ಬದುಕಲು ಕಲಿತ ಶ್ರೀ ಶ್ರೀ

Update: 2017-11-19 06:36 GMT

ಡಿಸೆಂಬರ್ ಆರು- ಬಾಬರಿ ಮಸೀದಿ ಕೆಡವಿದ ದಿನ. ಭಾರತೀಯರ ಭಾವನೆಗಳಿಗೆ ಬೆಂಕಿ ಇಟ್ಟ ದಿನ. ಆ ದಿನ ಮತ್ತೆ ಹತ್ತಿರವಾಗುತ್ತಿದೆ, ಎಲ್ಲ ನೆನಪಾಗುತ್ತಿದೆ. ಬಾಬರಿ ಮಸೀದಿ ಕೆಡವಿ 25 ವರ್ಷಗಳಾದವು. ನಾಯಕರು ಬದಲಾದರು, ಸರಕಾರಗಳು ಬದಲಾದವು. ರಾಮ ಮಂದಿರವೂ ನಿರ್ಮಾಣವಾಗಲಿಲ್ಲ, ಮಸೀದಿಯೂ ಮೇಲೇಳಲಿಲ್ಲ. ದೇಶಕ್ಕೆ ಅಂಟಿದ ಕಳಂಕವೂ ಅಳಿಯಲಿಲ್ಲ, ಜನರ ಹೃದಯಕ್ಕೆ ಬಿದ್ದ ಬೆಂಕಿಯೂ ಆರಲಿಲ್ಲ. ಆದರೆ ಕಳೆದ 25 ವರ್ಷಗಳಿಂದ ಉರಿಯುತ್ತಲೇ ಇರುವ ಈ ಬೆಂಕಿಯಿಂದ ಮೈ ಕಾಯಿಸಿಕೊಳ್ಳುವ, ಲಾಭ ಮಾಡಿಕೊಳ್ಳುವ ಅವಕಾಶವಾದಿ ರಾಜಕಾರಣಿಗಳು, ಖಾವಿಧಾರಿಗಳು, ಮೌಲಾನಗಳಿಗೇನು ಕಡಿಮೆ ಇಲ್ಲ.

ಬಾಬರಿ ಮಸೀದಿ-ರಾಮಜನ್ಮಭೂಮಿ ಜಾಗಕ್ಕೆ ಸಂಬಂಧಿಸಿದ ವಿವಾದ ಕೋರ್ಟ್ ಮೆಟ್ಟಿಲು ಹತ್ತಿದೆ. ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ರಾಮ್ ಲಲ್ಲಾ ಹೆಸರಿನ ಮೂರು ಸಂಸ್ಥೆಗಳು- ಆ ಜಾಗ ನಮ್ಮದು ಎಂದು ತಕರಾರು ತೆಗೆದಿವೆ. ಅಲಹಾಬಾದ್ ಹೈಕೋರ್ಟ್, ದಿಲ್ಲಿ ಸುಪ್ರೀಂ ಕೋರ್ಟ್ ಹಲವು ಸುತ್ತಿನ ವಿಚಾರಣೆ, ವಾದ-ವಿವಾದ ನಡೆಸಿದೆ. ಮಸೀದಿ ಕೆಡವಲು ಮುಂದಾಳತ್ವ ವಹಿಸಿದ್ದ ಅಡ್ವಾಣಿ, ಉಮಾಭಾರತಿ, ಮುರಳಿ ಮನೋಹರ ಜೋಷಿಯನ್ನು ಕೋರ್ಟಿಗೆ ಕರೆಸಿ ಛೀಮಾರಿ ಹಾಕಿದ್ದೂ ಆಗಿದೆ. ಬರುವ ಡಿಸೆಂಬರ್ ಐದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಅಂತಿಮ ವಿಚಾರಣೆ ಶುರುವಾಗಲಿದೆ.

