ಜಿಂಬಾಬ್ವೆಯಲ್ಲಿ ಕ್ಷಿಪ್ರ ಮಿಲಿಟರಿ ಕಾರ್ಯಾಚರಣೆ: ಅಧ್ಯಕ್ಷ ಮುಗಾಬೆಗೆ ಗೃಹಬಂಧನ

Update: 2017-11-15 18:06 GMT

ಇಥಿಯೋಪಿಯಾ, ನ.15: ಜಿಂಬಾಬ್ವೆಯಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಅಲ್ಲಿನ ಸೇನೆಯು ಕಾರ್ಯಾಚರಣೆ ನಡೆಸಿ ದೇಶದ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಅಧ್ಯಕ್ಷ ರಾಬರ್ಟ್ ಮುಗಾಬೆ ಮತ್ತು ಅವರ ಪತ್ನಿ ಗ್ರೇಸ್ ಮುಗಾಬೆಗೆ ಗೃಹಬಂಧನ ವಿಧಿಸಿದೆ.

ಆದರೆ ಇದನ್ನು ಮಿಲಿಟರಿ ಕಾರ್ಯಾಚರಣೆ ಎಂದು ಕರೆಯಲು ನಿರಾಕರಿಸಿರುವ ಸೇನೆಯ ಮುಖ್ಯಸ್ಥ ಜನರಲ್ ಕೊನ್ಸ್ಟಂಟಿನೊ ಚಿವಾಂಗಾ, ಮುಗಾಬೆ ಜೊತೆಗಿದ್ದು ದೇಶದ ಸಾಮಾಜಿಕ ಮತ್ತು ಆರ್ಥಿಕ ಅಸ್ಥಿರತೆಗೆ ಕಾರಣಗಾಗಿರುವವರ ವಿರುದ್ಧ ನಡೆಸಿರುವ ಕಾರ್ಯಾಚರಣೆ ಇದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಧ್ಯಕ್ಷ ಮುಗಾಬೆಯನ್ನು ಭದ್ರತೆಯ ದೃಷ್ಟಿಯಿಂದ ಗೃಹಬಂಧನದಲ್ಲಿಡಲಾಗಿದೆ ಎಂದವರು ತಿಳಿಸಿದ್ದಾರೆ.

93ರ ಹರೆಯದ ರಾಬರ್ಟ್ ಮುಗಾಬೆ 1980ರಲ್ಲಿ ದೇಶವನ್ನು ಬಿಳಿಯರಿಂದ ಸ್ವತಂತ್ರಗೊಳಿಸಿದ ನಂತರ ಜಿಂಬಾಬ್ವೆಯ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದರು. ಅವರ ಸರ್ವಾಧಿಕಾರಿ ಆಡಳಿತ ಈಗಲೂ ಮುಂದುವರಿದಿತ್ತು. ಸದ್ಯ ತನಗೆ ವಯಸ್ಸಾಗಿರುವ ಕಾರಣ ಮುಗಾಬೆ ತನ್ನ ಪತ್ನಿ ಹಾಗೂ ಉಪಾಧ್ಯಕ್ಷೆಯಾಗಿರುವ ಗ್ರೇಸ್ ಮುಗಾಬೆಯನ್ನು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಲು ಮುಂದಾಗಿದ್ದರು. ಆದರೆ ಮತ್ತೊರ್ವ ಉಪಾಧ್ಯಕ್ಷ ಎಮರ್ಸನ್ ನಂಗಂಗ್ವಾರನ್ನು ದೇಶದ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಕೂಗು ಕೇಳಿಬಂದಿತ್ತು. ಕಳೆದ ವಾರ ಪ್ರಾಮಾಣಿಕತೆ ಮತ್ತು ಅಗೌರವ ತೋರಿದ ನೆಪವೊಡ್ಡಿ ನಂಗಂಗ್ವಾ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಿದ ಹಿನ್ನೆಲೆಯಲ್ಲಿ ದೇಶದಲ್ಲಿ ಅಶಾಂತಿ ಹೊಗೆಯಾಡುತ್ತಿತ್ತು.

ಗ್ರೇಸ್ ಮುಗಾಬೆಗೆ ಯುವಪಡೆಯ ಬೆಂಬಲವಿದ್ದರೆ ಹಿರಿಯ ಮಂತ್ರಿಗಳ ಮತ್ತು ಸೇನೆಯ ಬೆಂಬಲ ನಂಗಂಗ್ವಾಗಿತ್ತು. ಆದರೆ ನಂಗಂಗ್ವಾ ತನ್ನ ಪ್ರಾಣಕ್ಕೆ ಅಪಾಯವಿದೆ ಎಂದು ಹೇಳಿ ಪಕ್ಕದ ದಕ್ಷಿಣ ಆಫ್ರಿಕಾಕ್ಕೆ ಪಲಾಯನ ಮಾಡಿದ್ದರು.

ಇದರಿಂದ ಉದ್ರಿಕ್ತಗೊಂಡ ಸೇನೆಯು ನಂಗಂಗ್ವಾ ಬೆಂಬಲಿಗರನ್ನು ಹತ್ತಿಕ್ಕುವುದನ್ನು ತಡೆಯಲು ಮಧ್ಯಪ್ರವೇಶಿಸುವುದಾಗಿ ಎಚ್ಚರಿಕೆ ನೀಡಿತ್ತು. ಬುಧವಾರದಂದು ತನ್ನ ಮಾತಿನಂತೆ ನಡೆದಿರುವ ಸೇನೆ ದೇಶದ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ನಂಗಂಗ್ವಾರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ಮುಗಾಬೆ ಮೇಲೆ ಒತ್ತಡ ತರಲು ಸೇನೆ ನಿರ್ಧರಿಸಿದೆ. ಇದಕ್ಕೆ ಮುಗಾಬೆ ವಿರೋಧ ವ್ಯಕ್ತಪಡಿಸಿದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News