ಮೋದಿ, ರಾಮ್‌ದೇವ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಲು ಕೋರಿಕೆ

Update: 2017-11-18 14:55 GMT

ಭೋಪಾಲ್, ನ.18: ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಬಿಜೆಪಿ ಮುಖಂಡರು 2014ರಲ್ಲಿ ಚುನಾವಣೆ ಸಂದರ್ಭ ನೀಡಲಾಗಿದ್ದ ಭರವಸೆಯನ್ನು ಈಡೇರಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿರುವ ಮಧ್ಯಪ್ರದೇಶದ ವಕೀಲರ ತಂಡವೊಂದು, ಮೋದಿ ಹಾಗೂ ರಾಮ್‌ದೇವ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಲು ಆದೇಶಿಸಬೇಕೆಂದು ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ.

  ಅಧಿಕಾರಕ್ಕೆ ಬಂದರೆ ಕೇವಲ 100 ದಿನದಲ್ಲಿ ವಿದೇಶದಲ್ಲಿ ಬಚ್ಚಿಟ್ಟಿರುವ ಕಾಳಧನವನ್ನು ಮರಳಿ ತರಲಾಗುತ್ತದೆ ಮತ್ತು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂ. ಜಮೆ ಮಾಡಲಾಗುತ್ತದೆ. ಅಲ್ಲದೆ ಜಮ್ಮು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಗುವುದು ಎಂದು ಮೋದಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಚುನಾವಣಾ ಪ್ರಚಾರ ಸಭೆಯಲ್ಲಿ ಘೋಷಿಸಿದ್ದರು . ಆದರೆ ಈಗ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಭರವಸೆ ಈಡೇರಿಲ್ಲ. ಆದ್ದರಿಂದ ಇವರ ವಿರುದ್ಧ ನಂಬಿಕೆದ್ರೋಹ, ವಂಚನೆ ಪ್ರಕರಣವನ್ನು ದಾಖಲಿಸಲು ಆದೇಶಿಸಬೇಕು ಎಂದು ನಾಲ್ವರು ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಈ ಸಭೆಯ ವೀಡಿಯೊ ತುಣುಕುಗಳನ್ನು ಅರ್ಜಿಯ ಜೊತೆ ಸಲ್ಲಿಸಿದ್ದಾರೆ.

ಈ ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯ, ಪ್ರಕರಣದ ಬಗ್ಗೆ ತನಿಖೆ ನಡೆಸಿ ಡಿ.22ರ ಒಳಗೆ ವಿವರವಾದ ತನಿಖಾ ವರದಿ ಸಲ್ಲಿಸುವಂತೆ ನಗರದ ಪೊಲೀಸರಿಗೆ ತಿಳಿಸಿದೆ ಎಂದು ಅರ್ಜಿದಾರರಲ್ಲಿ ಒಬ್ಬರಾದ ರಾಕೇಶ್ ಶುಕ್ಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News