ಈ ಹಂತದಲ್ಲಿ ‘ಕೋರ್ಟಿನಿಂದ ಹೊರಗಡೆ ವಿವಾದ ಬಗೆಹರಿಯುವುದಾದರೆ ಒಳ್ಳೆಯದು’ ಎಂಬ ಇಂಗಿತ ಅಥವಾ ಷಡ್ಯಂತ್ರ, ಒಂದು ವರ್ಗದಿಂದ ವ್ಯಕ್ತವಾಗುತ್ತಿದೆ. ತಕರಾರು ತೆಗೆದಿರುವ ಸಂಸ್ಥೆಗಳೊಂದಿಗೆ ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಬೇಕೆಂದು ಉತ್ತರ ಪ್ರದೇಶದ ಒಂದು ತಂಡ, ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿಯವರನ್ನು ಭೇಟಿ ಮಾಡಿ ಮನವೊಲಿಸಿದೆ.

ನಾವಿಲ್ಲಿ ಯೋಚಿಸಬೇಕಾದ ವಿಚಾರವೆಂದರೆ, ಬಾಬರಿ ಮಸೀದಿ ಕೆಡಹುವ ಘನಕಾರ್ಯದಲ್ಲಿ ಹಿಂದೂ ಸನಾತನ ಸಂಸ್ಥೆಗಳು, ಧಾರ್ಮಿಕ ದತ್ತಿ ಕೇಂದ್ರಗಳು, ಮಠಾಧೀಶರು, ಸ್ವಾಮೀಜಿಗಳು, ಬಾಬಾಗಳು, ಗುರೂಜಿಗಳು, ರಾಜಕೀಯ ಪುಢಾರಿಗಳು ಎಲ್ಲರೂ ಭಾಗಿಯಾಗಿದ್ದರು. ಮಸೀದಿ ಕೆಡವಿ ಅದೇ ಜಾಗದಲ್ಲಿ ರಾಮಮಂದಿರ ನಿರ್ಮಿಸುವುದು ನಮ್ಮ ಹಕ್ಕು ಎಂದು ಹಾರಾಡಿದ್ದರು. ಇದು ಸಹಜವಾಗಿಯೇ ಹಿಂದೂ-ಮುಸ್ಲಿಂ- ಧರ್ಮಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು. ದೇಶವೇ ಹೊತ್ತಿ ಉರಿದಿತ್ತು. ಕೋಮುಗಲಭೆಗಳಾಗಿ ಸಾವು ನೋವು ಸಂಭವಿಸಿತ್ತು. ಅದು ರಾಜಕೀಯವಾಗಿ ಬಿಜೆಪಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರುವಂತಾಗಿತ್ತು.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೇರಿದಾಗಲೇ ರಾಮಮಂದಿರ ನಿರ್ಮಾಣದ ಬಗ್ಗೆ ನಿರೀಕ್ಷೆಗಳು ಗರಿಗೆದರಿದ್ದವು. ಉತ್ತರ ಪ್ರದೇಶದಲ್ಲಿ ಕಟ್ಟರ್ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ 2017ರಲ್ಲಿ ಮುಖ್ಯಮಂತ್ರಿ ಹುದ್ದೆಗೇರುತ್ತಿದ್ದಂತೆ ಈ ನಿರೀಕ್ಷೆ ಇನ್ನೂ ಹೆಚ್ಚಾಗಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಿಜೆಪಿ ಕೈಯಲ್ಲಿದ್ದರೂ, ಹಿಂದೂತ್ವದ ಉಗ್ರ ನಾಯಕರೇ ಮುಂಚೂಣಿಯಲ್ಲಿದ್ದರೂ, ರಾಮಮಂದಿರ ಮಾತ್ರ ಮೇಲೇಳಲಿಲ್ಲ. ಅಂದರೆ ರಾಮಮಂದಿರ ನಿರ್ಮಾಣ ಬಿಜೆಪಿಗೆ ಮುಖ್ಯ ವಿಷಯವೆಂಬುದೂ ನಿಜ, ಅದು ಬಗೆಹರಿಯದ ಸಮಸ್ಯೆಯಾಗಿಯೇ ಇರಬೇಕೆಂಬುದೂ ನಿಜ. ಹಾಗಾಗಿ ಅದು ದೇಶದ ಜನರನ್ನು ಭಾವನಾತ್ಮಕವಾಗಿ ಬಳಸಿಕೊಳ್ಳುವ ಅಸ್ತ್ರ ಎಂಬುದು ದಿನಗಳುರುಳಿದಂತೆ ಸ್ಪಷ್ಟವಾಗುತ್ತಿದೆ. ಈಗ ಎದುರಾಗಿರುವ ಗುಜರಾತ್ ಚುನಾವಣಾ ಸಂದರ್ಭದಲ್ಲಿ, ಮತ್ತೆ ರಾಮಮಂದಿರ ನಿರ್ಮಾಣ, ಸಂಧಾನದ ನಾಟಕ ಶುರುವಾಗಿದೆ. ಅಂದರೆ, ಕೊಂದವರೆ ಕಣ್ಣೀರೊರೆಸಲು, ಬಡಿದವರೆ ಬಿಗಿದಪ್ಪಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ ‘ಎಡಬಿಡಂಗಿ’ ರವಿಶಂಕರ್ ಗುರೂಜಿಯನ್ನು ಸಂಧಾನಕಾರರನ್ನಾಗಿ ಅಖಾಡಕ್ಕಿಳಿಸಲಾಗಿದೆ. ಸುದ್ದಿ ಮಾಧ್ಯಮಗಳ ಮೂಲಕ ‘ಸಮಸ್ಯೆ ಬಗೆಹರಿಯಲಿದೆ, ಅದ್ಭುತ ಘಟಿಸಲಿದೆ’ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಮೋದಿ-ಯೋಗಿ-ಶ್ರೀ ಭಜನೆ ಶುರುವಾಗಿದೆ.

