ಬದುಕಿದ್ದಾಗ ನನ್ನ ಸೋದರಿಯನ್ನು ಬಳಸಿಕೊಂಡ ಜಯಲಲಿತಾ ಆಕೆಗೆ ಯಾವುದೇ ರಕ್ಷಣೆ ನೀಡದೆ ನಿರ್ಗಮಿಸಿದರು: ಶಶಿಕಲಾ ಸೋದರ

Update: 2017-11-19 15:29 GMT

ಚೆನ್ನೈ,ನ.19: ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಬದುಕಿದ್ದಾಗ ತನ್ನ ಸೋದರಿಯನ್ನು ಪೂರ್ಣವಾಗಿ ಬಳಸಿಕೊಂಡಿದ್ದರು, ಆದರೆ ಆಕೆಗೆ ಯಾವುದೇ ಭದ್ರತೆಯನ್ನು ಒದಗಿಸದೆ ಇಹಲೋಕದಿಂದ ನಿರ್ಗಮಿಸಿದರು ಎಂದು ಭ್ರಷ್ಟಾಚಾರದ ಆರೋಪದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರ ಸೋದರ ವಿ.ದಿವಾಕರನ್ ಅವರು ನೋವು ವ್ಯಕ್ತಪಡಿಸಿದ್ದಾರೆ. ಇತ್ತೀಚಿಗಷ್ಟೇ ದಿವಾಕರನ್ ನಿವಾಸ ಸೇರಿದಂತೆ ಶಶಿಕಲಾ ಕುಟುಂಬಕ್ಕೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಭಾರೀ ಪ್ರಮಾಣದ ಅಘೋಷಿತ ಆದಾಯ ವನ್ನು ಪತ್ತೆ ಹಚ್ಚಿದ್ದರು.

ಶನಿವಾರ ಇಲ್ಲಿ ಐಟಿ ದಾಳಿಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ ಜಯಲಲಿತಾ ಮತ್ತು ಶಶಿಕಲಾ ಅವರ ವಿರುದ್ಧ ದಾಖಲಾಗಿದ್ದ ಸರಣಿ ಭ್ರಷ್ಟಾಚಾರ ಪ್ರಕರಣಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ದಿವಾಕರನ್, 1996ರಿಂದಲೂ ತನ್ನ ಸೋದರಿ ಸದಾ ವಿಚಾರಣೆಯ ‘ಮೋಡ’ದಡಿಯೇ ಇದ್ದರು ಎಂದರು.

ಶಶಕಲಾ ಪ್ರಬಲ ನಾಯಕಿಯೊಂದಿಗಿದ್ದರು ಮತ್ತು ಅವರು ಹೇಳಿದ್ದ ಎಲ್ಲ ಕೆಲಸಗಳನ್ನು ಮಾಡಿದ್ದರು. ಆದರೆ ಇಂದು ನನ್ನ ಸೋದರಿಗೆ ರಕ್ಷಣೆಯೇ ಇಲ್ಲವಾಗಿದೆ. ಇದು ಮಹಿಳೆಯರಿಗೆ ಅತ್ಯುತ್ತಮ ನಿದರ್ಶನವಾಗಿದೆ. ಎಲ್ಲರಿಗೂ ಒಂದು ಪಾಠವಾಗಿದೆ ಎಂದರು.

ಶುಕ್ರವಾರ ಜಯಲಲಿತಾರ ಪೋಯೆಸ್ ಗಾರ್ಡನ್ ನಿವಾಸದಲ್ಲಿ ಶೋಧ ಕಾರ್ಯಾಚರಣೆ ವೇಳೆ ಲ್ಯಾಪ್‌ಟಾಪ್ ಮತ್ತು ಪೆನ್‌ಡ್ರೈವ್‌ಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಕುರಿತಂತೆ ದಿವಾಕರನ್, ತುಂಬ ಸಮಯದಿಂದ ತಾನು ಆ ಸ್ಥಳದ ಸಂಪರ್ಕದಲ್ಲಿಲ್ಲ ಎಂದು ತಿಳಿಸಿದರು. ಆದರೆ, ಕಳೆದ ವಾರ ತನ್ನ ನಿವಾಸದ ಮೇಲೆ ದಾಳಿ ನಡೆಸಿದಾಗ ಇಂತಹ ಯಾವುದೇ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದರು.

 ಜಯಲಲಿತಾ ಕುರಿತು ದಿವಾಕರನ್ ಹೇಳಿಕೆಯನ್ನು ಲಘುವಾಗಿ ಪರಿಗಣಿಸಿರುವ ಉಪೇಕ್ಷಿತ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ಅವರು, ನೋವಿನಲ್ಲಿ ದಿವಾಕರನ್ ಆ ಹೇಳಿಕೆಯನ್ನು ನೀಡಿರಬೇಕು ಎಂದು ತಂಜಾವೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News