×
Ad

ಹೆದ್ದಾರಿಯಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಬಹುಮುಖಿ ಕಾರ್ಯತಂತ್ರ; ರಸ್ತೆ ಸುರಕ್ಷತೆಗೆ ತಂತ್ರಜ್ಞಾನದ ಬಳಕೆ ಹೇಗೆ?

Update: 2026-01-23 20:19 IST

ಸಾಂದರ್ಭಿಕ ಚಿತ್ರ | Photo Credit : freepik

ಭಾರತದಲ್ಲಿ ಪ್ರತಿ ವರ್ಷ 4.6 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 1.6 ಲಕ್ಷಕ್ಕೂ ಹೆಚ್ಚು ಮಂದಿ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಎಕ್ಸ್‌ಪ್ರೆಸ್‌ವೇಗಳು ಹೆಚ್ಚಾಗುತ್ತಿದ್ದಂತೆ, ಮೂಲಸೌಕರ್ಯ ವಿಸ್ತರಣೆ ಮಾತ್ರ ಸುರಕ್ಷಿತ ಚಾಲನೆಗೆ ಸಾಕಾಗುವುದಿಲ್ಲ ಎಂದು ನೀತಿ ನಿರೂಪಕರು ಒಪ್ಪಿಕೊಂಡಿದ್ದಾರೆ. ವಿಸ್ತರಣೆಯನ್ನು ಮೀರಿ, ವ್ಯವಸ್ಥಿತ ಸುರಕ್ಷತಾ ಸುಧಾರಣೆಗೆ ಹೆದ್ದಾರಿಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ, ಹೇಗೆ ಮೇಲ್ವಿಚಾರಣೆ ಮಾಡಲಾಗಿದೆ, ಹೇಗೆ ನಿರ್ವಹಿಸಲಾಗಿದೆ ಎಂಬುದನ್ನು ಸರಕಾರ ಈಗ ಮರುಪರಿಶೀಲಿಸುತ್ತಿದೆ.

ಈ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ( MoRTH) ಹೆದ್ದಾರಿ ಸುರಕ್ಷತೆ ಏಕೆ ಆದ್ಯತೆಯಾಗಿದೆ? ಅದರ ಬಹುಮುಖಿ ಕಾರ್ಯತಂತ್ರವು ಜೀವಗಳನ್ನು ಉಳಿಸುವ ಗುರಿಯನ್ನು ಹೇಗೆ ಹೊಂದಿದೆ ಎಂಬುದನ್ನು ನೋಡೋಣ.

ಹೆದ್ದಾರಿ ಸುರಕ್ಷತೆಯು MoRTH ಗೆ ಆದ್ಯತೆ

ಭಾರತದ ರಸ್ತೆ ನೆಟ್‌ವರ್ಕ್‌ ನ ಕೇವಲ 2–3% ರಷ್ಟಿರುವ ರಾಷ್ಟ್ರೀಯ ಹೆದ್ದಾರಿಗಳು ಭೀಕರ ಅಪಘಾತಗಳಲ್ಲಿ ಹೆಚ್ಚಿನ ಪಾಲನ್ನು ಹೊಂದಿವೆ. ಹೆಚ್ಚಿನ ವೇಗ, ಅನಿಯಂತ್ರಿತ ಪ್ರವೇಶ ಬಿಂದುಗಳು, ಮಿಶ್ರ ಸಂಚಾರ, ಪಾದಚಾರಿಗಳು ಮತ್ತು ಪ್ರಾಣಿಗಳ ಒಳನುಗ್ಗುವಿಕೆ, ರಾತ್ರಿ ಹೊತ್ತು ಕಡಿಮೆ ಗೋಚರತೆ ಹಾಗೂ ವಿಳಂಬವಾದ ತುರ್ತು ಪ್ರತಿಕ್ರಿಯೆ ಅನೇಕ ಕಾರಿಡಾರ್‌ಗಳನ್ನು ಅಪಘಾತದ ತಾಣಗಳಾಗಿ ಪರಿವರ್ತಿಸಿವೆ.

ಜನಸಂಖ್ಯೆ ಹೆಚ್ಚುತ್ತಿರುವುದೂ ಇದಕ್ಕೆ ಕಾರಣವಾಗಿದೆ. ರಸ್ತೆ ಅಪಘಾತದಲ್ಲಿ ಸಾವಿಗೀಡಾದವರಲ್ಲಿ ಸುಮಾರು 66% ಮಂದಿ 18–45 ವಯೋಮಾನದವರು. ಸುಮಾರು ನಾಲ್ಕನೇ ಒಂದು ಭಾಗದಷ್ಟು ಜನರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇದು ರಸ್ತೆ ಸುರಕ್ಷತೆಯನ್ನು ಕೇವಲ ಸಾರಿಗೆ ಸಮಸ್ಯೆಯಾಗಿ ಮಾತ್ರವಲ್ಲದೆ, ಸಾರ್ವಜನಿಕ ಆರೋಗ್ಯ ಹಾಗೂ ಆರ್ಥಿಕ ಕಾಳಜಿಯನ್ನಾಗಿ ಮಾಡುತ್ತದೆ.

