ಮುಜುಗರ ತಂದ ಜಾಹೀರಾತು, ಧೂಳು ತಿನ್ನುತ್ತಿರುವ ಗಾಲಿ ಕುರ್ಚಿಗಳು

Update: 2017-11-20 18:04 GMT

ಎನ್‌ಎಸ್‌ಡಿ ಮಾದರಿಯಲ್ಲಿ ಮಹಾರಾಷ್ಟ್ರ ಸ್ಕೂಲ್ ಆಫ್ ಡ್ರಾಮಾ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ರೀತಿಯಲ್ಲಿ ಮುಂಬೈಯಲ್ಲಿಯೂ ಮಹಾರಾಷ್ಟ್ರ ಸ್ಕೂಲ್ ಆಫ್ ಡ್ರಾಮಾ ಆರಂಭಿಸಲು ಮಹಾರಾಷ್ಟ್ರ ರಾಜ್ಯ ಸರಕಾರ ವಿಚಾರ ವಿಮರ್ಶೆ ಕೈಗೊಂಡಿದೆ. ಈ ಉದ್ದೇಶದಿಂದ ಸರಕಾರವು ಕಾರ್ಯ ಸಮಿತಿಯ ಸ್ಥಾಪನೆ ಮಾಡಿದೆ. ಮಹಾರಾಷ್ಟ್ರ ಸ್ಕೂಲ್ ಆಫ್ ಡ್ರಾಮಾದ ಮಾಧ್ಯಮದಿಂದ ನಾಟಕಕ್ಕೆ ಸಂಬಂಧಿಸಿ ಹೊಸ ಪ್ರಯೋಗ, ರೂಪು ರೇಷೆಗಳ ಸಿದ್ಧತೆಗೆ ಸರಕಾರ ಮುಂದಾಗಿದೆ.

ಮೂಲತಃ ದಿಲ್ಲಿಯ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ನಾಟಕಗಳ ವಿಕಾಸಕ್ಕಾಗಿ ಕೆಲಸ ಮಾಡುತ್ತಿದೆ. ಇದೇ ಮಾದರಿಯಲ್ಲಿ ಮಹಾರಾಷ್ಟ್ರದಲ್ಲೂ ಕೂಡಾ ನಾಟಕಗಳ ವಿಕಾಸಕ್ಕಾಗಿ ಒಂದು ಪರಿಸರ ನಿರ್ಮಾಣದ ಅಗತ್ಯವನ್ನು ರಾಜ್ಯ ಸರಕಾರ ಮನಗಂಡಿದೆ ಹಾಗೂ ಆ ಬಗ್ಗೆ ಪ್ರಯತ್ನ ಆರಂಭಿಸಿದೆ. ಈ ಮಾಧ್ಯಮದಿಂದ ನಾಟಕ, ನಾಟ್ಯಕಲೆಯ ಶಿಕ್ಷಣ ಪಡೆಯಬಹುದಾಗಿದೆ. ಕೇವಲ ರಾಜ್ಯದ ರಂಗಕರ್ಮಿಗಳು ಮಾತ್ರವಲ್ಲ, ವಿದೇಶಗಳ ರಂಗಾಸಕ್ತರೂ ಈ ಸ್ಕೂಲ್‌ನಲ್ಲಿ ರಂಗ ತರಬೇತಿ ಪ್ರಾಪ್ತಿಯಾಗಿಸಬಹುದು.

