ಮುಕುಲ್ ರಾಯ್ ಫೋನ್ ಕದ್ದಾಲಿಕೆ ಆರೋಪ: ಕೇಂದ್ರ, ಪ.ಬಂಗಾಳ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2017-11-20 12:52 GMT

ಹೊಸದಿಲ್ಲಿ, ನ.20: ತನ್ನ ಫೋನ್ ಕರೆಗಳನ್ನು ಪಶ್ಚಿಮಬಂಗಾಳ ಪೊಲೀಸರು ಕದ್ದಾಲಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಮುಕುಲ್ ರಾಯ್ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಸೀಲ್ ಮಾಡಲಾದ ಲಕೋಟೆಯಲ್ಲಿ ಪ್ರತಿಕ್ರಿಯೆ ನೀಡುವಂತೆ ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರ ಹಾಗೂ ಪಶ್ಚಿಮ ಬಂಗಾಳ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಹಿಂದೆ ತೃಣಮೂಲ ಕಾಂಗ್ರೆಸ್(ಟಿಎಂಸಿ)ನಲ್ಲಿದ್ದ ಮುಕುಲ್ ರಾಯ್, ಟಿಎಂಸಿ ಮುಖಂಡೆ ಮಮತಾ ಬ್ಯಾನರ್ಜಿ ಜೊತೆಗಿನ ಭಿನ್ನಾಭಿಪ್ರಾಯದಿಂದ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ತಾನು ಪಶ್ಚಿಮ ಬಂಗಾಳದಲ್ಲಿದ್ದ ಸಂದರ್ಭ ರಾಜ್ಯ ಪೊಲೀಸರು ಸದಾಕಾಲ ತನ್ನ ಚಲನವಲನದ ಮೇಲೆ ನಿಗಾ ಇರಿಸಿದ್ದರು ಎಂದು ಆರೋಪಿಸಿದ್ದ ರಾಯ್, ತನ್ನ ಫೋನ್ ಮೆಸೇಜ್‌ಗಳನ್ನು ಪ್ರತಿಬಂಧಿಸುವಂತೆ ಟೆಲಿಕಾಂ ಸೇವೆ ಪೂರೈಕೆದಾರರಿಗೆ ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಯಾವುದಾದರೂ ನಿರ್ದೇಶನ ಬಂದಿತ್ತೇ ಎಂಬ ಬಗ್ಗೆ ಮಾಹಿತಿಯನ್ನು ಒದಗಿಸಲು ಸೂಚಿಸಬೇಕೆಂದು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಭು ಬಖ್ರು, ರಾಯ್ ಅವರ ಚಲನವಲನದ ಮೇಲೆ ನಿಗಾ ಇರಿಸಲಾಗಿತ್ತೇ ಅಥವಾ ಅವರ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗುತ್ತಿತ್ತೇ ಎಂಬ ಕುರಿತು ಪ್ರತಿಕ್ರಿಯೆ ನೀಡುವಂತೆ ಟಿಲಿಫೋನ್ ಸೇವೆ ಪೂರೈಕೆದಾರರಾದ ಎಂಟಿಎನ್‌ಎಲ್ ಮತ್ತು ವೊಡಾಫೋನ್, ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಹೀಗೆ ಮಾಡಲಾಗುತ್ತಿದ್ದರೆ ಅದಕ್ಕೆ ಕಾರಣವೇನು ಎಂಬುದನ್ನು ಸೀಲ್ ಮಾಡಲಾದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಒಪ್ಪಿಸುವಂತೆ ತಿಳಿಸಿ ವಿಚಾರಣೆಯನ್ನು ಡಿ.7ಕ್ಕೆ ಮುಂದೂಡಿದೆ.

  ಈ ಸಂದರ್ಭ ಪ.ಬಂಗಾಳ ಸರಕಾರ ಮತ್ತು ಕೇಂದ್ರ ಸರಕಾರದ ಪರ ವಾದ ಮಂಡಿಸಿದ ವಕೀಲರು , ರಾಯ್ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿದರು ಮತ್ತು ಅವರು ಪಶ್ಚಿಮ ಬಂಗಾಳದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಿತ್ತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News