ಮೂಗು ಕತ್ತರಿಸುವ ಮೂಲಕ ರಾಮರಾಜ್ಯದ ಉದ್ಘಾಟನೆ...!

Update: 2017-11-18 18:14 GMT

ದೇಶಾದ್ಯಂತ ಪದ್ಮಾವತಿಯ ಮಾನ ಮರ್ಯಾದೆಯನ್ನು ಕಾಪಾಡಲು ಜನರು ಬೀದಿಗಿಳಿದಿರುವುದನ್ನು ನೋಡಿ ಕಾಸಿ ರೋಮಾಂಚನಗೊಂಡ. ಮೊದಲ ಬಾರಿಗೆ ದೇಶದಲ್ಲಿ ಒಂದು ಹೆಣ್ಣಿನ ಮಾನಪ್ರಾಣ ಕಾಪಾಡಲು ಜನರು ಬೀದಿಗಿಳಿದಿರುವುದು ಸಣ್ಣ ವಿಷಯವೇ? ತನ್ನ ಜೋಳಿಗೆಯ ಜೊತೆಗೆ ಪದ್ಮಾವತಿಯ ಮನೆ ಹುಡುಕಿಕೊಂಡು ಪತ್ರಕರ್ತ ಎಂಜಲು ಕಾಸಿ ರಾಜಸ್ಥಾನಕ್ಕೆ ಕಾಲಿಟ್ಟ. ರಸ್ತೆಗಿಳಿಯುತ್ತಿದ್ದಂತೆಯೇ ಯಾವುದೋ ಒಂದು ಹೆಣ್ಣಿನ ಮೇಲೆ ಕೇಸರಿ ಭಕ್ತರು ದಾಳಿ ನಡೆಸುತ್ತಿದ್ದರು. ಈಕೆಯೇ ಪದ್ಮಾವತಿಯಾಗಿರಬೇಕು ಎಂದು ಕಾಸಿ ಅತ್ತ ನಡೆದ. ಯಾರೋ ವಿವರಿಸಿದರು ‘‘ಆಕೆ ಬೀಫ್ ತಿಂದಿದ್ದಾಳೋ ಇಲ್ಲವೋ ಎನ್ನುವುದನ್ನು ಗೋರಕ್ಷಕರು ಆಕೆಯ ಸೀರೆ ಬಿಚ್ಚಿ ಪರೀಕ್ಷಿಸುತ್ತಿದ್ದಾರೆ...’’

ಕಾಸಿ ಬೆಚ್ಚಿ ಬಿದ್ದ ‘‘ಆಕೆಯ ಹೆಸರು ಪದ್ಮಾವತಿಯೇ?’’ ಕೇಳಿದ.

ಕಾಸಿಯನ್ನು ವಿಚಿತ್ರ ಪ್ರಾಣಿಯೆಂಬಂತೆ ದಿಟ್ಟಿಸಿ ನೋಡಿದ ಆತ ‘‘ಈಕೆಯ ಮನೆಯಲ್ಲಿ ಬೀಫ್ ದೊರಕಿದೆ. ಮನೆಯಾತನನ್ನು ಕೊಂದು ಹಾಕಿ ಸಂಸ್ಕೃತಿಯನ್ನು ರಕ್ಷಿಸಲಾಗಿದೆ. ಇದೀಗ ಈಕೆ ಬೀಫ್ ತಿಂದಿದ್ದಾಳೋ ಎನ್ನುವುದನ್ನು ಪರೀಕ್ಷಿಸಲಾಗುತ್ತದೆ...ಯಾಕೆಂದರೆ ಬೀಫ್ ತಿನ್ನದೇ ಇದ್ದರೆ ಅನ್ಯಾಯವಾಗಿ ಈಕೆಯ ಮಾನ, ಪ್ರಾಣ ಹೋಗಬಾರದಲ್ಲ... ಹೆಣ್ಣಿನ ಕುರಿತಂತೆ ಅಪಾರ ಗೌರವವಿರುವ ಸಂಸ್ಕೃತಿ ನಮ್ಮದು....’’

