ಕಾರು ಕಳ್ಳರು ನಿಮ್ಮ ಜಿಪಿಎಸ್ ಸ್ಥಗಿತಗೊಳಿಸಬಹುದು, ಪೊಲೀಸರನ್ನು ದಾರಿ ತಪ್ಪಿಸಬಹುದು

Update: 2017-11-17 10:56 GMT

 ನಿಮ್ಮ ಕಾರಿಗೆ ಜಿಪಿಎಸ್ ಬೆಂಬಲಿತ ಸುರಕ್ಷಾ ವ್ಯವಸ್ಥೆಯನ್ನು ಅಳವಡಿಸಿರುವುದರಿಂದ ನಿಮ್ಮ ಕಾರು ಸುರಕ್ಷಿತವಾಗಿದೆ ಎಂದು ನೀವು ಭಾವಿಸಿದ್ದರೆ ಆ ಬಗ್ಗೆ ಇನ್ನೊಮ್ಮೆ ಯೋಚಿಸುವುದು ಅಗತ್ಯವಾಗಬಹುದು. ವಾಹನದ ಜಿಪಿಎಸ್ ಸಂಕೇತವನ್ನು ಸ್ಥಗಿತಗೊಳಿಸಿ, ಅದು ಗ್ರಿಡ್‌ನಿಂದ ಹೊರಕ್ಕೆ ಹೋಗುವಂತೆ ಮಾಡುವ ಸಾಧನಗಳನ್ನೀಗ ಕಾರು ಕಳ್ಳರು ಬಳಸುತ್ತಿದ್ದಾರೆ. ಬ್ಯಾಟರಿಯಿಂದ ನಡೆಯುವ, ಎಲ್ಲಿಗೆ ಬೇಕಾದರೂ ಒಯ್ಯಬಹುದಾದ ಈ ಸಾಧನಗಳು ಜಿಪಿಎಸ್ ಬೆಂಬಲಿತ ಕ್ಯಾಬ್‌ಗಳನ್ನು ಭಾಗಿಯಾಗಿಸಿ ಅಪಹರಣ ಮತ್ತು ಇತರ ಅಪರಾಧಗಳನ್ನು ನಡೆಸಲೂ ಬಳಕೆಯಾಗಬಹುದು ಎಂಬ ಆತಂಕ ಪೊಲೀಸರನ್ನು ಕಾಡತೊಡಗಿದೆ.

ಕಾರಿಗೆ ಜಿಪಿಎಸ್ ಅಳವಡಿಸುವುದರಿಂದ ಅದು ಕಳ್ಳತನವಾದ ಸಂದರ್ಭದಲ್ಲಿ ಅದರ ಜಾಡನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ. ಕಳ್ಳ ಲೊಕೇಷನ್ ಡಿವೈಸ್‌ಗೆ ಹಾನಿಯನ್ನುಂಟು ಮಾಡಲು ಯತ್ನಿಸಿದರೂ ಕಾರು ಕೊನೆಯ ಬಾರಿ ಎಲ್ಲಿತ್ತು ಎನ್ನುವುದು ಡಾಟಾದಲ್ಲಿ ದಾಖಲಾಗಿರುತ್ತದೆ. ಆದರೆ ನೂತನ ಸಾಧನಗಳು ದೊಡ್ಡ ಬೆದರಿಕೆಯಾಗಿವೆ. ಈ ಮೊದಲು ಇಂತಹ ಜಾಮಿಂಗ್ ಸಾಧನಗಳಿಗೆ 25,000 ರೂ.ಸುರಿಯಬೇಕಿತ್ತು, ಆದರೆ ಈಗ ಚಿಲ್ಲರೆ ಕಾರು ಕಳ್ಳ 1,200 ರೂ.ನಿಂದ 5,000 ರೂ.ನೊಳಗೆ ಜಾಮರ್ ಖರೀದಿಸಬಹುದಾಗಿದೆ ಮತ್ತು ಅಪರಾಧವನ್ನೆಸಗಲು ಬಳಸಬಹುದಾಗಿದೆ ಎನ್ನುತ್ತಾರೆ ದಿಲ್ಲಿಯ ವಾಹನ ಕಳವು ನಿಗ್ರಹ ದಳ(ಎಎಟಿಎಸ್)ದ ಹಿರಿಯ ಅಧಿಕಾರಿಯೋರ್ವರು.

ಇಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ,ಆನ್‌ಲೈನ್‌ನಲ್ಲಿ ಈ ಸಾಧನಗಳು ದೊರೆಯುತ್ತಿವೆ. ಇವುಗಳನ್ನು ಖರೀದಿಸಲು ಯಾವುದೇ ಗುರುತಿನ ದಾಖಲೆಗಳೂ ಅಗತ್ಯವಿಲ್ಲ. ಗಣ್ಯವ್ಯಕ್ತಿಗಳು ಮತ್ತು ರಾಜಕಾರಣಿಗಳು ಇಂತಹ ಜಾಮರ್‌ಗಳ ಮಾಮೂಲು ಖರೀದಿದಾರರಾಗಿದ್ದಾರೆ. ತಮ್ಮನ್ನು ಹಿಂಬಾಲಿಸಲಾಗುತ್ತಿದೆ ಮತ್ತು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆತಂಕ ಹೊಂದಿರುವ ಹಲವರು ಈ ಜಾಮರ್‌ಗಳನ್ನು ಖರೀದಿಸುತ್ತಾರೆ.

ಪೋರ್ಟೆಬಲ್ ಜಿಪಿಎಸ್ ಜಾಮಿಂಗ್ ಸಾಧನವು ಸುಮಾರು 25 ಚದುರ ಮೀಟರ್ ಪ್ರದೇಶದಲ್ಲಿ ಜಿಪಿಎಸ್ ಸಂಕೇತಗಳನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸುತ್ತದೆ. ಇಂಟರ್ನೆಟ್ ಮೋಡೆಮ್ ಗಾತ್ರದ ಜಾಮರ್‌ಗಳೂ ದೊರೆಯುತ್ತಿದ್ದು, ಅವು ಹೆಚ್ಚು ವಿಸ್ತೀರ್ಣದ ಪ್ರದೇಶಗಳಲ್ಲಿ ಜಿಪಿಎಸ್ ಸಂಕೇತಗಳನ್ನು ಸ್ಥಗಿತಗೊಳಿಸುವ ಸಾಮರ್ಥ್ಯ ಹೊಂದಿವೆ.

ಈ ಜಾಮರ್‌ಗಳು ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯನ್ನುಂಟು ಮಾಡಬಹುದು ಎಂಬ ಆತಂಕ ಪೊಲೀಸರದು. ಉಬರ್ ಮತ್ತು ಓಲಾದಂತಹ ಕ್ಯಾಬ್ ಅಗ್ರಿವೇಟರ್ ಸಂಸ್ಥೆಗಳು ತಮ್ಮ ಪ್ರಯಾಣಿಕರ ಸುರಕ್ಷತೆಗಾಗಿ ಜಿಪಿಎಸ್ ಅನ್ನು ನೆಚ್ಚಿಕೊಂಡಿವೆ. ಕ್ಯಾಬ್ ಚಾಲಕ ಒಂದೇ ಒಂದು ನಿಮಿಷದ ಅವಧಿಗೆ ನಿಗದಿತ ಮಾರ್ಗದಿಂದ ಹೊರಳಿದರೂ ಈ ಸಂಸ್ಥೆಗಳಲ್ಲಿ ಎಚ್ಚರಿಕೆಯ ಗಂಟೆ ಮೊಳಗುತ್ತದೆ. ಆದರೆ ಜಿಪಿಎಸ್ ಜಾಮರ್ ಬಳಕೆಯಾದರೆ ಕ್ಯಾಬ್ ಎಲ್ಲಿದೆ ಎನ್ನುವುದೇ ಗೊತ್ತಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News