ತುಂಬು ಗರ್ಭಿಣಿಯನ್ನು ಸೈಕಲ್‌ನಲ್ಲಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ ಪತಿ

Update: 2017-11-17 16:36 GMT

ಜೈಪುರ, ನ.17: ಒಂಬತ್ತು ತಿಂಗಳ ತುಂಬು ಗರ್ಭಿಣಿಯನ್ನು ಆಕೆಯ ಪತಿ ಸೈಕಲ್‌ನಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ ರಾಜಸ್ಥಾನದ ಉದಯ್‌ಪುರದಲ್ಲಿರುವ ಗ್ರಾಮವೊಂದರಲ್ಲಿ ನಡೆದಿದೆ. ರಾಜ್ಯದ ಕಳಪೆ ಆರೋಗ್ಯ ಸೇವೆ ಮತ್ತು ಮೂಲಭೂತ ಸೌಲಭ್ಯಕ್ಕೆ ಕನ್ನಡಿ ಹಿಡಿದಿದೆ.

ಉದಯ್‌ಪುರದ ಕೋತ್ರಾ ಪ್ರದೇಶದ ಅಂಬಾ ಗ್ರಾಮದಲ್ಲಿ ಈ ಘಟನೆಯು ನಡೆದಿದ್ದು ಈ ವಾರ ಈ ಪ್ರದೇಶದಲ್ಲಿ ನಡೆದ ಈ ರೀತಿಯ ಎರಡನೇ ಪ್ರಕರಣ ಇದಾಗಿದೆ.

ತುಂಬು ಗರ್ಭಿಣಿ ಸೀತಾ ಕಪಸಿಯಾಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಪತಿ ಸೈಕಲ್‌ನಲ್ಲಿ ಆಕೆಯನ್ನು ಮಾಮೆರ್ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸುತ್ತಿದ್ದರು. ಆದರೆ ಮಾರ್ಗ ಮಧ್ಯೆ ನೋವು ಹೆಚ್ಚಾಗಿ ಆಕೆ ದಾರಿಯಲ್ಲೇ ಶಿಶುವಿಗೆ ಜನ್ಮ ನೀಡಿದ್ದಾಳೆ. ಆದರೆ ಮಗು ಮೃತಪಟ್ಟಿದೆ.

ಸೀತಾಳ ಹಳ್ಳಿಯಿಂದ ಆರೋಗ್ಯ ಕೇಂದ್ರವು 20 ಕಿ.ಮೀ ದೂರವಿದ್ದು ಅಲ್ಲಿಗೆ ತೆರಳಲು ಸರಿಯಾದ ರಸ್ತೆ ಕೂಡಾ ಇಲ್ಲ ಎಂದು ವರದಿಗಳು ತಿಳಿಸಿವೆ. ಎರಡು ದಿನಗಳ ಹಿಂದೆ ಇದೇ ಹಳ್ಳಿಯ ಗರ್ಭಿಣಿ ಹೆಂಗಸನ್ನು ಆಕೆಯ ಸಂಬಂಧಿಗಳು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಆಕೆ ಮಾರ್ಗ ಮಧ್ಯೆ ಮಗುವಿಗೆ ಜನ್ಮ ನೀಡಿದ್ದಳು.

“ನಮ್ಮ ಹಳ್ಳಿಗೆ ಸರಿಯಾದ ಸಂಪರ್ಕ ಮಾರ್ಗವೇ ಇಲ್ಲದಿರುವಾಗ ನಾವು ಇತರ ಮೂಲಭೂತ ಸೌಕರ್ಯಗಳನ್ನು ಪಡೆಯುವುದಾದರೂ ಹೇಗೆ. ಮೂಲಭೂತ ಸೌಲಭ್ಯಗಳ ಕೊರತೆಯಿಂದಲೇ ಈ ರೀತಿಯ ಘಟನೆಗಳು ನಮ್ಮ ಹಳ್ಳಿಯಲ್ಲಿ ಸಾಮಾನ್ಯವಾಗಿದೆ” ಎಂದು ಗ್ರಾಮದ ಮಾಜಿ ಸರಪಂಚರಾದ ಬಾಬು ಲಾಲ್ ಖರಡಿ ಹಿಂದೂಸ್ಥಾನ್ ಟೈಮ್ಸ್‌ಗೆ ವಿವರಿಸುತ್ತಾರೆ.

ಈ ಬಗ್ಗೆ ಹಿಂದೂಸ್ಥಾನ್ ಟೈಮ್ಸ್ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಸೊಹನ್ ಲಾಲ್ ಪರ್ಮರ್, ಹಲವು ವರ್ಷಗಳಿಂದ ನಾವು ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಬುಧವಾರದಂದು ನಾವು ಪ್ರದೇಶದ ಉಪವಿಭಾಗೀಯ ಅಧಿಕಾರಿಯವರನ್ನು ಭೇಟಿಯಾಗಿದ್ದು ಮನವಿಯನ್ನು ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News