ಭಾರತೀಯ ಚಲನಚಿತ್ರ್ಯೋತ್ಸವದಲ್ಲಿ 9 ಮರಾಠಿ ಚಲನಚಿತ್ರಗಳು

Update: 2017-11-18 12:00 GMT

ಈ ವರ್ಷದ ಪ್ರತಿಷ್ಠಿತ ಭಾರತೀಯ ಚಲನಚಿತ್ರೋತ್ಸವದಲ್ಲಿ ಬರೋಬ್ಬರಿ 9 ಮರಾಠಿ ಚಲನಚಿತ್ರಗಳು ಆಯ್ಕೆಯಾಗಿದ್ದು, ಇತರ ಎಲ್ಲಾ ಪ್ರಾದೇಶಿಕ ಭಾಷಾಚಿತ್ರಗಳನ್ನು ಹಿಂದಿಕ್ಕಿದ್ದು, ಭರ್ಜರಿ ಸಾಧನೆಯನ್ನು ಪ್ರದರ್ಶಿಸಿದೆ.

ಈ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕಾರದಲ್ಲಿ ಸ್ವರ್ಣ ಕಮಲ ವಿಜೇತ ಕಸವ್, ಪ್ರಿಯಾಂಕಾ ಚೋಪ್ರಾ ನಿರ್ಮಾಣದ ‘ವೆಂಟಿಲೇಟರ್’, ಮನೋಜ್ ಕದಂ ನಿರ್ದೇಶನದ ‘ಕ್ಷಿತಿಜ್’, ಪ್ರಸಾದ್ ಓಕ್‌ಅವರ ‘ಕಚ್ಚಾ ಲಿಂಬು’, ಯೋಗೀಶ್ ಸೋಮನ್ ಹಾಗೂ ವಿವೇಕ್ ವಾಘ್‌ಜಂಟಿ ನಿರ್ದೇಶನದ ‘ಮಾಝಾ ಬಿರ್‌ಭಿರಾ’, ಸಾಗರ್‌ಛಾಯಾ ವಂಜಾರಿಯವರ ‘ರೆಡು’, ವರುಣ್ ನಾರ್ವೆಕರ್‌ರ ‘ಮುರಾಂಬ’, ಗಜೇಂದ್ರ ಅಹಿರೆ ಅವರ ‘ಪಿಂಪಲ್’ ಹಾಗೂ ದೀಪಕ್ ಗಾವಡೆಯವರ ‘ಇಡಕ್’, ಚಿತ್ರೋತ್ಸವಕ್ಕೆ ಆಯ್ಕೆಯಾದ 9 ಮರಾಠಿ ಚಿತ್ರಗಳು.

ಹಾಗೆ ನೋಡಿದರೆ ಚಿತ್ರೋತ್ಸವಕ್ಕಾಗಿ 26 ಮರಾಠಿ ಚಿತ್ರಗಳು ಪ್ರವೇಶ ಕೋರಿದ್ದರೂ, ಅಂತಿಮವಾಗಿ 9 ಚಿತ್ರಗಳು ಆಯ್ಕೆಯಾಗಿದ್ದವು.

ಕಳೆದ ವರ್ಷ ಕೇವಲ 4 ಮರಾಠಿ ಚಿತ್ರಗಳು ಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದರೆ, ಈ ಸಾಲಿನಲ್ಲಿ ಅದರ ಎರಡು ಪಟ್ಟಿಗಿಂತಲೂ ಹೆಚ್ಚು ಚಿತ್ರಗಳು ಪ್ರವೇಶ ಗಿಟ್ಟಿಸಿಕೊಂಡಿರುವುದು ಮರಾಠಿ ಚಿತ್ರರಂಗವನ್ನು ಪುಳಕಿತಗೊಳಿಸಿದೆ.

ಮರಾಠಿ ಚಿತ್ರರಂಗವು ಹೆಚ್ಚುಹೆಚ್ಚಾಗಿ ತನ್ನನ್ನು ಪ್ರಯೋಗಶೀಲತೆಗೆ ಒಡ್ಡಿಕೊಳ್ಳುತ್ತದೆ. ಭಾರತೀಯ ಪನೋರಮಾ ವಿಭಾಗದಲ್ಲಿ ಸ್ಪರ್ಧಿಸಲು ಬರುವ ನೂರಾರು ಚಿತ್ರಗಳನ್ನು ಮೀರಿಸಿ ಮರಾಠಿ ಚಿತ್ರಗಳು ಸಾಧನೆ ತೋರಿರುವುದು ನಿಜಕ್ಕೂ ದೊಡ್ಡ ಸಂಗತಿಯೇ ಎಂದು ಖ್ಯಾತ ನಿರ್ದೇಶಕ ವಾಘ್ ಸಂತಸ ವ್ಯಕ್ತಪಡಿಸಿದ್ದಾರೆ.

ಹಾಗೆ ನೋಡಿದರೆ ರವಿ ಜಾಧವ್ ನಿರ್ದೇಶನದ ಮರಾಠಿ ಸಿನೆಮಾ ನ್ಯೂಡ್ ಕೂಡಾ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಆ ಚಿತ್ರವನ್ನು ಅಂತಿಮಪಟ್ಟಿಯಿಂದ ಕೈಬಿಟ್ಟಿತ್ತು. ಸಚಿವಾಲಯದ ಈ ತೀರ್ಮಾನಕ್ಕೆ ನಿರ್ದೇಶಕ ಜಾಧವ್ ಆಘಾತ ವ್ಯಕ್ತಪಡಿಸಿದ್ದಾರೆ. ಪ್ರಾಯಶಃ ಟೈಟಲ್‌ನಿಂದಾಗಿ ಚಿತ್ರವು ಸಚಿವಾಲಯದ ಕೆಂಗಣ್ಣಿಗೆ ಗುರಿಯಾಗಿ ರಬಹುದೆಂದು ಜಾಧವ್ ಸಂದೇಹ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News