ದಿಲ್ಲಿಯ ಎನ್‌ಎಸ್‌ಡಿಯಲ್ಲಿ ದೇಶಾದ್ಯಂತದ ಕಲಾವಿದರು ಶಿಕ್ಷಣ ಪಡೆಯಲು ಬರುತ್ತಾರೆ. ಅಲ್ಲಿ ಮಹಾರಾಷ್ಟ್ರದಿಂದ ಕೇವಲ ಒಂದೋ ಎರಡೋ ಜನರಷ್ಟೇ ಆಯ್ಕೆಯಾಗುತ್ತಾರೆ. ಮಹಾರಾಷ್ಟ್ರದಲ್ಲಿ ಸ್ಕೂಲ್ ಆಫ್ ಡ್ರಾಮಾ ಆರಂಭವಾದರೆ ಮರಾಠಿ ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯಲಿದೆ. ಎನ್‌ಎಸ್‌ಡಿ ಪಠ್ಯಕ್ರಮದ ಜೊತೆಗೆ ಮರಾಠಿ ಜನಪದ ಕಲೆ, ಜನಪದ ನಾಟ್ಯ ಕೂಡಾ ಕಲಿಸುವ ಅವಕಾಶ ದೊರೆಯಲಿದೆ. ಮಹಾರಾಷ್ಟ್ರ ಸ್ಕೂಲ್ ಆಫ್ ಡ್ರಾಮಾದ ಸ್ಥಾಪನೆಯ ಪೂರ್ವ ತಯಾರಿ ಎಂಬಂತೆ ನಾಲ್ಕು ಪ್ರಮಾಣಪತ್ರ ಪಠ್ಯಕ್ರಮ ಪು.ಲ. ದೇಶಪಾಂಡೆ ಕಲಾ ಅಕಾಡಮಿಯಲ್ಲಿ ಆರಂಭಿಸಲಾಗುತ್ತದೆ. ಮಹಾರಾಷ್ಟ್ರ ಸ್ಕೂಲ್ ಆಫ್ ಡ್ರಾಮಾದ ರೂಪುರೇಷೆ ಹೇಗಿರಬೇಕು ಎನ್ನುವ ಬಗ್ಗೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗುತ್ತದೆ. ದಾದಾ ಸಾಹೇಬ್ ಪಾಲ್ಕೆ ಚಿತ್ರ ನಗರಿಯ ಪ್ರಬಂಧ ನಿರ್ದೇಶಕರು ಈ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿರುವರು. ಸಾಂಸ್ಕೃತಿಕ ಕಾರ್ಯ ನಿರ್ದೇಶನಾಲಯದ ನಿರ್ದೇಶಕರು ಈ ಸಮಿತಿಯ ಸದಸ್ಯರಿದ್ದಾರೆ. ಮುಂಬೈ ಯುನಿವರ್ಸಿಟಿಯ ಅಮೋಲ್ ದೇಶ್‌ಮುಖ್, ಅಭಿರಾಮ್ ಭಡ್ಕಮ್ಕರ್ ಮತ್ತು ದೀಪಕ್ ಕರಂಜೀಕರ್ ಸಮಿತಿಯ ಸರಕಾರೇತರ ಸದಸ್ಯರಾಗಿರುವರು.

* * *

ಮುಖ್ಯಮಂತ್ರಿಗೆ ಮುಜುಗರ ತಂದ ‘ಮಿ ಲಾಭಾರ್ಥಿ ಜಾಹೀರಾತು’

ಮಹಾರಾಷ್ಟ್ರ ಸರಕಾರವು ಮೂರು ವರ್ಷದ ತನ್ನ ಆಡಳಿತವನ್ನು ಪೂರ್ಣಗೊಳಿಸಿದ ಪ್ರಯುಕ್ತ ‘ಮಿ ಲಾಭಾರ್ಥಿ’ (ನಾನು ಲಾಭ ಪಡೆದವ) ಎನ್ನುವ ಜಾಹೀರಾತು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಿಸಿತ್ತು. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಪರೀತ ವ್ಯಂಗ್ಯದ ಮಾತುಗಳು ಬಂದ ನಂತರ ಮುಖ್ಯಮಂತ್ರಿಯವರು ತಮ್ಮ ಟ್ವಿಟರ್ ಅಕೌಂಟ್‌ನಿಂದ ಈ ಟ್ಯಾಗ್ ತೆಗೆದು ಹಾಕಬೇಕಾಯಿತು.