‘‘ಇಲ್ಲಿ ಪದ್ಮಾವತಿ ಎನ್ನುವ ಮಹಿಳೆಯ ಪರವಾಗಿ ಜನರು ಬೀದಿಗಿಳಿದಿದ್ದಾರಲ್ಲ? ಆಕೆಯ ಮನೆ ಎಲ್ಲಿಯಾಗುತ್ತದೆ?’’

ಪದ್ಮಾವತಿ ಎಂದದ್ದೇ....‘‘ಜೈ ರಜಪೂತ್...ಜೈ ರಾಣಿ ಪದ್ಮಿನಿ...’’ ಎಂದು ಗುಂಪು ಕಾಸಿಯನ್ನು ಸುತ್ತುವರಿಯಿತು.

ಯಾರೋ ಒಬ್ಬ ಹಿಂದಿಯಲ್ಲಿ ಕೇಳಿದ ‘‘ಎಲ್ಲಿಂದ ಬಂದಿದ್ದೀಯ?’’

ಏನನಿಸಿತೋ...‘‘ರಾಣಿ ಚೆನ್ನಮ್ಮಾಜಿ, ಬೆಳವಡಿ ಮಲ್ಲಮ್ಮಾಜಿ, ಉಳ್ಳಾಲ ಅಬ್ಬಕ್ಕಾಜಿಯವರ ನಾಡಿನಿಂದ ಬಂದಿದ್ದೇನೆ....ಪದ್ಮಾವತಿಗೆ ಆಗಿರುವ ಅವಮಾನದ ಕುರಿತಂತೆ ವಿವರಗಳನ್ನು ತಿಳಿದುಕೊಳ್ಳಲು....’’ ಹೆದರುತ್ತಲೇ ತನ್ನ ಪರಿಚಯವನ್ನು ವಿವರಿಸಿದ.

ಎಲ್ಲರೂ ‘‘ಭಾರತ್ ಮಾತಾಕಿ ಜೈ, ರಜಪೂತ ಸೇನೆಗೆ ಜೈ, ರಾಣಿ ಪದ್ಮಿನಿಗೆ ಜೈ, ಅಲ್ಲಾವುದ್ದೀನ್ ಖಿಲ್ಜಿಗೆ ಧಿಕ್ಕಾರ...’’ ಎಂದು ಚೀರಾಡ ತೊಡಗಿದರು. ಅಷ್ಟರಲ್ಲಿ ಒಬ್ಬ ಕೇಸರಿ ವೀರ ಸೇನಾನಿ ಮಾತನಾಡತೊಡಗಿದ ‘‘ಮಾನ್ಯರೆ, ರಾಣಿ ಪದ್ಮಾವತಿಯವರ ಮಾನ ರಕ್ಷಣೆಗಾಗಿ ಇದೀಗ ಕಿತ್ತೂರು ರಾಜ್ಯದಿಂದ ರಾಣಿ ಚೆನ್ನಮ್ಮಾ ಅವರು ತಮ್ಮ ದೂತನನ್ನು ಕಳುಹಿಸಿಕೊಟ್ಟಿದ್ದಾರೆ. ಅವರಿಗೆ ಮಾಹಿತಿಯನ್ನು ರವಾನಿಸಿ ನಮ್ಮ ರಜಪೂತ ಸೇನೆಯನ್ನು ಆ ನಾಡಿನ ಕಡೆಗೂ ವಿಸ್ತರಿಸಿ ಮಹಾರಾಣಿಯವರ ಮಾನ, ಗೌರವವನ್ನು ಉಳಿಸಬೇಕಾಗಿದೆ....’’ ಎಂದದ್ದೇ ‘‘ಜೈ ರಾಣಿ ಪದ್ಮಾವತಿ’’ ಎಂದು ಕೂಗಿದರು.

