ಕೆಂಪಿರ್ವೆ

Update: 2017-11-18 18:29 GMT

ಕೌಟುಂಬಿಕ ಕತೆಯೊಂದಿಗೆ ಆರಂಭವಾಗಿ ರಿಯಲ್ ಎಸ್ಟೇಟ್ ಮಾಫಿಯಾದ ರೋಚಕ ದಂಧೆಯನ್ನು ಬಿಚ್ಚಿಡುತ್ತಾ ಸಾಗುವ ಆಕರ್ಷಕ ಚಿತ್ರ ‘ಕೆಂಪಿರ್ವೆ’.

ಕೈಲಿದ್ದ ಲಕ್ಷ ರೂ.ನ್ನು ಚಿಟ್‌ಫಂಡ್‌ನಲ್ಲಿ ಕಳೆದುಕೊಂಡು ಮಗನಿಗೆ ಭಾರವಾಗಿ ಮನೆಯಲ್ಲೇ ಕಳೆಯುವ ವೃದ್ಧ ವೆಂಕಟೇಶ ಮೂರ್ತಿ. ಸೊಸೆಯಿಂದ ಆತನ ಮೇಲೆ ಸದಾ ಮೂದಲಿಕೆಯ ಮಾತುಗಳು. ಇಂಥ ಸಂದರ್ಭದಲ್ಲಿ ರಮೇಶ್ ನಾಯ್ಡು ಎಂಬ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ, ವೆಂಕಟೇಶ ಮೂರ್ತಿಯಲ್ಲಿ ಅಕ್ಕರೆ ತೋರಿಸಿ ಅವರಿಗೊಂದು ಕೆಲಸ ನೀಡುತ್ತಾರೆ. ಅಚ್ಚರಿಯೆಂಬಂತೆ ಅದರಲ್ಲಿ ಅವರು ಚೆನ್ನಾಗಿ ಸಂಪಾದನೆ ಮಾಡುತ್ತಾರೆ. ಮನೆಯಲ್ಲಿಯೂ ಆದರಾತಿಥ್ಯ ದೊರೆಯುತ್ತದೆ. ಆದರೆ ಇದರ ನಡುವೆ ರಿಯಲ್ ಎಸ್ಟೇಟ್ ಉದ್ಯಮದ ಹೆಸರಲ್ಲಿ ನಡೆಯುತ್ತಿರುವ ಒಳದಂಧೆಯ ಅರಿವು ವೆಂಕಟೇಶ ಮೂರ್ತಿಗೆ ಆಗುತ್ತದೆ. ತಕ್ಷಣ ಅದನ್ನು ತಿಳಿಸಿ ರಾಜೀನಾಮೆ ನೀಡುತ್ತಾರೆ. ಆದರೆ ಈ ಬಗ್ಗೆ ಮೊದಲೇ ತಿಳಿದಿರುವ ರಮೇಶ್ ನಾಯ್ಡು ಮೂರ್ತಿಯನ್ನು ದೊಡ್ಡದೊಂದು ಜಾಲದಲ್ಲಿ ಕೆಡವುತ್ತಾನೆ. ಆದರೆ ಅಲ್ಲಿಂದ ಎದ್ದು ನಿಲ್ಲುವ ವೆಂಕಟೇಶ ಮೂರ್ತಿ ಹೇಗೆ ಕೆಂಪಿರುವೆಯಂತೆ ನಾಯ್ಡುಗೆ ಕಾಟ ನೀಡುತ್ತಾರೆ ಎನ್ನುವುದೇ ಚಿತ್ರದ ಪ್ರಧಾನ ಅಂಶ.