ಮೂರು ವರ್ಷ ಪೂರೈಸಿದ ನೆನಪಿಗಾಗಿ ಸರಕಾರವು ವಿಭಿನ್ನ ಯೋಜನೆಗಳ ಬಗ್ಗೆ ಜಾಹೀರಾತು ಪ್ರಕಟಿಸಿತ್ತು. ಇದರಲ್ಲಿ ‘ಮಿ ಲಾಭಾರ್ಥಿ’ ಟ್ಯಾಗ್‌ಲೈನ್ ಪತ್ರಿಕೆಗಳಲ್ಲಿ - ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಲಾಗಿತ್ತು. ರಾಜ್ಯದ ಬಡ ಜನತೆಗೆ ಸರಕಾರಿ ಯೋಜನೆಗಳ ಲಾಭ ಹೇಗೆ ಸಿಕ್ಕಿದೆ, ಇದರ ಬಗ್ಗೆ ಮಾಹಿತಿಯನ್ನು ಈ ಪ್ರಕಟನೆಯಲ್ಲಿ ನೀಡಲಾಗಿತ್ತು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಪರೀತ ಲೇವಡಿ ಮಾಡಲಾಯಿತು.

ಯಾಕೆಂದರೆ ವಾಸ್ತವಿಕ ರೂಪದಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಬಿಜೆಪಿ ಲೋಕ ಸಭೆ-ವಿಧಾನ ಸಭೆ ಚುನಾವಣೆಗಳಲ್ಲಿ ಸೋಶಿಯಲ್ ಮೀಡಿಯಾವನ್ನು ಭರ್ಜರಿಯಾಗಿ ಬಳಸಿತ್ತು. ಇದರ ಲಾಭ ಬಿಜೆಪಿಗೆ ಸಿಕ್ಕಿತ್ತು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸರಕಾರವನ್ನು ಲೇವಡಿ ಮಾಡಲಾಗುತ್ತಿದೆ. ಹೀಗಾಗಿ ಬಿಜೆಪಿ ಫಚೀತಿ ಅನುಭವಿಸಿತು. ಮಿ ಲಾಭಾರ್ಥಿ ಜಾಹೀರಾತಿನಲ್ಲಿ ಸರಕಾರದ ಸ್ವಚ್ಛತಾ ಗೃಹ, ಜಲ, ಭೂಮಿ ಅಧಿಗ್ರಹಣ.... ಇಂತಹ ಕೆಲವು ಯೋಜನೆಗಳ ಬಗ್ಗೆ ಲಾಭಾರ್ಥಿ ಗಳು ತಮ್ಮ ಅನುಭವ ತಿಳಿಸಿದ್ದರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಮಂತ್ರಿಗಳು ಗುರಿ ಆಗಿದ್ದರು. ಮಂತ್ರಿಗಳಾದ ಪ್ರಕಾಶ್ ಮೆಹ್ತಾ, ಗಿರೀಶ್ ಬಾಪಟ್, ವಿನೋದ್ ತಾವ್ಡೆ, ಸದಾಭಾವು ಖೋತ್, ರಾವ್ ಸಾಹೇಬ್ ದಾನ್ವೆ, ಸುಭಾಷ್ ದೇಸಾಯಿ, ಪಂಕಜಾ ಮುಂಢೆ.... ಹೀಗೆ ವಿವಿಧ ಖಾತೆಗಳ ಹಗರಣದ ಮಂತ್ರಿಗಳು ಮಿ ಲಾಭಾರ್ಥಿ (ನಾವು ಲಾಭ ಪಡೆದಿದ್ದೇವೆ) ಎಂದು ಹೇಳುವಂತಹ ಚಿತ್ರಗಳು ಓಡಾಡಿದವು. ಅನಂತರ ಮುಜುಗರಪಟ್ಟ ಮುಖ್ಯಮಂತ್ರಿಗಳು ತಮ್ಮ ಟ್ವಿಟರ್‌ನಿಂದ ಆ ವಾಕ್ಯ ತೆಗೆದು ಹಾಕಬೇಕಾಯಿತು.