ಪತ್ರಕರ್ತ ಎಂಜಲು ಕಾಸಿಗೆ ಒಂದೂ ಅರ್ಥವಾಗಲಿಲ್ಲ ‘‘ಹಾಗೇನೂ ಅಲ್ಲ, ನಾನು ಅಲ್ಲಿನ ಪತ್ರಿಕೆಯ ಪ್ರತಿನಿಧಿಯಾಗಿ ಸುದ್ದಿ ರವಾನಿಸಲು ಬಂದಿದ್ದೇನೆ....ಅಲ್ಲಿ ರಸ್ತೆಯಲ್ಲಿ ಗೂಂಡಾಗಳಿಂದ ಹಲ್ಲೆಗೊಳಗಾಗುತ್ತಿರುವ ಹೆಣ್ಣು ಪದ್ಮಾವತಿಯವರೇ? ಹಲ್ಲೆ ಮಾಡುತ್ತಿರುವವರು ಅಲ್ಲಾವುದ್ದೀನ್ ಖಿಲ್ಜಿಯ ಕಡೆಯವರೆ?’’ ಎಂಜಲು ಕಾಸಿ ಮುಗ್ಧವಾಗಿ ಕೇಳಿದ.

‘‘ಹೇ ಅವರು ಗೂಂಡಾಗಳಲ್ಲ, ರಜಪೂತ ಸಂಸ್ಕೃತಿ ರಕ್ಷಕರು....’’ ಅಷ್ಟರಲ್ಲಿ ಜನರು ಕಾಸಿಯ ವಿರುದ್ಧ ರೊಚ್ಚಿಗೆದ್ದರು ‘‘ಹೊಡಿಯಿರಿ, ಬಡಿಯಿರಿ, ಕೊಲ್ಲಿರಿ....’’ ಎಂದು ಅಲ್ಲಾವುದ್ದೀನ್ ಖಿಲ್ಜಿಯನ್ನೇ ಕಂಡಂತೆ ಆಡತೊಡಗಿದರು. ಅಷ್ಟರಲ್ಲಿ ಮುಖಂಡ ಸಮಾಧಾನ ಪಡಿಸಿದ ‘‘ನೋಡಿ...ನಮ್ಮ ರಾಣಿಯವರ ಪರವಾಗಿ ಕಿತ್ತೂರು ರಾಣಿಯ ಕಡೆಯಿಂದ ಬಂದಿದ್ದಾನೆ. ಆದುದರಿಂದ ಅವರ ಪ್ರಾಣ ರಕ್ಷಣೆ ನಮ್ಮ ಕರ್ತವ್ಯ...’’ ಮತ್ತೆ ರಾಣಿ ಪದ್ಮಿನಿ ಹೆಸರಲ್ಲಿ ಘೋಷಣೆ ಕೂಗಲಾಯಿತು.

ಅಷ್ಟರಲ್ಲಿ ಇನ್ನೊಬ್ಬ ಮುಖ್ಯಸ್ಥ ಹೇಳಿದ ‘‘ರಾಣಿ ಪದ್ಮಾವತಿ ಚಿತ್ರದಲ್ಲಿ ರಜಪೂತ ರಾಣಿಯವರಿಗೆ ಅಪಮಾನ ಮಾಡಲಾಗಿದೆ. ಆದುದರಿಂದ ಪದ್ಮಾವತಿಯ ಪಾತ್ರವನ್ನು ವಹಿಸಿರುವ ನಟಿಯ ಮೂಗು ಕತ್ತರಿಸುತ್ತೇವೆ...’’

ಕಾಸಿ ಬೆಚ್ಚಿದ ‘‘ಸಾರ್...ಮೂಗು ಕತ್ತರಿಸುವುದು ಅಪರಾಧವಲ್ಲವೇ?’’