ವೆಂಕಟೇಶ್ ಮೂರ್ತಿಯಾಗಿ ದತ್ತಾತ್ರೇಯ (ದತ್ತಣ್ಣ) ಎಂದಿನಂತೆ ಪಾತ್ರವೇ ತಾವಾಗಿದ್ದಾರೆ. ವೇಷಗಳಲ್ಲಿ ಮಾತ್ರವಲ್ಲ, ಅಭಿನಯದಲ್ಲಿಯೂ ನೋವು ತಿನ್ನುವ ಬಡ ವೃದ್ಧ ಮತ್ತು ಸಿರಿವಂತ ರಸಿಕನಾಗಿ ಗಮನ ಸೆಳೆದಿದ್ದಾರೆ. ಚಿತ್ರದ ಪ್ರಥಮ ದೃಶ್ಯ ಪಾರ್ಕ್‌ನಿಂದ ಶುರುವಾಗುತ್ತದೆ. ದತ್ತಣ್ಣನನ್ನು ಈಗಾಗಲೇ ಅಂಥ ದೃಶ್ಯಗಳಲ್ಲಿ ಸಾಕಷ್ಟು ಬಾರಿ ನೋಡಿರುವುದರಿಂದ ಆರಂಭ ಸಾಮಾನ್ಯವೆನಿಸುತ್ತದೆ.

ಆದರೆ ರಮೇಶ ನಾಯ್ಡು ಪಾತ್ರಧಾರಿ ಲಕ್ಷ್ಮಣ್‌ರ ಆಗಮನವಾಗುವುದರೊಂದಿಗೆ ಪೂರ್ತಿ ಚಿತ್ರ ಇನ್ನೊಂದು ಮಟ್ಟಕ್ಕೆ ಎದ್ದು ನಿಲ್ಲುತ್ತದೆ. ಕನ್ನಡ ಸಿನೆಮಾಗಳ ಖ್ಯಾತ ಗೀತರಚನೆಕಾರ, ನಿರ್ದೇಶಕ ಸಿವಿ ಶಿವಶಂಕರ್‌ರ ಪುತ್ರ ಹಾಗೂ ನಿರ್ದೇಶಕ ವೆಂಕಟ್‌ರ ಸಹೋದರರಾಗಿರುವ ಲಕ್ಷ್ಮಣ್ ಕನ್ನಡಕ್ಕೆ ಸಿಕ್ಕಿರುವ ಹೊಸದೊಂದು ಪ್ರತಿಭೆ ಎಂದು ನಿರೂಪಿಸಿದ್ದಾರೆ.

ಒಂದು ರೀತಿಯಲ್ಲಿ ಇವರಿಬ್ಬರ ಪಾತ್ರಗಳೇ ಚಿತ್ರದ ಆಕರ್ಷಕ ಅಂಶವೆನ್ನಬಹುದು. ಅದೇ ಕಾರಣಕ್ಕೆ ತನಿಖಾಧಿಕಾರಿಯ ಪಾತ್ರ ಡಮ್ಮಿಯಾದಂತೆ ಅನಿಸುತ್ತದೆ. ಆದರೆ ಒಟ್ಟು ಚಿತ್ರ ನೀಡುವ ಮನರಂಜನೆ ಮತ್ತು ನಮ್ಮಿಂದಿಗೇ ಸೇರಿರುವ ದಂಧೆಗಳ ಮಾಹಿತಿಯ ಮುಂದೆ ಉಳಿದ ಒಂದಷ್ಟು ಅಸಮಾಧಾನಗಳು ಲೆಕ್ಕಕ್ಕೆ ಸಿಗುವುದಿಲ್ಲ. ಹಾಗಾಗಿ ಪ್ರೇಕ್ಷಕ ಮನಸೂರೆಗೊಳ್ಳುತ್ತಿರುವ ಹೊಸ ಮಾದರಿಯ ಚಿತ್ರಗಳ ಪಟ್ಟಿಯಲ್ಲಿ ಖಂಡಿತವಾಗಿ ಸೇರ ಬಲ್ಲಂಥ ಚಿತ್ರ ಕೆಂಪಿರ್ವೆ.

 ತಾರಾಗಣ: ಎಚ್. ಜಿ. ದತ್ತಾತ್ರೇಯ, ಲಕ್ಷ್ಮಣ್ ಶಿವಶಂಕರ್, ಸಯ್ಯಾಜಿ ಶಿಂಧೆ ಮೊದಲಾದವರು.
ನಿರ್ದೇಶನ: ವೆಂಕಟ್ ಭಾರದ್ವಾಜ್
ನಿರ್ಮಾಣ: ಶಿವಶಂಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News