* * *

6 ಲೈನ್‌ಗಳಲ್ಲಿ ರೈಲ್ವೆಯ ಹೆಲ್ಪ್‌ಲೈನ್ 182

ರೈಲ್ವೆಯಲ್ಲಿ ಪ್ರಯಾಣಿಕರಿಗಾಗಿ ಎಮರ್ಜೆನ್ಸಿ ಸಂದರ್ಭದಲ್ಲಿ 182ಕ್ಕೆ ಕಾಲ್ ಮಾಡಲು ಹೇಳಲಾಗುತ್ತದೆ. ಆದರೆ ಯಾವಾಗ ನೋಡಿದರೂ 182 ಲೈನ್ ಬ್ಯುಸಿ ಆಗಿರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಇದೀಗ ಮಧ್ಯರೈಲ್ವೆಯು 182ರ ಸಾಮರ್ಥ್ಯವನ್ನು ಎರಡು ಪಟ್ಟು ವೃದ್ಧಿ ಮಾಡಿದೆ. ಮೊದಲು 182ಕ್ಕಾಗಿ 3 ಲೈನ್‌ಗಳು ಇರುತ್ತಿತ್ತು. ಇದನ್ನು ಈಗ 6 ಲೈನ್‌ಗಳನ್ನಾಗಿ ಮಾಡಲಾಗಿದೆ. ಹೀಗಾಗಿ ಇನ್ನು ವೈಟಿಂಗ್ ಸಮಸ್ಯೆ ಇರಲಾರದು ಎನ್ನುತ್ತಾರೆ ಅಧಿಕಾರಿಗಳು. ಆರ್‌ಪಿಎಫ್‌ನ ಅಧಿಕಾರಿಗಳ ಪ್ರಕಾರ ದಿನದಲ್ಲಿ 182ಕ್ಕೆ ಬರುವ ಕರೆಗಳಲ್ಲಿ ಕೇವಲ 25-30 ಪ್ರತಿಶತ ಕಾಲ್‌ಗಳು ಮಾತ್ರ ಕೆಲಸದ್ದಾಗಿರುತ್ತವೆ. ಉಳಿದ ಕಾಲ್‌ಗಳು ಟೈಮ್‌ಪಾಸ್‌ಗಾಗಿ ಮಾಡುವ ಮಾತುಗಳಂತಿರುತ್ತವೆ. ದಿನದಲ್ಲಿ ಸರಾಸರಿ 150ರಷ್ಟು ಕಾಲ್‌ಗಳು ಬರುತ್ತವೆ. ಮಧ್ಯ ರೈಲ್ವೆಯಲ್ಲಿ 182 ಹೆಲ್ಪ್‌ಲೈನ್ ನೋಡಿಕೊಳ್ಳುವುದು ಮಹಿಳಾ ಸಿಬ್ಬಂದಿ. ಸುಮಾರು 30 ಮಹಿಳಾ ಜವಾನರು ಹೆಲ್ಪ್‌ಲೈನ್ ನೋಡಿಕೊಳ್ಳುತ್ತಾರೆ. ಇವರಿಗೆ ಮಾತನಾಡಲು ತರಬೇತಿ ನೀಡಲಾಗಿರುತ್ತದೆ. ಕೆಲವರು ಅಶ್ಲೀಲ ಮಾತುಗಳನ್ನೂ ಹೇಳುತ್ತಿರುತ್ತಾರಂತೆ. ಆದರೂ ಆ ಮಹಿಳೆಯರು ಆ ಬಗ್ಗೆ ತಲೆ ಕೆಡಿಸದೆ ತಮ್ಮ ಕರ್ತವ್ಯದಲ್ಲಿ ನಿರತರಾಗಿರುತ್ತಾರೆ.

* * *

ಧೂಳು ತಿನ್ನುತ್ತಿದೆ 165 ಗಾಲಿ ಕುರ್ಚಿಗಳು

ಭಿವಂಡಿ ಮಹಾನಗರ ಪಾಲಿಕೆಯ ಚುನಾವಣೆಯ ಸಂದರ್ಭದಲ್ಲಿ ಅಂಗವಿಕಲರನ್ನು ಮತದಾನ ಕೇಂದ್ರಕ್ಕೆ ಕರೆತರುವುದಕ್ಕೆ ಆರೋಗ್ಯ ಇಲಾಖೆಯು ಗಾಲಿ ಕುರ್ಚಿಗಳು ಖರೀದಿಸಿತ್ತು. ಇಂದು ಇದನ್ನೆಲ್ಲಾ ಒಂದು ಗೋದಾಮಿನಲ್ಲಿ ಇರಿಸಲಾಗಿದ್ದು ಕಳೆದ ಆರು ತಿಂಗಳಿನಿಂದ 165 ಗಾಲಿ ಕುರ್ಚಿಗಳು ಧೂಳು ತಿನ್ನುತ್ತಿವೆ. ಇವುಗಳನ್ನು ಆನಂತರ ಅಂಗವಿಕಲರಿಗೆ ವಿತರಿಸಬೇಕಾಗಿತ್ತು. ಆದರೆ ಮಹಾನಗರ ಪಾಲಿಕೆಯ ಜನ ಪ್ರತಿನಿಧಿಗಳಿಗೆ ಇದರ ಯಾವುದೇ ಮಾಹಿತಿ ಈ ತನಕ ಇರಲಿಲ್ಲ ಎನ್ನುವುದು ಸೋಜಿಗದ ಸಂಗತಿ.