ಸಂಧಾನಕ್ಕೆ ಸಿದ್ಧವಾಗಿ, ಯೋಗಿ-ಮೋದಿಯನ್ನು ಭೇಟಿ ಮಾಡುತ್ತಿರುವ ರವಿಶಂಕರ್, ಸರ್ವಧರ್ಮಗಳ ಸಮನ್ವಯ ಕಾರರೇ? ಈ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಬದಿಗಿಟ್ಟು ನ್ಯಾಯ ನೀಡಬಲ್ಲ ಸತ್ಯಸಂದರೇ? ತಮಿಳುನಾಡಿನ ಪಾಪನಾಶಂನಲ್ಲಿ 1956ರಲ್ಲಿ ಜನಿಸಿದ ರವಿಶಂಕರ್, ಮಧ್ಯಮವರ್ಗದ ಕುಟುಂಬದಿಂದ ಬಂದವರು. ಬಾಲಕನಾಗಿದ್ದಾಗಲೇ ಭಗವದ್ಗೀತೆಯನ್ನು ಬಾಯಿಪಾಠ ಮಾಡಿಕೊಂಡು ಆಧ್ಯಾತ್ಮದತ್ತ ಆಕರ್ಷಿತರಾದರು. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. ಆನಂತರ ಯೋಗಿಗಳ ಸಂಪರ್ಕಕ್ಕೆ ಬಂದು, ಸನಾತನ ಧರ್ಮ ಪರಂಪರೆ ಕುರಿತ ವೇದ ವಿಜ್ಞಾನದಲ್ಲಿ ಪದವಿ ಪಡೆದರು. ಶಿವಮೊಗ್ಗದ ಭದ್ರಾ ನದಿ ದಂಡೆಯ ಮೇಲೆ 10 ದಿನಗಳ ಕಾಲ ಧ್ಯಾನಕ್ಕೆ ಕೂತು ಉಸಿರಾಟದ ಮೇಲೆ ಹಿಡಿತ ಸಾಧಿಸಿ, ಅದಕ್ಕೆ ‘ಸುದರ್ಶನ ಕ್ರಿಯಾ’ ಎಂದು ಹೆಸರಿಟ್ಟರು. ಅದನ್ನು ಜಗತ್ತಿನಾದ್ಯಂತ ಪ್ರದರ್ಶಿಸಿ, ಮನಸ್ಸಿನ ಒತ್ತಡ ನಿವಾರಿಸುವ ಸಾಧನವೆಂದು ಪ್ರಚುರಪಡಿಸಿ ಪೇಟೆಂಟ್ ಪಡೆದರು. ಆನಂತರ ‘ಆಧ್ಯಾತ್ಮಿಕ ಗುರು’ ಎಂದು ತಮ್ಮನ್ನು ತಾವೇ ಕರೆದುಕೊಂಡ ರವಿಶಂಕರ್, 1981ರಲ್ಲಿ ಬೆಂಗಳೂರಿನ ಹತ್ತಿರದ, ಕನಕಪುರ ರಸ್ತೆಯ ಉದಯಪುರದಲ್ಲಿ ಆರ್ಟ್ ಆಫ್ ಲಿವಿಂಗ್ ಎಂಬ ಆಶ್ರಮ ಸ್ಥಾಪಿಸಿದರು. ಈ ಆಶ್ರಮ ವೈಯಕ್ತಿಕ ಒತ್ತಡ, ಸಾಮಾಜಿಕ ಸಮಸ್ಯೆಗಳು ಮತ್ತು ಹಿಂಸಾಚಾರವನ್ನು ಶಮನಗೊಳಿಸುವ ಗುರಿಯನ್ನು ಹೊಂದಿದ್ದು, ಯುನೆಸ್ಕೋ ಸಲಹಾ ಸ್ಥಾನಮಾನ ಪಡೆದ ಎನ್‌ಜಿಓ(ಸರಕಾರೇತರ ಸಂಸ್ಥೆ) ಎಂದು ಪ್ರಚಾರಪಡಿಸಿದರು.

