ಅಮೆರಿಕದಿಂದ ವಾಶಿಂಗ್ಟನ್ ಪಿಎಲ್‌ಒ ಕಚೇರಿ ಮುಚ್ಚುಗಡೆ ಬೆದರಿಕೆ

Update: 2017-11-19 16:54 GMT

ರಮಲ್ಲಾ,ನ.19: ವಾಶಿಂಗ್ಟನ್‌ನಲ್ಲಿರುವ ಫೆಲೆಸ್ತೀನ್ ವಿಮೋಚನಾ ಸಂಘಟನೆ (ಪಿಎಲ್‌ಒ)ದ ಕಚೇರಿಯನ್ನು ಅಮೆರಿಕ ಮುಚ್ಚುಗಡೆಗೊಳಿಸಿದಲ್ಲಿ ಆ ದೇಶದ ಜೊತೆಗಿನ ಬಾಂಧವ್ಯಗಳನ್ನು ಕಡಿದುಕೊಳ್ಳುವುದಾಗಿ ಹಿರಿಯ ಪಿಎಲ್‌ಒ ಅಧಿಕಾರಿಯೊಬ್ಬರು ಶನಿವಾರ ಎಚ್ಚರಿಕೆ ನೀಡಿದ್ದಾರೆ.

 ಇಸ್ರೇಲ್-ಪೆಲೆಸ್ತೀನ್ ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳಲ್ಲಿ ಯಾವುದೇ ಪ್ರಗತಿ ಕಂಡುಬರದಿದ್ದರೆ ವಾಶಿಂಗ್ಟನ್‌ನ ಪಿಎಲ್‌ಒ ಕಚೇರಿಯನ್ನು ಮುಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕಾಗಿ ಅವರು 90 ದಿನಗಳ ಗಡುವನ್ನು ಕೂಡಾ ವಿಧಿಸಿದ್ದಾರೆ.

 ಟ್ರಂಪ್ ಆಡಳಿತದ ಬೆದರಿಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಿಎಲ್‌ಒ ಪ್ರಧಾನ ಕಾರ್ಯದರ್ಶಿ ಸಾಯೆಬ್ ಎರಾಕತ್, ಒಂದು ವೇಳೆ ಕಚೇರಿಯು ಮುಚ್ಚುಗಡೆಗೊಂಡಲ್ಲಿ, ಅಮೆರಿಕದ ಆಡಳಿತ ಜೊತೆಗಿನ ಎಲ್ಲಾ ಸಂಪರ್ಕಗಳನ್ನು ಕಡಿತಗೊಳಿ ಸುವುದಾಗಿ ತಿಳಿಸಿದ್ದಾರೆ.

ಫೆಲೆಸ್ತೀನಿಯರನ್ನು ಪ್ರತಿನಿಧಿಸುವ ಸಂಘಟನೆಯಾಗಿ ಅಂತಾರಾಷ್ಟ್ರೀಯ ಸಮುದಾಯದ ಮಾನ್ಯತೆ ಪಡೆದಿರುವ ಪಿಎಲ್‌ಒ, ಅಮೆರಿಕದ ರಾಜಧಾನಿ ವಾಶಿಂಗ್ಟನ್‌ನಲ್ಲಿರುವ ತನ್ನ ಕಚೇರಿಯ ನಿರ್ವಹಣೆಗೆ ಬೇಕಾದ ಪರವಾನಿಗೆಯನ್ನು ಪ್ರತಿ ಆರು ತಿಂಗಳಿಗೆ ನವೀಕರಿಸಿಕೊಳ್ಳಬೇಕಾಗುತ್ತದೆ.

 ವಾಶಿಂಗ್ಟನ್‌ನಲ್ಲಿ ಪಿಎಲ್‌ಒ ಕಚೇರಿಯು ತೆರೆದಿರಲು ಯಾವುದೇ ಸಮರ್ಪಕ ಕಾರಣಗಳು ಅಮೆರಿಕದ ವಿದೇಶಾಂಗ ಸಚಿವಾಲಯಕ್ಕೆ ಕಂಡುಬರುತ್ತಿಲ್ಲವೆಂದು’’ ವೆಂದು ಅಮೆರಿಕ ಸರಕಾರದ ಬರೆದಿರುವ ಪತ್ರವೊಂದನ್ನು ಫೆಲೆಸ್ತೀನ್ ಅಧಿಕಾರಿಗಳಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ಹಿಂದೆಯೂ ಇದು ಸಂಭವಿಸಿರಲಿಲ್ಲ. ಈ ಬಗ್ಗೆ ನಾವು ವಿದೇಶಾಂಗ ಇಲಾಖೆ ಹಾಗೂ ಶ್ವೇತಭವನದಿಂದ ಸ್ಪಷ್ಟೀಕರಣವನ್ನು ಕೇಳಿದ್ದೇವೆ’’ ಎಂದು ಅವರು ತಿಳಿಸಿದರು.

 ಫೆಲೆಸ್ತೀನ್ ಪ್ರದೇಶದಲ್ಲಿರುವ ಇಸ್ರೇಲಿ ವಸಾಹತುಗಳ ಕುರಿತ ವಿವಾದವನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಮುಂದಿಡುವುದಾಗಿ ಕೆಲವು ಫೆಲೆಸ್ತೀನ್ ನಾಯಕರು ಹೇಳಿಕೆ ನೀಡಿರುವುದೇ, ಅಮೆರಿಕವು ಪಿಎಲ್‌ಒದ ವಾಶಿಂಗ್ಟನ್ ಕಚೇರಿಯ ಪರವಾನಗಿಯನ್ನು ನವೀಕರಿಸಲು ನಿರಾಕರಿಸಿರುವುದಕ್ಕೆ ಮುಖ್ಯ ಕಾರಣವೆನ್ನಲಾಗಿದೆ.

ಗಾಝಾಪಟ್ಟಿಯಲ್ಲಿ ಇಸ್ರೇಲ್ ವಸಾಹತುಗಳನ್ನು ಸ್ಥಾಪಿಸಿರುವ ವಿಷಯವನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಮುಂದೆ ಕೊಂಡೊಯ್ಯುವುದಾಗಿ ಫೆಲೆಸ್ತೀನ್ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ತಿಳಿಸಿದ್ದರು.

 ವಾಶಿಂಗ್ಟನ್‌ನಲ್ಲಿ ಪಿಎಲ್‌ಓ ಕಚೇರಿಯನ್ನು ಮುಚ್ಚುಗಡೆಗೊಳಿಸಲು ಮುಂದಾಗಿರುವ ಅಮೆರಿಕ ವಿದೇಶಾಂಗ ಇಲಾಖೆಯ ನಿರ್ಧಾರವು ಫೆಲೆಸ್ತೀನ್-ಅಮೆರಿಕ ಬಾಂಧವ್ಯದ ಇತಿಹಾಸದಲ್ಲೇ ಆಘಾತಕಾರಿಯಾದುದು. ಇದರಿಂದ ಶಾಂತಿ ಪ್ರಕ್ರಿಯೆಯ ಮೇಲೆ ಹಾಗೂ ಅಮೆರಿಕ-ಅರಬ್ ಬಾಂಧವ್ಯದ ಮೇಲೆ ಅಪಾಯಕಾರಿ ಪರಿಣಾಮವುಂಟಾಗಲಿದೆ.

ನಬಿಲ್ ಅಬು ರುದೈನಾ

ಪಿಎಲ್‌ಓ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News