ರಕ್ತಸಂಬಂಧದಲ್ಲೂ ಅನೈತಿಕತೆ ಕಂಡ ಬಿಜೆಪಿ ಐಟಿ ಘಟಕದ ಮುಖ್ಯಸ್ಥ!

Update: 2017-11-21 04:55 GMT

"ಹಾರ್ದಿಕ್ ರಲ್ಲಿ @shaktisinhgohil ಹೇಳಿರುವುದಕ್ಕಿಂತ ವ್ಯತಿರಿಕ್ತವಾಗಿ ನೆಹರೂರವರ ಡಿಎನ್‍ಎ ಅಧಿಕವಾಗಿರುವಂತೆ ಕಾಣಿಸುತ್ತದೆ'' ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಲವಿಯ ಟ್ವೀಟ್ ಮಾಡಿದ್ದರು. ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಬೇರೆ ಬೇರೆ ಮಹಿಳೆಯರ ಜತೆಗಿರುವ ಹಲವಾರು ಚಿತ್ರಗಳ ಕೊಲಾಜ್ ಒಂದನ್ನು ಈ ಟ್ವೀಟ್ ಜೊತೆಗೆ ಪೋಸ್ಟ್ ಮಾಡಲಾಗಿತ್ತು.

ಹಾರ್ದಿಕ್ ಪಟೇಲ್ ರದ್ದು ಎನ್ನಲಾದ ಸೆಕ್ಸ್ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಈ ಟ್ವೀಟ್ ಮಾಡಿದ್ದು, ಈ ಮೂಲಕ ನೆಹರೂ ಹಾಗು ಅವರ ಜೊತೆಗಿರುವ ಮಹಿಳೆಯರ ಸಂಬಂಧವನ್ನು ಅನೈತಿಕವೆಂದು ಬಿಂಬಿಸಲು ಹೊರಟಿದ್ದರು. ಆದರೆ ಚಿತ್ರಗಳಲ್ಲಿ ನೆಹರೂ ಜೊತೆಗಿರುವ ಮಹಿಳೆಯರು ಹಾಗು ನೆಹರೂ ಅವರದ್ದು ರಕ್ತಸಂಬಂಧವೆಂದು ತಿಳಿಯುವಷ್ಟು ಬುದ್ಧಿವಂತಿಕೆ ಅಥವಾ ಸಮಯ ಬಹುಷ: ಅಮಿತ್ ಮಾಲವಿಯ ಬಳಿ ಇರಲಿಲ್ಲವೇನೋ. ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಪೋಸ್ಟ್ ಮಾಡಿರುವ ಫೋಟೊಗಳ ಹಿಂದಿರುವ ಸತ್ಯಾಸತ್ಯತೆಯನ್ನು altnews.in ಬಹಿರಂಗಪಡಿಸಿದೆ. 

ಪ್ರಧಾನಿ ನರೇಂದ್ರ ಮೋದಿ ನೆಹರೂರನ್ನು ಹೊಗಳಿದ್ದರೂ ಅವರ ಪಕ್ಷದ ಸಹೋದ್ಯೋಗಿಗಳು ನೆಹರೂ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾರೆಂಬುದು ರಹಸ್ಯವಾಗಿ ಉಳಿದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿರುವ ಹಲವಾರು ನೆಹರೂ ಸಂಬಂಧಿತ ತಿರುಚಿದ ಚಿತ್ರಗಳೇ ಇದಕ್ಕೆ ಸಾಕ್ಷಿ. ಆದರೆ  ಬಿಜೆಪಿಯ ಐಟಿ ಘಟಕದ ಮುಖ್ಯಸ್ಥ ಮಾಲವಿಯ ಮಾತ್ರ ನೆಹರೂ ಅವರ ಒಂಬತ್ತು ಚಿತ್ರಗಳ ಬಗ್ಗೆ ತಲೆ ಕೆಡಿಸಿಕೊಂಡು ಅದರ ಕೊಲಾಜ್  ನಿರ್ಮಿಸಿ, ಪಾಟಿದಾರ್ ನಾಯಕ ಹಾರ್ದಿಕ್  ಪಟೇಲ್ ರಲ್ಲಿ ನೆಹರೂ ಅವರ ಡಿಎನ್‍ಎ ಅಧಿಕವಾಗಿದೆ ಎಂದು ಹೇಳುವ ಪ್ರಯತ್ನ ನಡೆಸಿದ್ದಾರೆ.