1981ರಲ್ಲಿ ಪುಟ್ಟದಾಗಿ ಶುರುವಾದ ಆರ್ಟ್ ಆಫ್ ಲಿವಿಂಗ್ ಇಂದು ವಿಶ್ವಾದ್ಯಂತ 156 ರಾಷ್ಟ್ರಗಳಲ್ಲಿ ಶಾಖೆ ಗಳನ್ನು ಹೊಂದಿದ್ದು, ಸುಮಾರು 200 ಎಕರೆಗಳ ಬೃಹತ್ ಸಾಮ್ರಾಜ್ಯವಾಗಿ ವಿಸ್ತರಿಸಿಕೊಂಡಿದೆ. ಇದರೊಳಗೆ 400 ಹವಾನಿಯಂತ್ರಿತ ಕೊಠಡಿಗಳು, ವೈಭವೋಪೇತ ಸಭಾ ಭವನಗಳು, ಮೆಡಿಟೇಷನ್ ಕೇಂದ್ರಗಳು, ಹತ್ತು ಹಲವು ತರಬೇತಿ ಕೇಂದ್ರಗಳು, ಆಯುರ್ವೇದಿಕ್ ಆಸ್ಪತ್ರೆ, ಯೋಗ ಕೇಂದ್ರ, ಅಡಿಕ್ಷನ್ ಸೆಂಟರ್ ಹಾಗೂ ಖಾಸಗಿ ಹೆಲಿಪ್ಯಾಡ್ ಎಲ್ಲವೂ ಇದೆ.

