ಕ್ವಾರ್ಟರ್ ಫೈನಲ್, ಸೆಮಿ ಹಾಗೂ ಫೈನಲ್ ನಲ್ಲಿ ಸೆಣಸದೆಯೇ ಚಿನ್ನ ಗೆದ್ದ ಸುಶೀಲ್ ಕುಮಾರ್

Update: 2017-11-18 07:48 GMT

ಇಂದೋರ್, ನ.18: ಮೂರು ವರ್ಷಗಳ ಬಳಿಕ ಕುಸ್ತಿ ಅಖಾಡಕ್ಕೆ ವಾಪಸಾದ ಭಾರತದ ಹಿರಿಯ ಕುಸ್ತಿಪಟು ಸುಶೀಲ್ ಕುಮಾರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್, ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ಸೆಣಸಾಡದೇ ಚಿನ್ನದ ಪದಕ ತನ್ನದಾಗಿಸಿಕೊಂಡರು.
ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಜಯಿಸಿರುವ ಸುಶೀಲ್ ಚಾಂಪಿಯನ್‌ಶಿಪ್‌ನ ಮೊದಲೆರಡು ಪಂದ್ಯಗಳಲ್ಲಿ ಮಾತ್ರ ಆಡಿದ್ದರು. ಕುಸ್ತಿ ಅಖಾಡದಲ್ಲಿ ಕೇವಲ 2 ನಿಮಿಷ, 33 ಸೆಕೆಂಡ್ ಹೋರಾಡಿದ್ದ ಸುಶೀಲ್‌ಗೆ ಚಿನ್ನ ಒಲಿದಿದೆ.
ಕ್ವಾರ್ಟರ್‌ಫೈನಲ್, ಸೆಮಿ ಫೈನಲ್ ಹಾಗೂ ಫೈನಲ್‌ನಲ್ಲಿದ್ದ ಸ್ಪರ್ಧಾಳುಗಳು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಸುಶೀಲ್‌ಗೆ ಸುಲಭವಾಗಿ ಸ್ವರ್ಣದ ಪದಕ ಲಭಿಸಿದೆ.
ಶುಕ್ರವಾರ ನಡೆದ ಫೈನಲ್‌ನಲ್ಲಿ ಎದುರಾಳಿ ಪ್ರವೀಣ್ ರಾಣಾ ಗಾಯದ ಸಮಸ್ಯೆಯಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ 74 ಕೆಜಿ ತೂಕ ವಿಭಾಗದಲ್ಲಿ ಸುಶೀಲ್ ವಿಜಯಿ ಎಂದು ಘೋಷಿಸಲಾಗಿದೆ.

ಕ್ವಾರ್ಟರ್‌ಫೈನಲ್‌ನಲ್ಲಿ ಪ್ರವೀಣ್ ಹಾಗೂ ಸೆಮಿಫೈನಲ್‌ನಲ್ಲಿ ಸಚಿನ್ ದಹಿಯಾ ಅವರು ಸುಶೀಲ್ ವಿರುದ್ಧ ಸ್ಪರ್ಧಿಸದೇ ವಾಕ್‌ಓವರ್ ಮಾಡಿದರು.

‘‘ವಾಕ್‌ಓವರ್ ಮಾಡುವುದು ಅಕ್ರಮವಲ್ಲ. ಕುಸ್ತಿಯಲ್ಲಿ ಇದಕ್ಕೆ ಅವಕಾಶವಿದೆ. ಹೀಗೆ ಮಾಡುವ ಮೊದಲು ತಾಂತ್ರಿಕ ಸಮಿತಿಗೆ ಸರಿಯಾದ ಕಾರಣ ನೀಡಬೇಕು. ಸಮಿತಿಯು ಇದು ಸಿಂಧುವೇ ಅಸಿಂಧುವೇ ಎಂದು ನಿರ್ಧರಿಸುತ್ತದೆ. ಪ್ರಸ್ತುತ ಟೂರ್ನಿಯಲ್ಲಿ ಸುಶೀಲ್ ವಿರುದ್ಧ ಮೂವರು ಕುಸ್ತಿಪಟುಗಳು ನೀಡಿರುವ ಕಾರಣವನ್ನು ತಾಂತ್ರಿಕ ಸಮಿತಿಯು ಕಾನೂನುಬದ್ಧ ಎಂದು ಹೇಳಿದೆ’’ ಎಂದು ಕುಸ್ತಿ ಕೋಚ್ ಸುಜೀತ್ ಮಾನ್ ಹೇಳಿದ್ದಾರೆ.
ಇದೇ ವೇಳೆ, ಮಹಿಳೆಯರ ವಿಭಾಗದಲ್ಲಿ ಸಾಕ್ಷಿ ಮಲಿಕ್ ಹಾಗೂ ‘ದಂಗಲ್ ಗರ್ಲ್’ ಖ್ಯಾತಿಯ ಗೀತಾ ಫೋಗಟ್ ಚಿನ್ನದ ಪದಕ ಜಯಿಸಿದ್ದಾರೆ.
59 ಕೆಜಿ ವಿಭಾಗದ ಫೈನಲ್‌ನಲ್ಲಿ ಗೀತಾ ಅವರು ರವಿತಾರನ್ನು ಮಣಿಸಿದರೆ, ಮಹಿಳೆಯರ 62 ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಅವರು ಹರ್ಯಾಣದ ಪೂಜಾ ಅವರನ್ನು 10-0 ಅಂತರದಿಂದ ಸೋಲಿಸಿದ್ದಾರೆ. ಗೀತಾರ ಪತಿ ಪವನ್ ಕುಮಾರ್ 86 ಕೆಜಿ ತೂಕ ವಿಭಾಗದಲ್ಲಿ ಚಿನ್ನ ಜಯಿಸಲು ಸಫಲರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News