ಚಿತ್ರ 1: ಇಲ್ಲಿ ನೆಹರೂ ಅವರ ಕೆನ್ನೆಗೆ ಎಲ್ಲರೆದುರೇ ಚುಂಬಿಸುತ್ತಿರುವವರು ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್.  1949ರಲ್ಲಿ ಪಂಡಿತ್ ಅವರು ಅಮೆರಿಕಾದಲ್ಲಿ ಭಾರತೀಯ ರಾಯಭಾರಿಯಾಗಿದ್ದರು. ಆಗ ಅಮೆರಿಕಾಗೆ ನೆಹರೂ ಆಗಮಿಸಿದಾಗ ವಿಜಯಲಕ್ಷ್ಮಿ ಅವರು ಸಹೋದರನನ್ನು ಪ್ರೀತಿಯಿದ ಸ್ವಾಗತಿಸುತ್ತಿರುವ ಫೊಟೋ ಇದು.  ಬಿಜೆಪಿಯ ಐಟಿ ಘಟಕದ ಅಧ್ಯಕ್ಷನಿಗೆ ಈ ಚಿತ್ರದಲ್ಲಿರುವವರು ನೆಹರೂ ಅವರ ಸೋದರಿ ಎಂದು ತಿಳಿದಿಲ್ಲವೇ ಅಥವಾ ತಿಳಿದೂ ವಾಸ್ತವವನ್ನು ಅಡಗಿಸಿಡಲು ಯತ್ನಿಸುತ್ತಿದ್ದಾರೆಯೇ?.

 

ಚಿತ್ರ 2: ಇದು ನೆಹರೂ ಅವರು ಲೇಡಿ ಎಡ್ವಿನಾ ಮೌಂಟ್ ಬ್ಯಾಟನ್ ಅವರೊಂದಿಗೆ ಸಾರ್ವಜನಿಕವಾಗಿ ಹಾಸ್ಯ ಚಟಾಕಿ ಹಾರಿಸುತ್ತಿರುವ ದೃಶ್ಯ. ಆದರೆ ಮಾಲವಿಯ ಅವರ ನಿಯಮಾವಳಿಯಂತೆ ಹೀಗೆ ಕೂಡ ಮಾಡಲು ಸಾಧ್ಯವಿಲ್ಲವೇ ?

 

ಚಿತ್ರ 3: ವಿಜಯಲಕ್ಷ್ಮಿ ಪಂಡಿತ್ ಅವರು ರಷ್ಯಾದಲ್ಲಿ ರಾಯಭಾರಿಯಾಗಿದ್ದ ಸಂದರ್ಭದಲ್ಲಿ ಒಮ್ಮೆ ಭಾರತಕ್ಕೆ ಬಂದಿದ್ದಾಗ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ನೆಹರೂ ಪ್ರೀತಿಯ ಅಪ್ಪುಗೆಯಿಂದ ಎದುರುಗೊಳ್ಳುತ್ತಿರುವ ಫೋಟೋ.

  
ಚಿತ್ರ 4: ಈ ಚಿತ್ರದಲ್ಲಿ ನೆಹರೂ ಸಿಗರೇಟ್ ಸೇದುತ್ತಿದ್ದಾರೆ. ಈ ಚಿತ್ರಕ್ಕೂ ಹಾರ್ದಿಕ್ ಪಟೇಲ್ ಡಿಎನ್‍ಎಗೆ ಏನು ಸಂಬಂಧವೋ ತಿಳಿದಿಲ್ಲ.

