ಬದಲಾಯಿಸಲು ಸಾಧ್ಯವಿಲ್ಲ. ಆದರೆ, ವಾಯು ಮಾಲಿನ್ಯ ನಿಯಂತ್ರಿಸಲು ಪ್ರಯತ್ನಿಸಲಿದ್ದೇವೆ ಎಂದು ಅವರು ಹೇಳಿದರು.
ಮಾಲಿನ್ಯ ಸಾಮಾನ್ಯವಾಗಿ ಎಲ್ಲರ ಆತಂಕದ ವಿಚಾರ. ಬೆಳೆ ತ್ಯಾಜ್ಯ ದಹನದ ವಿಷಯ ಪರಿಹರಿಸಲು ನಾವು ಪ್ರಯತ್ನಿಸಲಿದ್ದೇವೆ. ಅಲ್ಲದೆ, ಗುರುಗ್ರಾಂಮ್ ಹಾಗೂ ದಿಲ್ಲಿ ನಡುವೆ 500 ಸಿಎನ್‌ಜಿ ಬಸ್ ಸಂಚಾರ ಆರಂಭಿಸುವ ಬಗ್ಗೆ ಚಿಂತಿಸಲಿದ್ದೇವೆ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.