ಪದ್ಮಾವತಿಗೆ ದಾವೂದ್ ಬಂಡವಾಳ: ಕರ್ನಿ ಸೇನಾ ಆರೋಪ

Update: 2017-11-19 18:11 GMT

ಜೈಪುರ, ನ.19: ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯನ್ನು ಒರ್ವ ಸಾಂಸ್ಕೃತಿಕ ಗೂಂಡಾ, ತಂತ್ರಗಾರ ಮತ್ತು ನಿಯತ ಅಪರಾಧಿ ಎಂದು ಕರೆದಿರುವ ಶ್ರೀ ರಜಪೂತ ಕರ್ನಿಸೇನಾ ಪದ್ಮಾವತಿ ಸಿನಿಮಾಕ್ಕೆ ನಿಷೇಧ ಹೇರುವಂತೆ ಆಗ್ರಹಿಸಿದ್ದು ಈ ಚಿತ್ರಕ್ಕೆ ಭೂಗತ ದೊರೆ ದಾವೂದ್ ಇಬ್ರಾಹಿಂ ಬಂಡವಾಳ ಹಾಕಿದ್ದಾನೆ ಎಂದು ರವಿವಾರ ಆರೋಪಿಸಿದೆ.

ಪದ್ಮಾವತಿ ಸಿನಿಮಾದ ಬಿಡುಗಡೆಯ ದಿನವನ್ನು ಮುಂದೂಡಿರುವುದು ಬನ್ಸಾಲಿಯ ನಾಟಕದ ಭಾಗವೇ ಆಗಿದೆ ಎಂದು ಕರ್ನಿ ಸೇನಾದ ಲೋಕೇಂದ್ರ ಸಿಂಗ್ ಕಲ್ವಿ ಆರೋಪಿಸಿದ್ದಾರೆ. ಚಿತ್ರದ ಬಡಿಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ನಮಗೆ ತಿಳಿಯಿತು. ಹೊಸ ದಿನಾಂಕ ಘೋಷಣೆಯಾದ ಕೂಡಲೇ ನಾವು ಬೀದಿಗಿಳಿಯುತ್ತೇವೆ. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಯಾಗಲು ಬಿಡುವುದಿಲ್ಲ. ಈ ಚಿತ್ರದ ಮೇಲೆ ಸಂಪೂರ್ಣ ನಿಷೇಧ ಹೇರಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದವರು ತಿಳಿಸಿದರು.

ಪದ್ಮಾವತಿ ಚಿತ್ರಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಣ ಹೂಡಿದ್ದಾನೆ ಎಂದು ಆರೋಪಿಸಿದ ಕಲ್ವಿ, ನನಗೆ ಅಂತಾರಾಷ್ಟ್ರೀಯ ಸಂಖ್ಯೆಯಿಂದ ಮೂರು ಬೆದರಿಕೆ ಕರೆಗಳು ಬಂದಿವೆ. ಅದರಲ್ಲಿ ಒಂದು ಕರಾಚಿಯಿಂದ ಬಂದಿದ್ದು ದಾವೂದ್‌ನ ಹಣ ಈ ಚಿತ್ರಕ್ಕೆ ಬಿದ್ದಿರುವುದನ್ನು ಸೂಚಿಸುತ್ತದೆ. ಇಲ್ಲದಿದ್ದರೆ ಕರಾಚಿಯಲ್ಲಿ ಕುಳಿತಿರುವ ವ್ಯಕ್ತಿಗೆ ನನ್ನನ್ನು ಕೊಲ್ಲಬೇಕೆಂಬ ಅಗತ್ಯವಾದರೂ ಏನು? ಎಂದು ಕಲ್ವಿ ಪ್ರಶ್ನಿಸಿದ್ದಾರೆ.

 ಡಿಸೆಂಬರ್ ಒಂದರಂದು ಭಾರತ್ ಬಂದ್ ಮಾಡುವ ನಿರ್ಧಾರದ ಬಗ್ಗೆಯೂ ಕರ್ನಿ ಸೇನೆ ಸದ್ಯ ಆ ಯೋಚನೆ ಇಲ್ಲ ಎಂದಿದೆ.

ರವಿವಾರದಂದು ಚಿತ್ರದ ನಿರ್ಮಾಪಕರು ಮತ್ತು ಹಂಚಿಕೆದಾರರಾಗಿರುವ ವಯೋಕಾಂ18ನ ವಕ್ತಾರರು ಪದ್ಮಾವತಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದುಡಲಾಗಿರುವುದಾಗಿ ತಿಳಿಸಿದ್ದರು.

ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿರುವ ರಜಪೂತ ಸಮಾಜದ ಮಹಿಳೆಯರು ತಲೆಗೆ ಮುಂಡಾಸು ಬಿಗಿದು ಕೈಯಲ್ಲಿ ಖಡ್ಗವನ್ನು ಹಿಡಿದು ಪ್ರತಿಭಟನೆಗಳನ್ನು ನಡೆಸಿದರು. ಈ ವೇಳೆ ಮಾತನಾಡಿದ ರಾಷ್ಟ್ರೀಯ ರಜಪೂತ್ ಕರ್ನಿ ಸೇನಾದ ಮಹಿಳಾ ಘಟಕದ ಸದಸ್ಯರು ಸೋಮವಾರದಿಂದ ಸೇನೆಯು ಪದ್ಮಾವತಿ ಸಿನಿಮಾಕ್ಕೆ ನಿಷೇಧ ಹೇರುವ ಪರವಾಗಿ ಸಹಿ ಸಂಗ್ರಹ ಅಭಿಯಾನವನ್ನು ನಡೆಸುವುದಾಗಿ ತಿಳಿಸಿದ್ದಾರೆ.

ಈ ವೇಳೆ ಮಾತನಾಡಿದ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನೀನಾ ಚಪೋಲ್, ರಾಣಿ ಪದ್ಮಾವತಿ ಜೊಹರ್ ಮೂಲಕ ತನ್ನ ಪ್ರಾಣವನ್ನೇ ಅರ್ಪಿಸುವ ಮೂಲಕ ರಜಪೂತ ಮತ್ತು ಹಿಂದು ಮಹಿಳೆಯ ಆತ್ಮಸಮ್ಮಾನಕ್ಕೆ ಸಾಕ್ಷಿಯಾಗಿದ್ದಳು ಎಂದು ತಿಳಿಸಿದರು.

ರಜಪೂತ ಮಹಿಳೆಯರು ಪುರುಷರಷ್ಟೇ ಸಮರ್ಥರಾಗಿದ್ದು ಅಗತ್ಯಬಿದ್ದಲ್ಲಿ ಕತ್ತಿಯನ್ನೆತ್ತಲೂ ಹಿಂಜರಿಯುವುದಿಲ್ಲ ಎಂದು ಹೇಳಿದ ಕರ್ನಿ ಸೇನೆಯ ಜಿಲ್ಲಾಧ್ಯಕ್ಷ ತಪಸ್ಯ ನರುಕಾ, ನಾವು ಯಾವ ಮಾತುಕತೆಗೂ ಸಿದ್ಧವಿಲ್ಲ, ಚಿತ್ರಕ್ಕೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News