ಮೇ 24ರಂದು ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತ ಹಾಕಲು ಅಂಗವಿಕಲರಿಗೆ ಯಾವುದೇ ತೊಂದರೆ ಆಗಬಾರದೆಂದು 165 ಗಾಲಿ ಕುರ್ಚಿಗಳನ್ನು ತರಿಸಲಾಗಿತ್ತು. ಪ್ರತೀ ಮತದಾನ ಕೇಂದ್ರದಲ್ಲಿ ಗಾಲಿ ಕುರ್ಚಿಯ ವ್ಯವಸ್ಥೆ ಮಾಡಲಾಗಿತ್ತು. ಗಾಲಿ ಕುರ್ಚಿಗಳಿಗೆ 2, 87,595 ರೂಪಾಯಿ ಬಾಡಿಗೆ ನೀಡುವ ಬದಲು 8,08,500 ರೂಪಾಯಿಗೆ ಖರೀದಿಸಲಾಗಿತ್ತು. ಮತದಾನದ ನಂತರ ಅಂಗವಿಕಲರಿಗೆ ‘ಅಪಂಗ್ ಕಲ್ಯಾಣ್ ವಿಭಾಗ’ ಮೂಲಕ ವಿತರಿಸಬೇಕಾಗಿತ್ತು. ಆದರೆ 6 ತಿಂಗಳಾದರೂ ಗಾಲಿ ಕುರ್ಚಿಗಳ ವಿತರಣೆ ಆಗಿಲ್ಲ.

* * *

ಡೀಸೆಲ್ ಖರ್ಚಾದದ್ದು ಹೇಗೆ?

ಮಳೆಗಾಲದ ಸಮಯ ರೈಲ್ವೆ ಸ್ಟೇಷನ್ ಪರಿಸರದಲ್ಲಿ ನೀರು ತುಂಬಿದರೆ ಹೊರಹಾಕಲು ಅನೇಕ ಕಡೆ ಪಂಪ್‌ಸೆಟ್ ಇರಿಸಲಾಗುತ್ತದೆ. ಆದರೆ ನೀರು ಎಷ್ಟು ಹೊರ ಹಾಕುತ್ತಾರೆ ಎನ್ನುವುದು ಚರ್ಚೆಯ ಸಂಗತಿ. ಆದರೂ ರೈಲ್ವೆ ತನ್ನ ಪೂರ್ವ ತಯಾರಿಯನ್ನು ಪತ್ರಿಕೆಗಳಿಗೆ ತಿಳಿಸುತ್ತದೆ.

