ಪೃಥ್ವಿಯ ನಿಧಾನ ಪರಿಭ್ರಮಣದಿಂದ 2018ರಲ್ಲಿ ಸರಣಿ ಭೂಕಂಪ: ವಿಜ್ಞಾನಿಗಳ ಎಚ್ಚರಿಕೆ

Update: 2017-11-21 10:53 GMT

2018ನೇ ವರ್ಷವು ವಿಶ್ವಾದ್ಯಂತ ಕೋಟ್ಯಂತರ ಜನರಿಗೆ ಕೆಟ್ಟ ಸುದ್ದಿಯೊಂದನ್ನು ತರಬಹುದು. ಮುಂದಿನ ವರ್ಷ ಸರಣಿ ಮಾರಣಾಂತಿಕ ಭೂಕಂಪಗಳು ಸಂಭವಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.

ಭೂಮಿಯ ಸುತ್ತುವಿಕೆಯು ನಿಧಾನಗೊಳ್ಳುತ್ತಿದೆ ಮತ್ತು ಇದು ಕೋಟ್ಯಂತರ ಜನರ ಬದುಕಿನ ಮೇಲೆ ವಿನಾಶಕರ ಪರಿಣಾಮಗಳನ್ನು ಬೀರಬಹುದು ಎನ್ನುವುದು ಈ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಭೂಮಿಯ ಪರಿಭ್ರಮಣದ ವೇಗದಲ್ಲಿ ಏರಿಳಿತಗಳು ಭೂಕಂಪ ಚಟುವಟಿಕೆಗಳಿಗೆ ಕಾರಣವಾಗುತ್ತವೆ ಮತ್ತು ಭೂಗರ್ಭದಲ್ಲಿಯ ಅಗಾಧ ಶಕ್ತಿಯನ್ನು ಬಿಡುಗಡೆಗೊಳಿಸುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ವರ್ಷ ಕೇವಲ ಆರು ತೀವ್ರ ಭೂಕಂಪಗಳೊಂದಿಗೆ ಹೆಚ್ಚಿನ ಅಪಾಯವಿಲ್ಲದೆ ಪಾರಾಗಿದ್ದೇವೆ. ಆದರೆ ಮುಂದಿನ ವರ್ಷ ಭಾರೀ ಭೂಕಂಪಗಳ ಸಂಖ್ಯೆ 20ಕ್ಕೆ ಹೆಚ್ಚಬಹುದು ಮತ್ತು ಉಷ್ಣ ವಲಯದಲ್ಲಿ ಭಾರೀ ಜನಸಂಖ್ಯೆಯ ಪ್ರದೇಶಗಳಲ್ಲಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂಕಷ್ಟಗಳಿಗೆ ಗುರಿಯಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕೊಲರಾಡೊ ವಿವಿಯ ರೋಜರ್ ಬಿಲ್ಹಾಮ್ ಮತ್ತು ಮೊಂಟಾನಾ ವಿವಿಯ ರೆಬೆಕ್ಕಾ ಬೆಂಡಿಕ್ ಅವರು ಕಳೆದ ತಿಂಗಳು ಜಿಯಾಲಜಿಕಲ್ ಸೊಸೈಟಿ ಆಫ್ ಅಮೆರಿಕಾದ ಸಮಾವೇಶದಲ್ಲಿ ಈ ಸಂಬಂಧ ಪ್ರಬಂಧಗಳನ್ನು ಮಂಡಿಸಿ, 2018ಲ್ಲಿ ಭೂಕಂಪಗಳ ಸಂಖ್ಯೆ ಏಕೆ ಹೆಚ್ಚುತ್ತದೆ ಎನ್ನುವುದನ್ನು ವಿವರಿಸಿದ್ದಾರೆ.

