ನಿಮ್ಮ ಬ್ಯಾಂಕ್ ಲಾಕರ್‌ನಲ್ಲಿಯ ಅಮೂಲ್ಯ ಸೊತ್ತುಗಳನ್ನು ಕಳ್ಳರು ದೋಚಿದರೆ ಯಾರು ಹೊಣೆ?

Update: 2017-11-16 11:19 GMT

ಮೊನ್ನೆ ಮೊನ್ನೆಯಷ್ಟೇ ನವಿ ಮುಂಬೈನ ಜುಯಿನಗರದಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಶಾಖೆಗೆ ಪಕ್ಕದ ಅಂಗಡಿಯ ಮೂಲಕ ಸುರಂಗ ಕೊರೆದು ನುಗ್ಗಿದ ಕಳ್ಳರು 27 ಲಾಕರ್‌ಗಳಲ್ಲಿದ್ದ ಚಿನ್ನಾಭರಣಗಳು ಮತ್ತು ನಗದು ಹಣವನ್ನು ದೋಚಿ ಪರಾರಿ ಯಾಗಿದ್ದಾರೆ. ಬ್ಯಾಂಕ್‌ನ್ನು ದೋಚಿರುವುದು ಇದೇ ಮೊದಲ ಬಾರಿಯೇನಲ್ಲ. ಆದರೆ ಬ್ಯಾಂಕ್‌ಗಳಲ್ಲಿ ಕಳ್ಳತನ ನಡೆದಾಗ ಹಣ ಮತ್ತು ಚಿನ್ನಾಭರಣಗಳನ್ನು ಇರಿಸಿದವರಿಗೆ ಏನು ಪರಿಹಾರ ದೊರೆಯುತ್ತದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

ಉತ್ತರವಿಲ್ಲಿದೆ. ಸರಕಾರವು ಬ್ಯಾಂಕಿನಲ್ಲಿಯ ಸಾರ್ವಜನಿಕರ ಠೇವಣಿಗಳಿಗೆ ಡಿಪಾಸಿಟ್ ಇನ್ಶೂರನ್ಸ್ ಕ್ರೆಡಿಟ್ ಗ್ಯಾರಂಟಿ ಸ್ಕೀಮ್(ಡಿಐಸಿಜಿಸಿ)ನಡಿ ಒಂದು ಲಕ್ಷ ರೂ.ಗಳ ವಿಮೆಯನ್ನೊದಗಿಸಿದೆ. ಬ್ಯಾಂಕಿನಲ್ಲಿ ಕಳ್ಳತನವಾದರೆ ನಿಮ್ಮ ನಷ್ಟಕ್ಕೆ ಪರಿಹಾರ ವಾಗಿ ಗರಿಷ್ಠ ಒಂದು ಲ.ರೂ.ದೊರೆಯುತ್ತದೆ.

ನಿರಖು ಠೇವಣಿಗಳು, ಆವರ್ತನ ಠೇವಣಿಗಳು ಮತ್ತು ಉಳಿತಾಯ ಖಾತೆಗಳು ಡಿಐಸಿಜಿಸಿ ವ್ಯಾಪ್ಯಿಯಲ್ಲಿ ಬರುತ್ತವೆ. ಆದರೆ ಬ್ಯಾಂಕ್ ಲಾಕರ್‌ಗಳ ಕಳ್ಳತನಕ್ಕೆ ಬ್ಯಾಂಕು ಗಳು ಜವಾಬ್ದಾರಿ ಹೊಂದಿಲ್ಲ ಎನ್ನುವುದನ್ನು ಮುಖ್ಯವಾಗಿ ಗಮನಿಸಬೇಕು. ಗ್ರಾಹಕರು ಲಾಕರ್‌ಗಳಲ್ಲಿ ಏನು ಇಟ್ಟಿದ್ದಾರೆ ಎನ್ನುವುದು ಬ್ಯಾಂಕುಗಳಿಗೆ ಗೊತ್ತಿರುವುದಿಲ್ಲ ಎನ್ನುವುದು ಇದಕ್ಕೆ ಸರಳ ಕಾರಣವಾಗಿದೆ. ಗ್ರಾಹಕರು ಲಾಕರ್‌ನಲ್ಲಿ ತಾವಿರಿಸಿರುವ ನಗದು ಮತ್ತು ಚಿನ್ನಾಭರಣಗಳ ವೌಲ್ಯದ ಬಗ್ಗೆ ಬ್ಯಾಂಕಿಗೆ ಯಾವುದೇ ಸ್ಪಷ್ಟನೆಯನ್ನು ಒದಗಿಸಬೇಕಿಲ್ಲ.

ಆದರೂ ಕೆಲವು ಬ್ಯಾಂಕುಗಳು ಲಾಕರ್‌ಗಳ ಕಳ್ಳತನ ತಮ್ಮ ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಪ್ರಮುಖವಾಗಿ ಬಿಂಬಿಸುತ್ತದೆ ಎನ್ನುವ ಕಾರಣದಿಂದ ಇಂತಹ ಸಂದರ್ಭದಲ್ಲಿ ಗುಡ್ ವಿಲ್ ಸಂಕೇತವಾಗಿ ಸ್ವಲ್ಪ ಮಟ್ಟಿನ ಪರಿಹಾರವನ್ನು ಒದಗಿಸುತ್ತವೆ.