ಈ ವರ್ಷ ಮಳೆಗಾಲದ ನಾಲ್ಕು ತಿಂಗಳಲ್ಲಿ ಈ ಪಂಪ್‌ಗಳಿಗೆ 17,000 ಲೀ. ಡೀಸೆಲ್ ಖರ್ಚಾಗಿದೆ ಎಂದು ರೈಲ್ವೆ ತಿಳಿಸಿದೆ. ಈ ಸಂಗತಿ ತಿಳಿದು ಬಂದದ್ದು ಆರ್‌ಟಿಐಯಿಂದ. ಮಳೆಗಾಲದ ಸಂದರ್ಭದಲ್ಲಿ ಪಶ್ಚಿಮ ರೈಲ್ವೆಯು ಚರ್ಚ್ ಗೇಟ್‌ನಿಂದ ವಿರಾರ್ ನಡುವೆ ರೈಲು ಹಳಿಗಳಲ್ಲಿ, ರೈಲ್ವೆ ಪರಿಸರದಲ್ಲಿ ನೀರು ತುಂಬಬಾರದೆಂದು ಮಳೆ ನೀರು ಹೊರಹಾಕಲು ಈ ಬಾರಿ 68 ಪಂಪ್‌ಗಳನ್ನು ಅಳವಡಿಸಿತ್ತು. ರೈಲ್ವೆಯಿಂದ ಇದಕ್ಕಾಗಿ 51 ಲಕ್ಷ ರೂಪಾಯಿ ಗುತ್ತಿಗೆಯನ್ನು ನೀಡಲಾಗಿತ್ತು ಹಾಗೂ ರೈಲ್ವೆಯು 17,000 ಲೀ. ಡೀಸೆಲ್ ಒದಗಿಸಿತ್ತು. ಮಾಹಿತಿಯನ್ನು ಸಮೀರ್ ಜವೇರಿ ಅವರು ಆರ್‌ಟಿಐ ಮೂಲಕ ಪಶ್ಚಿಮ ರೈಲ್ವೆಯಿಂದ ಪ್ರಾಪ್ತಿಯಾಗಿಸಿದ್ದಾರೆ. ಆದರೆ ಮುಂಬೈಯಲ್ಲಿ ಕೇವಲ 29 ಆಗಸ್ಟ್ 2017ರಂದು ಸುರಿದ ಭಾರೀ ಮಳೆಗೆ ಮಾತ್ರ ರೈಲು ಓಡಾಟ ಸ್ತಬ್ಧಗೊಂಡಿತ್ತು. ಬಾಕಿ ಸಮಯ ರೈಲು ಓಡಾಟವಿತ್ತು. ಹೀಗಿರುವಾಗ ಮಳೆಗಾಲದ ನಾಲ್ಕು ತಿಂಗಳಿಗೆ 17,000 ಲೀ. ಡೀಸೆಲ್ ಹೇಗೆ ಖರ್ಚಾಯಿತು? ಎನ್ನುವ ಪ್ರಶ್ನೆ ಮುಂದೆ ಬಂದಿದೆ.

* * *

ಮಹಾ ಪರಿನಿರ್ವಾಣ: ಸೌಲಭ್ಯ ಒದಗಿಸಲು ಸರಕಾರದಿಂದ ಬೈಠಕ್

ಡಾ. ಭೀಮರಾವ್ ಅಂಬೇಡ್ಕರ್‌ರ ಮಹಾ ಪರಿನಿರ್ವಾಣ ದಿವಸದ (ಡಿಸೆಂಬರ್ 6 ಪುಣ್ಯತಿಥಿ) ಸಂದರ್ಭದಲ್ಲಿ ದಾದರ್‌ನ ಚೈತ್ಯ ಭೂಮಿಗೆ ಬರಲಿರುವ ಲಕ್ಷಗಟ್ಟಲೆ ದಲಿತರಿಗೆ ಸೌಲಭ್ಯಗಳನ್ನು ಒದಗಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಆದೇಶ ನೀಡಿದ್ದು ಈ ಬಗ್ಗೆ ಬೈಠಕ್ ಕರೆದರು.

ಇಂದುಮಿಲ್‌ನಲ್ಲಿ ಸ್ಮಾರಕದ ಸ್ಥಳದಲ್ಲಿ ಆಗ ಡಾ. ಅಂಬೇಡ್ಕರ್‌ರ ಸ್ಮಾರಕದ ಪ್ರತಿಕೃತಿ ಇರಿಸಲೂ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಈ ಬೈಠಕ್‌ನಲ್ಲಿ ರೈಲುಗಳಲ್ಲಿ ಬರುವ ಸಾವಿರಾರು ಜನರಿಗೆ ಸೌಲಭ್ಯಗಳನ್ನು ಒದಗಿಸಬೇಕು. ಶಿವಾಜಿ ಪಾರ್ಕ್ ಮೈದಾನದಲ್ಲಿ ಉಪಾಹಾರ ಮತ್ತು ಭೋಜನದ ವ್ಯವಸ್ಥೆಯ ಜೊತೆಗೆ ಪರಿಸರವನ್ನು ಸ್ವಚ್ಛವಾಗಿರಿಸಲು ಆದೇಶ ನೀಡಿದ್ದಾರೆ.