‘‘ಶೂರ್ಪನಖಿಯ ಮೂಗು ಕತ್ತರಿಸಿದಂತೆ ಈಕೆಯ ಮೂಗು ಕತ್ತರಿಸಿ ರಾಮರಾಜ್ಯ ಸ್ಥಾಪನೆಯಾಗಿರುವುದನ್ನು ನಾವು ಘೋಷಿಸಲಿದ್ದೇವೆ. ರಾಮರಾಜ್ಯದ ಉದ್ಘಾಟನೆ ಈ ಮೂಗು ಕತ್ತರಿಸುವ ಮೂಲಕವೇ ಆಗಲಿದೆ....’’

‘‘ಸಾರ್...ಆ ಚಿತ್ರ ಬಿಡುಗಡೆಯೇ ಆಗಿಲ್ಲ....ನೀವು ಚಿತ್ರ ನೋಡಿದ್ದೀರಾ?’’ ಕಾಸಿಗೆ ಇದು ಒಂದು ಸಿನೆಮಾ ವಿಷಯ ಎಂದು ಗೊತ್ತಾಗಿ ನಿರಾಸೆಯಾಗಿತ್ತು.

 ‘‘ಚಿತ್ರ ನೋಡದೇ ಇದ್ದರೇನಾಯಿತು? ಅಲ್ಲಾವುದ್ದೀನ್ ಖಿಲ್ಜಿ ಪಾತ್ರವನ್ನು ಸ್ಫುರದ್ರೂಪಿಯಾಗಿರುವ ನಾಯಕ ನಟನಿಗೆ ಕೊಟ್ಟಿರುವುದೇ ರಜಪೂತರಿಗೆ ಮಾಡಿರುವ ಅವಮಾನ. ನಾಯಕ ನಟ ಅಲ್ಲಾವುದ್ದೀನ್ ಪಾತ್ರ ಮಾಡುವುದರಿಂದ ಆತ ನಾಯಕ ನಟಿಯ ಜೊತೆಗೆ ನರ್ತಿಸಲೇ ಬೇಕಾಗುತ್ತದೆ. ಒಬ್ಬ ಮ್ಲೇಚ್ಛ ರಜಪೂತ ರಾಣಿಯ ಮೈಮುಟ್ಟಿ ನರ್ತಿಸುವುದು ಇಡೀ ದೇಶಕ್ಕೆ ಅವಮಾನವಲ್ಲವೇ?’’ ಅವರು ಒಟ್ಟಾಗಿ ಕೇಳಿದರು. ಹೌದು ಅನ್ನಿಸಿತು ಕಾಸಿಗೆ.

‘‘ಸಾರ್...ಹಾಗಾದರೆ ಈಗ ಏನು ಮಾಡುವುದು?’’ ಕಾಸಿ ಅರ್ಥವಾಗದೆ ಕೇಳಿದ.

‘‘ಮಾಡುವುದೇನು, ನಾವು ಹೇಳಿದ ಬದಲಾವಣೆ ಮಾಡಬೇಕು....’’ ಒಬ್ಬ ಪ್ರತಿಭಟನಾಕಾರ ಹೇಳಿದ. ಉಳಿದವರು ‘‘ಜೈ ರಾಣಿ ಪದ್ಮಾವತಿ’’ ಎಂದು ಕೂಗಿದರು.

‘‘ಯಾವ ಬದಲಾವಣೆ ಸಾರ್?’’ ಕಾಸಿ ಅಂಜುತ್ತಲೇ ಕೇಳಿದ. ಅವನಿಗೀಗ ಮೂಗಿನ ಚಿಂತೆ ಹತ್ತಿತ್ತು,.

‘‘ಮುಖ್ಯವಾಗಿ ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರವನ್ನು ಒಬ್ಬ ಕೆಟ್ಟ ಖಳನಾಯಕ ಪಾತ್ರ ನಿರ್ವಹಿಸುವ ನಟನಿಗೆ ನೀಡಬೇಕು....ಆತ ಯಾವ ಕಾರಣಕ್ಕೂ ರಾಣಿ ಪದ್ಮಿನಿಯನ್ನು ನೋಡಲೇಬಾರದು...’’ ಅವರು ವಿವರಿಸಿದರು.

