ಮಾನ್ಸೂನ್ ಶೂಟೌಟ್ ಗೆ 4 ವರ್ಷಗಳ ಬಳಿಕ ಬಿಡುಗಡೆ ಭಾಗ್ಯ

Update: 2017-11-18 12:38 GMT

‘ಗ್ಯಾಂಗ್ಸ್ ಆಫ್ ವಾಸೈಪುರ್’, ‘ರಾಮನ್ ರಾಘವ್ 2.0’, ‘ಬದ್ಲಾಪುರ್’ನಂತಹ ಚಿತ್ರಗಳಲ್ಲಿ ದಂಗುಬಡಿಸುವಂತಹ ಅಭಿನಯ ನೀಡಿದ್ದ ನವಾಝುದ್ದೀನ್ ಸಿದ್ದೀಕ್, ಇದೀಗ ಇನ್ನೊಂದು ಕ್ರೈಮ್ ಥ್ರಿಲ್ಲರ್ ಚಿತ್ರದೊಂದಿಗೆ ವಾಪಸಾಗುತ್ತಿದ್ದಾರೆ.

‘ಮಾನ್ಸೂನ್ ಶೂಟೌಟ್’ ಎಂದು ಹೆಸರಿಡಲಾದ ಈ ಚಿತ್ರದಲ್ಲಿ ವಿಜಯ್ ವರ್ಮಾ ಹಾಗೂ ತನ್ನಿಶ್ತಾ ಚಟರ್ಜಿ ನಟಿಸಿದ್ದಾರೆ. ಹಾಗೆ ನೋಡಿದರೆ ‘ಮಾನ್ಸೂನ್ ಶೂಟೌಟ್’ 2013ರಲ್ಲೇ ಬಿಡುಗಡೆಗೊಳ್ಳಬೇಕಿತ್ತು. ಹಾಗೂ ಆ ವರ್ಷವೇ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿತ್ತು.ಅಷ್ಟೇ ಅಲ್ಲ ಚಿತ್ರೋತ್ಸವದಲ್ಲಿ ವಿಮರ್ಶಕರಿಂದ ಮುಕ್ತಕಂಠದ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಅದೇಕೋ ವಿತರಕರ ಸಮಸ್ಯೆಯ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ ನನೆಗುದಿಗೆ ಬಿತ್ತು.

ಅಂತೂ ಬಹುದಿನಗಳಿಂದ ಚಿತ್ರರಸಿಕರು ನಿರೀಕ್ಷಿಸುತ್ತಿದ್ದ ‘ಮಾನ್ಸೂನ್ ಶೂಟೌಟ್’ಗೆ ನಾಲ್ಕು ವರ್ಷಗಳ ಸುದೀರ್ಘ ಗ್ಯಾಪ್ ಬಳಿಕ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ.

ಡಿಸೆಂಬರ್ 15ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ‘ಮಾನ್ಸೂನ್ ಶೂಟೌಟ್’ ಬಿಡುಗಡೆಯ ಭಾಗ್ಯ ಕಾಣಲಿದೆ. ಹಂತಕನೊಬ್ಬನನ್ನು ಶೂಟ್ ಮಾಡಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳಬೇಕಾದಾಗ ಪೊಲೀಸ್ ಅಧಿಕಾರಿಯೊಬ್ಬನ ಕುರಿತಾದ ಕಥಾವಸ್ತುವನ್ನು ಚಿತ್ರ ಹೊಂದಿದೆ. ಈ ಚಿತ್ರದಲ್ಲಿ ನವಾಝುದ್ದೀನ್ ಸಿದ್ದೀಕಿ ನಿರ್ದಯಿ ಹಂತಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ಪ್ರತಿಭಾವಂತ ನಟ ವಿಜಯ್ ವರ್ಮಾ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಗೀತಾಂಜಲಿ ಥಾಪಾ,ನೀರಜ್ ಕಾಬಿ ಹಾಗೂ ಶ್ರೀಜಿತಾ ದೇ ಕೂಡಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಮಿತ್ ಕುಮಾರ್ ನಿರ್ದೇಶನದ ಈ ಚಿತ್ರವು ಕಾನ್ ಚಿತ್ರೋತ್ಸವದಲ್ಲಿ ಶ್ರೇಷ್ಠ ಛಾಯಾಗ್ರಹಣ ವಿಭಾಗದಲ್ಲಿ ಗೋಲ್ಡನ್ ಕ್ಯಾಮರಾ ಪ್ರಶಸ್ತಿ ಕೂಡಾ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News