‘ಪಪ್ಪು’ವನ್ನು ಬಿಟ್ಟು ‘ಯುವರಾಜ’ನನ್ನು ಹಿಡಿದುಕೊಂಡ ಗುಜರಾತ್ ಬಿಜೆಪಿ
ಅಹ್ಮದಾಬಾದ್,ನ.16: ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಬಿಜೆಪಿಯ ವಿದ್ಯುನ್ಮಾನ ಜಾಹೀರಾತೊಂದರಲ್ಲಿ ‘ಪಪ್ಪು’ ಶಬ್ದದ ಬಳಕೆಯನ್ನು ಚುನಾವಣಾ ಆಯೋಗವು ನಿಷೇಧಿಸಿದ ಬಳಿಕ ಆಡಳಿತ ಪಕ್ಷವೀಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿಕೊಂಡು ‘ಯುವರಾಜ’ ಶಬ್ದವನ್ನು ಬಳಸಿಕೊಂಡಿರುವ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದೆ.
ಚುನಾವಣಾ ಆಯೋಗದ ಸಮ್ಮತಿ ಲಭಿಸಿರುವ 49 ಸೆಕೆಂಡ್‌ಗಳ ಈ ವೀಡಿಯೊ ಜಾಹೀರಾತನ್ನು ಗುಜರಾತ್ ಬಿಜೆಪಿಯು ಬುಧವಾರ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬಿಡುಗಡೆಗೊಳಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್‌ರನ್ನು ಗೇಲಿಮಾಡಲು ‘ಪಪ್ಪು’ ಶಬ್ದದ ಬಳಕೆಯಾಗುತ್ತಿದ್ದು, ಬಿಜೆಪಿ ನಾಯಕರು ರಾಹುಲ್‌ರನ್ನು ವ್ಯಂಗ್ಯವಾಡಲು ಆಗಾಗ್ಗೆ ‘ಯುವರಾಜ’ ಅಥವಾ ‘ಶಹಝಾದಾ’ದಂತಹ ಶಬ್ದಗಳನ್ನು ಬಳಸುತ್ತಾರೆ.
ಗುಜರಾತ್‌ನಲ್ಲಿ ಡಿ.9 ಮತ್ತು 14ರಂದು ಮತದಾನ ನಡೆಯಲಿದ್ದು, ಚುನಾವಣಾ ಕಾವು ಹೆಚ್ಚುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಸಾಮಾಜಿಕ ಮಾಧ್ಯಮಗಳಲ್ಲಿ ಅಣಕು ಜಾಹೀರಾತುಗಳನ್ನು ಪೋಸ್ಟ್ ಮಾಡುತ್ತ ಪರಸ್ಪರರ ನಾಯಕರನ್ನು ಗುರಿಯಾಗಿಸಿ ಕೊಳ್ಳುವುದೂ ಹೆಚ್ಚುತ್ತಿದೆ.