 
ಚಿತ್ರ 5: ದಿಲ್ಲಿಯಲ್ಲಿ 1948ರಲ್ಲಿ ಮನುಷ್ಯಾ ನೃತ್ಯ ಪ್ರದರ್ಶನದ ಬಳಿಕ ನೆಹರೂ ಅವರು ಮೃಣಾಲಿನಿ ಸಾರಾಭಾಯಿ ಅವರನ್ನು ಪ್ರೀತಿಯಿಂದ ಅಭಿನಂದಿಸುತ್ತಿರುವ ಫೋಟೊ ಇದು. ಮೃಣಾಲಿನಿಯ ತಾಯಿ, ಸ್ವಾತಂತ್ರ್ಯ ಹೋರಾಟಗಾರ್ತಿ ಅಮ್ಮು ಸ್ವಾಮಿನಾಥನ್ ಅವರು ನೆಹರೂ ಅವರಿಗೆ ಚೆನ್ನಾಗಿ ಪರಿಚಿತರು, ಮೃಣಾಲಿನಿ ಅವರ ಪತಿ ವಿಕ್ರಮ್ ಸಾರಾಭಾಯಿ ಕುಟುಂಬ ಕೂಡ ನೆಹರೂಗೆ ಆತ್ಮೀಯವಾಗಿತ್ತು.

ಚಿತ್ರ 6: 1962ರಲ್ಲಿ ಆಗಿನ ಅಮೆರಿಕಾ ಅಧ್ಯಕ್ಷ ಜಾನ್ ಎಫ್ ಕೆನಡಿ  ಭಾರತಕ್ಕೆ ಆಗಮಿಸಿದ ಸಂದರ್ಭ ನೆಹರೂ ಅವರು ಜಾಕಲೀನ್ ಕೆನಡಿ ಅವರ ಹಣೆಗೆ ತಿಲಕವನ್ನಿಡುವುದು. ಇದು ಅವಮಾನಕಾರಿ ಫೋಟೊವೇನು?.

 
ಚಿತ್ರ 7: ಇಲ್ಲಿ ನೆಹರೂ ಆಗಿನ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್  ಸಿಮೊನ್ ಅವರ ಪತ್ನಿ ಜತೆ ಭಾರತದ ಪ್ರಥಮ ಬಿಒಎಸಿ ವಿಮಾನದಲ್ಲಿ ಸಿಗರೇಟ್ ಸೇದುತ್ತಿರುವ ದೃಶ್ಯ.

 
ಚಿತ್ರ 8: ಇಲ್ಲಿ ನೆಹರೂ ಅವರು ಎಡ್ವಿನಾ ಮಂಟ್ ಬ್ಯಾಟನ್ ಅವರ 18 ವರ್ಷದ ಪುತ್ರಿ ಪಮೇಲಾ ಮೌಂಟ್ ಬ್ಯಾಟನ್ ಅವರ ಜತೆ ಮಾತನಾಡುತ್ತಿದ್ದಾರೆ. ಹೊಸದಿಲ್ಲಿಯಲ್ಲಿ ಅವರು ನೆಹರೂಗೆ ವಿದಾಯ ಹೇಳುವ ದೃಶ್ಯ. ಪಮೇಲಾ ಹೆತ್ತವರೂ ಈ ಚಿತ್ರದಲ್ಲಿ ಕಾಣುತ್ತಿದ್ದಾರೆ.

ಚಿತ್ರ 9: ಈ ಫೊಟೋದಲ್ಲಿ ನೆಹರೂ ಅವರು ಲಂಡನ್ ವಿಮಾನ ನಿಲ್ದಾಣಕ್ಕೆ 1955ರಲ್ಲಿ ಆಗಮಿಸಿದಾಗ ಅವರ ಸೋದರ ಸೊಸೆ ನಯನತಾರಾ ಸೆಹಗಲ್ ಚುಂಬಿಸುತ್ತಿರುವುದು. ಸೆಹಗಲ್ ಅವರ ತಾಯಿ, ಆಗ ಬ್ರಿಟಿಷ್ ಹೈಕಮಿಷನರ್ ಆಗಿದ್ದ  ವಿಜಯಲಕ್ಷ್ಮಿ ಪಂಡಿತ್ ಅವರೂ ಚಿತ್ರದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News