ಜೊತೆಗೆ ರೈತರ ಆತ್ಮಹತ್ಯೆ, ಮಹಿಳೆಯರ ಸಬಲೀಕರಣ, ದಲಿತೋದ್ಧಾರ, ಕೆರೆ ಪುನರುಜ್ಜೀವನ, ಅಂತರ್ಜಲ ಅಭಿಯಾನ, ಪರಿಸರ ಸಂರಕ್ಷಣೆ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಹೆಣ್ಣು ಭ್ರೂಣ ಹತ್ಯೆ ವಿರೋಧ ಇನ್ನು ಮುಂತಾದ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತ ‘ಜನಪರ’ ಎಂದು ಗುರುತಿಸಿಕೊಳ್ಳಲಾಗಿದೆ. ಜೊತೆಗೆ ಕಾಶ್ಮೀರದ ನೆರೆಗೆ, ಇರಾಕಿನ ಯುದ್ಧಕ್ಕೆ, ಪಾಕಿಸ್ತಾನದ ಅರಾಜಕತೆಗೆ, ನಾಗಾಲ್ಯಾಂಡ್‌ನ ಭೂಕಂಪಕ್ಕೆ, ಕೆೈದಿಗಳ ಮನಪರಿವರ್ತನೆಗೆ, ಸುನಾಮಿ ಸಂತ್ರಸ್ಥರ ನೆರವಿಗೆ, ನಿರ್ಭಯಾ ಪರ ಪ್ರತಿಭಟನೆಗೆ, ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಲೋಕಪಾಲ್ ಬಿಲ್ ಒತ್ತಾಯಕ್ಕೆ, ಅಫ್ಘಾನಿಸ್ತಾನದ ನೊಂದ ಮಹಿಳೆಯರಿಗೆ, ಜಾಗತಿಕ ಶಾಂತಿಗೆ ಸ್ಪಂದಿಸುವ ಮೂಲಕ ಶ್ರೀಗಳು ಅಂತಾರಾಷ್ಟ್ರೀಯ ಮಟ್ಟದ ಶಾಂತಿದೂತರಾಗಿಯೂ ಗುರುತಿಸಿಕೊಂಡಿದ್ದಾರೆ.

ಪರಧರ್ಮ, ಪರಸಂಸ್ಕೃತಿಯನ್ನು ಆಧರಿಸಬೇಕು. ಪರಸ್ಪರ ನಂಬಿಕೆ ಮತ್ತು ಹೊಂದಾಣಿಕೆಯಿಂದ ಸಾಮರಸ್ಯ, ಸಹಬಾಳ್ವೆ ಸಾಧ್ಯವೆಂದು ಸಾರುತ್ತಾರೆ. ಆ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಶಾಂತಿ, ನೆಮ್ಮದಿ ನೆಲೆಯೂರಲು ತಮ್ಮ ಬುದ್ಧಿಶಕ್ತಿಯನ್ನೆಲ್ಲ ಖರ್ಚು ಮಾಡುತ್ತಾರೆ. ಇದೆಲ್ಲವನ್ನೂ ಕಳೆದ ಮೂವತ್ತೈದು ವರ್ಷಗಳಿಂದ ರವಿಶಂಕರ್ ಗುರೂಜಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಮನುಷ್ಯಪ್ರೀತಿ, ಕಾಳಜಿ, ಕಳಕಳಿಯಿಂದಲ್ಲ, ಸ್ವಾರ್ಥಕ್ಕಾಗಿ; ವೈಯಕ್ತಿಕ ವರ್ಚಸ್ಸಿನ ವೃದ್ಧಿಗಾಗಿ.

ಇಂತಹ ನಕಲಿ ಗುರು ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ದೇಶ-ವಿದೇಶಗಳಿಂದ ಜನ ಹುಡುಕಿಕೊಂಡು ಬರುತ್ತಾರೆ. ಗಣ್ಯರು, ಶ್ರೀಮಂತರು, ಪ್ರಭಾವಿಗಳು, ಅಧಿಕಾರಸ್ಥ ರಾಜಕಾರಣಿಗಳು, ಪತ್ರಕರ್ತರು, ಖ್ಯಾತನಾಮರು ಎಲ್ಲರೂ ಶ್ರೀಗಳ ಕಾಲ ಬುಡದಲ್ಲಿ ಕೂತು ಪ್ರವಚನ ಪಡೆದು ಪುನೀತರಾಗುತ್ತಾರೆ. ಶಾಂತಿಯ ಶಂಖ ಊದುತ್ತಲೇ ದೇಶದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಪತ್ರಿಕಾರಂಗಗಳನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಶ್ರೀ, ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ದೆಸೆಯಲ್ಲಿ ದಾಪುಗಾಲು ಹಾಕುತ್ತಲೇ ಇದ್ದಾರೆ.

