ಜನರೀಗ ಸಿಂಹಕ್ಕಿಂತ ಗೋವಿಗೆ ಹೆಚ್ಚು ಹೆದರುತ್ತಿದ್ದಾರೆ, ಮೋದಿಯವರಿಗೆ ಧನ್ಯವಾದಗಳು
ಪಾಟ್ನಾ,ನ.19: ಗೋರಕ್ಷಣೆಯ ಹೆಸರಿನಲ್ಲಿ ಗುಂಪುಗಳಿಂದ ವ್ಯಕ್ತಿಗಳ ಹತ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ರವಿವಾರ ಇಲ್ಲಿ ಟೀಕಿಸಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಜನರು ಮೊದಲು ಸಿಂಹಕ್ಕೆ ಹೆದರುತ್ತಿದ್ದರು, ಈಗ ಅವರು ಗೋವಿಗೆ ಹೆದರುತ್ತಿದ್ದಾರೆ. ಇದೆಲ್ಲ ಮೋದಿ ಸರಕಾರದ ಕೊಡುಗೆಯಾಗಿದೆ" ಎಂದು ಕುಟುಕಿದರು.
ಪಕ್ಷದ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಗೋರಕ್ಷಕರ ಗ್ಯಾಂಗ್‌ಗಳ ಬಗ್ಗೆ ಭಯ ಎಷ್ಟೊಂದು ತೀವ್ರವಾಗಿದೆಯೆಂದರೆ ಬಿಹಾರದ ಸರನ್ ಜಿಲ್ಲೆಯ ಸೋನೆಪುರ ಜಾನುವಾರು ಜಾತ್ರೆಗೆ ಯಾರೂ ಜಾನುವಾರುಗಳನ್ನೇ ತರುತ್ತಿಲ್ಲ ಎಂದರು.
ನೋಟು ಅಮಾನ್ಯ ಮತ್ತು ಜಿಎಸ್‌ಟಿ ಕುರಿತು ಮೋದಿ ಸರಕಾರವನ್ನು ಟೀಕಿಸಿದ ಅವರು, ಮೋದಿ 2019ರ ಬದಲು 2018ರಲ್ಲಿಯೇ ಲೋಕಸಭಾ ಚುನಾವಣೆಗೆ ಹೋಗಬಹುದು. ಹೀಗಾಗಿ ಅವಧಿಗೆ ಮುನ್ನವೇ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಲು ಸನ್ನದ್ಧರಾಗಿರುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ತನ್ನ ಪುತ್ರ ತೇಜಸ್ವಿ ಯಾದವ ಗುಜರಾತ್‌ನ ಪಾಟಿದಾರ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ ಜೊತೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ ಲಾಲು, ಹಾರ್ದಿಕ್ ಮತ್ತು ತೇಜಸ್ವಿಯಂತಹ ಯುವ ನಾಯಕರು ಈ ದೇಶದಿಂದ ಕೋಮುವಾದಿ ಶಕ್ತಿಗಳನ್ನು ಬುಡಮೇಲುಗೊಳಿಸಲಿದ್ದಾರೆ ಎಂದರು.