‘‘ಪದ್ಮಿನಿಯನ್ನು ನೋಡದೆ ಶೂಟಿಂಗ್ ಮಾಡೋದು ಹೇಗೆ ಸಾರ್...?’’ ಕಾಸಿ ಕೇಳಿದ.

‘‘ಪದ್ಮಿನಿಯನ್ನು ಮ್ಲೇಚ್ಛ ಅಲ್ಲಾವುದ್ದೀನ್ ನೋಡುವುದು ರಜಪೂತರಿಗೆ ಅವಮಾನ. ಅಲ್ಲಾವುದ್ದೀನ್ ರಜಪೂತರ ಜೊತೆಗೆ ನಡೆಯುವ ಯುದ್ಧದಲ್ಲಿ ಸೋಲಬೇಕು....’’ ಇನ್ನೊಂದು ನಿಯಮ ಹಾಕಿದರು.

‘‘ಸಾರ್ ಇತಿಹಾಸದಲ್ಲಿ ಅದು ಇಲ್ಲವಲ್ಲ...’’ ಕಾಸಿ ಕೇಳಿದ.

‘‘ನಿನಗೆ ನಿನ್ನ ಮೂಗು ಬೇಕೋ ಬೇಡವೋ...?’’ ಮುಖಂಡ ಕೇಳಿದ. ‘ಬೇಕು’ ಎಂದು ಕಾಸಿ ಮೂಗಿನ ಮೇಲೆ ಕೈ ಅಡ್ಡ ಇಟ್ಟ.

‘‘ಹಾಗಾದರೆ ನಾವು ಹೇಳಿದಂತೆ ಬದಲಾವಣೆ ಮಾಡಬೇಕು. ಕೊನೆಯಲ್ಲಿ ರಾಣಿ ಪದ್ನಿನಿ ಅಲ್ಲಾವುದ್ದೀನನ್ನು ಕೊಂದು ಚಿತೆಗೆ ಹಾರಬೇಕು ಹಾಗೂ ನಟಿ ದೀಪಿಕಾ ಪಡುಕೊಣೆ ನಿಜವಾದ ಚಿತೆಗೇ ಹಾರಿ ಪ್ರಾಣ ಬಿಡಬೇಕು. ಯಾಕೆಂದರೆ ಪದ್ಮಿನಿಯ ಪಾತ್ರ ನಿರ್ವಹಿಸಿದ ಬಳಿಕ ಆಕೆ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದ ನಟನ ಜೊತೆಗೆ ಬೇರೆ ಚಿತ್ರದಲ್ಲಿ ಅಭಿನಯಿಸಿದರೆ ಅದು ಪದ್ಮಿನಿಗೆ, ರಜಪೂತರಿಗೆ, ದೇಶದ ಸಂಸ್ಕೃತಿಗೆ ಮಾಡುವ ಅವಮಾನ...’’

‘‘ಸಾರ್...ನಾನು ಇದನ್ನು ನಿರ್ಮಾಪಕ, ನಿರ್ದೇಶಕರಿಗೆ ತಲುಪಿಸಿ ಬರುವೆ...ಅವಕಾಶ ಮಾಡಿಕೊಡಿ...’’ ಕಾಸಿ ಮನವಿ ಮಾಡಿದ. ಎಲ್ಲರೂ ‘ಜೈ ಪದ್ಮಾವತಿ’ ಎಂದು ಘೋಷಣೆ ಕೂಗಿ ಕಾಸಿಯನ್ನು ಕಳುಹಿಸಿಕೊಟ್ಟರು. ಮೂಗು ಉಳಿದ ಸಂತೋಷದಲ್ಲಿ ಅದಾವುದೋ ಲಾರಿ ಹತ್ತಿ ಕಾಸಿ ಬೆಂಗಳೂರು ಸೇರಿದ.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News