ಆದರೆ ತಮ್ಮ ಕಾಲಬುಡದಲ್ಲಿಯೇ ಇರುವ, ಆಶ್ರಮಕ್ಕಾಗಿ ಉದಿಪಾಳ್ಯದ ಬಡವರ, ದಲಿತರ, ಕೃಷಿಕರ ಜೀವನಾಧಾರವಾಗಿದ್ದ ಒಂದು, ಒಂದೂವರೆ, ಎರಡು ಎಕರೆ ಜಮೀನನ್ನು ಕಿಲುಬು ಕಾಸಿಗೆ ಕಿತ್ತುಕೊಂಡು ಅವರ ಸಂಸಾರವನ್ನು ಬೀದಿಗೆ ತಳ್ಳಿ ಭಿಕ್ಷುಕರನ್ನಾಗಿಸಿದ್ದಾರೆ. ಸುಮಾರು ನಾಲ್ಕು ಹಳ್ಳಿಗಳ ನಾಲ್ಕು ಸಾವಿರ ಸಂಸಾರಗಳನ್ನು ಒಕ್ಕಲೆಬ್ಬಿಸಿದ್ದಾರೆ. ಸರಕಾರಿ ಗೋಮಾಳ, ಕೆರೆ ಅಂಗಳ, ಗುಂಡು ತೋಪುಗಳನ್ನೂ ಒತ್ತುವರಿ ಮಾಡಿಕೊಂಡು ಮೆರೆಯುತ್ತಿದ್ದಾರೆ. ರವಿಶಂಕರ್ ವಿರುದ್ಧ ಹಲವರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಸಾರ್ವಜನಿಕವಾಗಿ ಪ್ರತಿಭಟಿಸಿದ್ದಾರೆ. ಅಷ್ಟೇ ಅಲ್ಲ, ಕಳೆದ ವರ್ಷ ಯಮುನಾ ನದಿ ದಂಡೆಯ ಮೇಲೆ ಮೂರು ದಿನಗಳ ಕಾಲ ಆರ್ಟ್ ಆಫ್ ಲಿವಿಂಗ್ ವತಿಯಿಂದ ನಡೆದ ಸಾಂಸ್ಕೃತಿಕ ಉತ್ಸವದಿಂದ ಪರಿಸರಕ್ಕೆ ಹಾನಿಯಾದಾಗ, ‘ನಿಮಗೆ ಸ್ವಲ್ಪವೂ ಜವಾಬ್ದಾರಿ ಇಲ್ಲ. ನಿಮಗೆ ಇಷ್ಟ ಬಂದಿದ್ದನ್ನೆಲ್ಲಾ ಹೇಳುವ ಸ್ವೇಚ್ಛಾಚಾರ ಇದೆ ಎಂದುಕೊಂಡಿದ್ದೀರಾ?’ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಧ್ಯಾತ್ಮ ಗುರು ರವಿಶಂಕರ್‌ಗೆ ಛೀಮಾರಿ ಹಾಕಿದ್ದೂ ಅಲ್ಲದೆ, 40 ಕೋಟಿ ದಂಡ ಕಟ್ಟಲು ಆದೇಶಿಸಿದೆ.

ರವಿಶಂಕರ್ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿರುವುದೇ ವಿಶಿಷ್ಟ ಸುದರ್ಶನ ಕ್ರಿಯಾ ಎಂಬ ಧ್ಯಾನದಿಂದ. ಅಸಲಿಗೆ ಈ ಸುದರ್ಶನ ಕ್ರಿಯಾ ಪ್ರಾಚೀನ ಹಿಂದೂ ಸಂಸ್ಕೃತಿಯ ಯೋಗದಲ್ಲಿಯೇ ಇರುವಂಥದ್ದು. ಅದನ್ನು ಅರ್ಧರಾತ್ರಿಯಲ್ಲಿ ಅಗೆದು ತೆಗೆದದ್ದು ಎಂದು ಪೇಟೆಂಟ್ ಮಾಡಿಸಿಕೊಂಡಿರುವುದಲ್ಲದೆ, ಸುದರ್ಶನ ಕ್ರಿಯಾ ಉತ್ಪಾದಿಸಿದ ಆಮ್ಲಜನಕ ಎಚ್‌ಐವಿ ಎಂಬ ಮಾರಕ ರೋಗವನ್ನು ನಿಯಂತ್ರಿಸುತ್ತದೆ ಎಂದು ಪ್ರಚಾರ ಮಾಡಲಾಗಿತ್ತು. ಇದನ್ನು ಆಧುನಿಕ ವೈದ್ಯವಿಜ್ಞಾನ ಅಲ್ಲಗಳೆದು, ಗುರೂಜಿಯ ಸುಳ್ಳನ್ನು ಬಯಲುಗೊಳಿಸಿತ್ತು.