ಸರಕಾರಿ ಸ್ವಾಮ್ಯದ ಬ್ಯಾಂಕುಗಳು ತಮ್ಮಲ್ಲಿಯ ಲಾಕರ್ ಬಾಕ್ಸ್‌ಗಳ ಕಳ್ಳತನಕ್ಕೆ ಯಾವುದೇ ಪರಿಹಾರ ನೀಡಲು ಬದ್ಧವಲ್ಲ ಎನ್ನುವುದನ್ನು ಆರ್‌ಟಿಐ ಉತ್ತರವೊಂದರಲ್ಲಿ ಸ್ಪಷ್ಟಪಡಿಸಲಾಗಿದೆ. ಬಾಂಕು ಮತ್ತು ಗ್ರಾಹಕನ ನಡುವಿನ ಸಂಬಂಧ ಮನೆಮಾಲಿಕ ಮತ್ತು ಬಾಡಿಗೆದಾರನ ನಡುವಿನ ಸಂಬಂಧವಿದ್ದಂತೆ ಎಂದು ಉತ್ತರವು ತಿಳಿಸಿದೆ. ಅಂದರೆ ಗ್ರಾಹಕ ಬ್ಯಾಂಕ್ ಲಾಕರ್‌ನಲ್ಲಿರಿಸಿದ್ದ ಬೆಲೆ ಬಾಳುವ ಸೊತ್ತುಗಳ ಕಳ್ಳತನವಾದರೆ ಆತನೇ ಹೊಣೆಯಾಗುತ್ತಾನೆ.

ಲಾಕರ್‌ನಲ್ಲಿರುವ ವಸ್ತುಗಳಿಗೆ ಬ್ಯಾಂಕುಗಳು ಹೊಣೆಯಲ್ಲ ಎಂದು ಆರ್‌ಬಿಐ ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ. ಆದರೆ ಲಾಕರ್‌ಗಳ ರಕ್ಷಣೆಗೆ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅವುಗಳ ಜವಾಬ್ದಾರಿಯಾಗಿದೆ.

ಇಂಡಿಯನ್ ಕಾಂಟ್ರಾಕ್ಟ್ ಆ್ಯಕ್ಟ್‌ನ ಕಲಂ 152ರಡಿ ಲಾಕರ್‌ನಲ್ಲಿರುವ ವಸ್ತುಗಳ ನಷ್ಟ ಅಥವಾ ಹಾನಿಗೆ ಬ್ಯಾಂಕು ಹೊಣೆಯಾಗುವುದಿಲ್ಲ.

ಲಾಕರ್ ಕಳ್ಳತನದ ಎರಡು ಸಂದರ್ಭಗಳಲ್ಲಿ ಬ್ಯಾಂಕುಗಳು ಗ್ರಾಹಕರಿಗೆ ಪರಿಹಾರ ವನ್ನೊದಗಿಸಬಹುದು. ಒಂದು, ಗ್ರಾಹಕ ಲಾಕರ್‌ನಲ್ಲಿ ತಾನಿರಿಸಿದ್ದ ಸೊತ್ತುಗಳ ಬಗ್ಗೆ ರುಜುವಾತು ತೋರಿಸಿದಾಗ ಮತ್ತು ಎರಡನೆಯದಾಗಿ, ಸಾಕಷ್ಟು ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲು ಬ್ಯಾಂಕು ವಿಫಲಗೊಂಡಿತ್ತು ಎಂದು ಗ್ರಾಹಕ ರುಜುವಾತು ಪಡಿಸಿದಾಗ.

ಉದಾಹರಣೆಗೆ 2011ರಲ್ಲಿ ಉತ್ತರ ಪ್ರದೇಶದಲ್ಲಿಯ ಸರಕಾರಿ ಸ್ವಾಮ್ಯದ ಬ್ಯಾಂಕೊಂದರ ಶಾಖೆಯಲ್ಲಿ ಲಾಕರ್‌ನಲ್ಲಿರಿಸಿದ್ದ ಒಂದು ಕೋಟಿ ರೂ.ವೌಲ್ಯದ ನೋಟುಗಳನ್ನು ಗೆದ್ದಲುಗಳು ತಿಂದು ಹಾಕಿದ್ದವು. ಈ ಪ್ರಕರಣದಲ್ಲಿ ಬ್ಯಾಂಕಿನ ಲೋಪ ಸಾಬೀತಾಗಿದ್ದು, ಅದು ಗ್ರಾಹಕನಿಗೆ ಪರಿಹಾರ ನೀಡುವಂತಾಗಿತ್ತು.

ಲಾಕರ್‌ನಲ್ಲಿರಿಸಿದ ಸೊತ್ತುಗಳಿಗೆ ಬ್ಯಾಂಕುಗಳು ಯಾವುದೇ ವಿಮೆ ರಕ್ಷಣೆ ನೀಡುವುದಿ ಲ್ಲವಾದರೂ ಗ್ರಾಹಕರು ಖಾಸಗಿ ವಿಮಾ ಕಂಪನಿಗಳಿಂದ ಪಾಲಿಸಿಗಳನ್ನು ಖರೀದಿಸ ಬಹುದಾಗಿದೆ. ಅಮೂಲ್ಯ ಸೊತ್ತುಗಳ ಮತ್ತು ಚಿನ್ನಾಭರಣಗಳ ಕಳ್ಳತನದ ವಿರುದ್ಧ ಪಾಲಿಸಿಯು ಗೃಹ ವಿಮೆ ಪಾಲಿಸಿಯೊಂದಿಗೆ ದೊರೆಯುತ್ತದೆ. ಈ ಪಾಲಿಸಿಗಳು ಮನೆಯಲ್ಲಿ ಮಾತ್ರವಲ್ಲ, ವಿಶ್ವದ ಯಾವುದೇ ಭಾಗದಲ್ಲಿ ನಿಮ್ಮ ಸೊತ್ತುಗಳ ನಷ್ಟ ಅಥವಾ ಹಾನಿ ಸಂಭವಿಸಿದರೂ ಪರಿಹಾರವನ್ನು ನೀಡುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News