ಡಿಸೆಂಬರ್ 6ರಂದು ಬಾಬಾ ಸಾಹೇಬ ಅಂಬೇಡ್ಕರ್ ಆಧಾರಿತ ಫಿಲ್ಮ್‌ನ್ನು ಪ್ರದರ್ಶಿಸಲೂ ವ್ಯವಸ್ಥೆ ಮಾಡಲಾಗಿದೆ. ಟೆಲಿವಿಷನ್, ಸಮಾಚಾರ ಪತ್ರಿಕೆ, ಆಕಾಶವಾಣಿಯ ಮಾಧ್ಯಮದಿಂದ ಡಾ. ಬಾಬಾ ಸಾಹೇಬ ಅವರ ಸಂದೇಶವನ್ನು ಪ್ರಸಾರ ಮಾಡಲಾಗುವುದು. ಇದೇ ಸಮಯ ಚೈತ್ಯ ಭೂಮಿಗೆ ಬರುವವರು ಇಂದುಮಿಲ್‌ನಲ್ಲಿ ಸ್ಮಾರಕದ ಸ್ಥಳಕ್ಕೂ ಬರುತ್ತಾರೆ. ಅಲ್ಲಿ ಕೂಡಾ ಸೌಲಭ್ಯ ಒದಗಿಸಬೇಕು. ಹಾಗೂ ಎಂಎಂಆರ್‌ಡಿಎಗೆ ಸ್ಮಾರಕದ ಮಾದರಿಯನ್ನು ಇರಿಸಲೂ ತಿಳಿಸಿದ್ದಾರೆ.

* * *

ಫೇರಿವಾಲರ ನಿಯಂತ್ರಣ

ಫೇರಿವಾಲಾರ ಬಗ್ಗೆ ಮುಂಬೈಯ ವಿವಿಧ ಪಕ್ಷಗಳ ನಡುವೆ ವಾದ ವಿವಾದ ಇನ್ನೂ ನಿಂತಿಲ್ಲ. ಮುಖ್ಯವಾಗಿ ದಾದರ್ ಪಶ್ಚಿಮ ಕ್ಷೇತ್ರದಲ್ಲಿ ಫೇರಿವಾಲರನ್ನು ಓಡಿಸಿರುವುದಕ್ಕೆ ಮುಂಬೈ ನಾಗರಿಕರು ಕೃತಜ್ಞತೆ ಹೇಳುವಂತಾಗಿದೆ. ಸೇತುವೆಯ ಕೆಳಗಡೆ ಕಾಲಿಡಲೂ ಜಾಗ ಇಲ್ಲದಷ್ಟು ಫೇರಿವಾಲರು ಕಿಕ್ಕಿರಿದು ತುಂಬಿದ್ದು ಅನೇಕ ವರ್ಷಗಳಿಂದ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ದಾದರ್‌ನ ಸೇತುವೆಯನ್ನು ಇಳಿಯಬೇಕಾಗಿತ್ತು. ಇದೀಗ ಬೆಸ್ಟ್ ಬಸ್ಸು ಅಲ್ಲಿ ಬಸ್‌ಸ್ಟಾಪ್‌ನ್ನು ನಿರ್ಮಿಸಿ ಬಸ್ಸು ತಿರುಗುವ ಕಾರಣ ಇನ್ನು ಫೇರಿವಾಲಾರು ಇಲ್ಲಿಗೆ ಬರುವುದಕ್ಕೆ ಕಷ್ಟವಿದೆ. ಈ ಕಾರಣ ರೈಲ್ವೆ ಪೊಲೀಸರಿಗೆ, ಮನಪಾ ಸಿಬ್ಬಂದಿಗೆ ಬರುವ ಹಫ್ತಾ ಹಣವೂ ಸದ್ಯ ನಿಂತಂತಾಗಿದೆ.

ಇನ್ನು ಮುಂದೆ ಮುಂಬೈಯಲ್ಲಿ ಕೇವಲ ಒಂದು ಲಕ್ಷ ಫೇರಿವಾಲರು ಮಾತ್ರ ಇರಬಹುದಂತೆ. ಉಳಿದ ಎಲ್ಲಾ ಫೇರಿವಾಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಂತೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News