ಭೂಮಿಯ ಪರಿಭ್ರಮಣ ಮತ್ತು ಭೂಕಂಪ ಚಟುವಟಿಕೆಗಳ ನಡುವೆ ಬಲವಾದ ಸಂಬಂಧವಿದೆ ಮತ್ತು ಮುಂದಿನ ವರ್ಷ ತೀವ್ರ ಭೂಕಂಪಗಳ ಸಂಖ್ಯೆ ಹೆಚ್ಚಲಿದೆ ಎನ್ನುವುದನ್ನು ಇದು ಸೂಚಿಸುತ್ತಿದೆ ಎಂದಿದ್ದಾರೆ ಬಿಲ್ಹಾಮ್.

ಬಿಲ್ಹಾಮ್ ಮತ್ತು ಬೆಂಡಿಕ್ 1900ರಿಂದ ಸಂಭವಿಸಿರುವ ರಿಕ್ಟರ್ ಮಾಪಕದಲ್ಲಿ 7 ಮತ್ತು ಅದಕ್ಕೂ ಹೆಚ್ಚಿನ ತೀವ್ರತೆಗಳ ಭೂಕಂಪಗಳನ್ನು ವಿಶ್ಲೇಷಿಸಿದ್ದಾರೆ. ಒಂದು ಶತಮಾನಕ್ಕೂ ಅವಧಿಯ ಭಾರೀ ಭೂಕಂಪಗಳ ವಿವರಗಳನ್ನು ಉತ್ತಮವಾಗಿ ದಾಖಲಿಸಿರುವುದು ಅವರ ಅಧ್ಯಯನಕ್ಕೆ ತುಂಬ ನೆರವಾಗಿದೆ.

ತಮ್ಮ ಅಧ್ಯಯನದ ವೇಳೆ ಈ ವಿಜ್ಞಾನಿಗಳು ಇತರ ಅವಧಿಗಳಿಗೆ ಹೋಲಿಸಿದರೆ ತೀವ್ರ ಭೂಕಂಪಗಳು ಗಣನೀಯ ಸಂಖ್ಯೆಯಲ್ಲಿ ಸಂಭವಿಸಿದ್ದ ಐದು ಬೇರೆ ಬೇರೆ ಅವಧಿಗಳನ್ನು ಪತ್ತೆ ಹಚ್ಚಿದ್ದರು. ಈ ಅವಧಿಗಳಲ್ಲಿ ವರ್ಷಕ್ಕೆ 25ರಿಂದ 30 ತೀವ್ರ ಭೂಕಂಪಗಳು ಸಂಭವಿಸಿದ್ದವು. ಉಳಿದ ಅವಧಿಗಳಲ್ಲಿ ಇಂತಹ ಭೂಕಂಪಗಳ ಸಂಖ್ಯೆ ವರ್ಷಕ್ಕೆ ಸುಮಾರು 15ರಷ್ಟಿತ್ತು.

ಭೂಮಿಯ ಪರಿಭ್ರಮಣ ವೇಗದಲ್ಲಿ ಅಲ್ಪ ಬದಲಾವಣೆಗಳಾಗುತ್ತಿರುತ್ತವೆ, ಕೆಲವೊಮ್ಮೆ ಇದು ಒಂದು ದಿನಕ್ಕೆ ಒಂದು ಮಿಲಿಸೆಕೆಂಡ್ ಆಗಿರಬಹುದು ಮತ್ತು ಅಣು ಗಡಿಯಾರಗಳಿಂದ ಇದನ್ನು ಅತ್ಯಂತ ನಿಖರವಾಗಿ ಅಳೆಯಬಹುದು.

ಭೂಮಿಯು ಐದು ವರ್ಷಗಳ ಮೊದಲೇ ಭೂಕಂಪದ ಮುನ್ಸೂಚನೆಯನ್ನು ನೀಡುತ್ತದೆ ಮತ್ತು ಅದರ ನಿಯತಕಾಲಿಕ ನಿಧಾನ ಪರಿಭ್ರಮಣದ ಅವಧಿ ನಾಲ್ಕು ವರ್ಷಗಳ ಹಿಂದೆಯೇ ಆರಂಭಗೊಂಡಿದೆ. ಹೀಗಾಗಿ ಮುಂದಿನ ವರ್ಷ ತೀವ್ರ ಭೂಕಂಪಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದು ಬಿಲ್ಹಾಮ್ ಭವಿಷ್ಯ ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News