‘ಆರ್ಟ್ ಆಫ್ ಲಿವಿಂಗ್’ ಎಂದರೆ ‘ಬದುಕಲು ಕಲಿಯಿರಿ’ ಎಂದರ್ಥ. ಆದರೆ ರವಿಶಂಕರ್ ಇಡೀ ಜಗತ್ತಿಗೆ ಬದುಕುವ ಕಲೆ ಕಲಿಸುತ್ತಲೇ ತಮ್ಮ ಬದುಕನ್ನು ಬಂಗಾರ ಮಾಡಿಕೊಂಡವರು. ಸಂತನ ಫೋಸು ಕೊಡುತ್ತಲೇ ಸಂಪದ್ಭರಿತ ವ್ಯಕ್ತಿಯಾದವರು. ಇವರಿಗೆ ತಮ್ಮ ಚಟುವಟಿಕೆಗಳನ್ನು ಶಿಸ್ತುಬದ್ಧವಾಗಿ ಡಾಕ್ಯುಮೆಂಟೇಷನ್ ಮಾಡುವ ಕಲೆ ಗೊತ್ತು. ಏಕೆಂದರೆ ಇವರದು ಎನ್‌ಜಿಒ ಸಂಸ್ಥೆ. ಎನ್‌ಜಿಒ ಸಂಸ್ಥೆಗಳು ವಿದೇಶಿ ಹಣದಿಂದ ಕೊಬ್ಬಿ ಕೂತಿವೆ ಎಂದು ಅವುಗಳ ಮೇಲೆ ದಾಳಿ ನಡೆಸುವ, ಹಣಕ್ಕೆ ಲೆಕ್ಕ ಕೇಳುವ, ಬಂದ್ ಮಾಡುವ ಪ್ರಧಾನಿ ಮೋದಿ, ರವಿಶಂಕರ್ ಅವರ ‘ಆರ್ಟ್ ಆಫ್ ಚೀಟಿಂಗ್’ ಎಂಬ ಎನ್‌ಜಿಒ ಬಗ್ಗೆ ಏಕೆ ಚಕಾರವೆತ್ತುವುದಿಲ್ಲ! ಇಂತಹ ಢೋಂಗಿ ವ್ಯಕ್ತಿಯನ್ನು ಮಾನವೀಯ ನಾಯಕನಾಗಿ, ಶಾಂತಿದೂತನಾಗಿ, ಸಂಧಾನಕಾರನಾಗಿ, ಆಧ್ಯಾತ್ಮಿಕ ಗುರುವಾಗಿ ನೋಡುವ, ಹೊಗಳುವ, ದಾಖಲಿಸುವ, ಪ್ರಚಾರ ನೀಡಿ ಪೋಷಿಸುವ ಜನರಿರುವಂತೆ; ಈ ದೇಶದಲ್ಲಿ ಮಸೀದಿ ಕೆಡಹುವ, ವಿರೋಧಿಸಿದವನ್ನು ಕೊಲ್ಲುವ, ಮಂದಿರ ಕಟ್ಟುತ್ತೇವೆನ್ನುವ, ಅಧಿಕಾರಕ್ಕೇರುವ, ಸಂಧಾನಕ್ಕೆ ಮುಂದಾಗುವ ಜನರೂ ಇದ್ದಾರೆ. ಇವೆಲ್ಲವೂ ದೇಶ, ಧರ್ಮ, ದೇವರು, ಸಂಸ್ಕೃತಿ ಹೆಸರಲ್ಲಿ ನಡೆಯುವ ನಾಟಕ. ಸದ್ಯಕ್ಕೆ ಸಂಧಾನದ ನಾಟಕ ಶುರುವಾಗಿದೆ, ನೋಡಿ ಆನಂದಿಸಿ.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News