ಚಾಲಕರನ್ನು ಮಾತ್ರ ದೂಷಿಸುವುದು ನಿಷ್ಪರಿಣಾಮಕಾರಿ ಎಂದು MoRTH ಅಭಿಪ್ರಾಯಪಟ್ಟಿದೆ. ಬದಲಾಗಿ, ಮನುಷ್ಯರಿಂದಾಗುವ ತಪ್ಪುಗಳು ಗಂಭೀರ ಪರಿಣಾಮಗಳಿಗೆ ದಾರಿ ಮಾಡಿಕೊಡದಂತೆ ತಡೆಯುವ ಗುರಿಯೊಂದಿಗೆ ‘ಸುರಕ್ಷಿತ ವ್ಯವಸ್ಥೆ’ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಚಿವಾಲಯ ಹೇಳಿದೆ.

ಅಪಘಾತಗಳನ್ನು ತಡೆಗಟ್ಟಲು ತಂತ್ರಜ್ಞಾನವನ್ನು ಹೇಗೆ ಬಳಸಲಾಗುತ್ತಿದೆ?

ತಂತ್ರಜ್ಞಾನ ಬಳಸಿ ಅಪಘಾತ ತಡೆಗಟ್ಟುವಿಕೆ ಈಗ MoRTH ಕಾರ್ಯತಂತ್ರದ ಕೇಂದ್ರಬಿಂದುವಾಗಿದೆ. ನೈಜ-ಸಮಯದ ವೇಗ ಮೇಲ್ವಿಚಾರಣೆ, ಘಟನೆ ಪತ್ತೆ ಮತ್ತು ಸ್ವಯಂಚಾಲಿತ ಜಾರಿಗಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂಟೆಲಿಜೆಂಟ್ ಸಾರಿಗೆ ನಿರ್ವಹಣಾ ವ್ಯವಸ್ಥೆಗಳನ್ನು (ITMS) ಅಳವಡಿಸಲಾಗುತ್ತಿದೆ. AI-ಸಕ್ರಿಯ ಕ್ಯಾಮೆರಾಗಳು ಅತಿ ವೇಗ, ಲೇನ್ ಉಲ್ಲಂಘನೆ ಮತ್ತು ಸೀಟ್ ಬೆಲ್ಟ್ ಅನುಸರಣೆಯನ್ನು ಪತ್ತೆ ಮಾಡುತ್ತವೆ. ಆರಂಭಿಕ ಯೋಜನೆಗಳಲ್ಲಿ ಹೈ-ಸ್ಪೀಡ್ ಕಾರಿಡಾರ್‌ಗಳಲ್ಲಿ ವಾಹನದಿಂದ ವಾಹನಕ್ಕೆ ಹಾಗೂ ವಾಹನದಿಂದ ಮೂಲಸೌಕರ್ಯಕ್ಕೆ ಸಂವಹನ ವ್ಯವಸ್ಥೆಗಳನ್ನು ಪರೀಕ್ಷಿಸಲಾಗುತ್ತಿದೆ.

ಗಮನಾರ್ಹ ಉದಾಹರಣೆಯಾಗಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಜೈಪುರ–ಆಗ್ರಾ ಮತ್ತು ಜೈಪುರ–ರೇವಾರಿ ಕಾರಿಡಾರ್‌ ಗಳಲ್ಲಿ ಜನವರಿ 2026ರಿಂದ ನೈಜ ಸಮಯದ ಬೀದಿ ದನ ಎಚ್ಚರಿಕೆ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಜಾನುವಾರುಗಳಿರುವ ಪ್ರದೇಶಗಳಲ್ಲಿ ಚಾಲನೆ ಮಾಡುವಾಗ ಚಾಲಕರಿಗೆ 10 ಕಿ.ಮೀ ಮುಂಚಿತವಾಗಿ ಸ್ಥಳಾಧಾರಿತ SMS ಹಾಗೂ ಧ್ವನಿ ಎಚ್ಚರಿಕೆಗಳು ಲಭಿಸುತ್ತವೆ. ವಾಹನವನ್ನು ನಿಧಾನಗೊಳಿಸಲು ಇವು ಸಹಾಯಕವಾಗಿದ್ದು, ಆಯಾಸವಾಗದಂತೆ ಪ್ರತಿ 30 ನಿಮಿಷಗಳಿಗೊಮ್ಮೆ ಮಾತ್ರ ಎಚ್ಚರಿಕೆ ನೀಡಲಾಗುತ್ತದೆ.

ಮಂಜು ಆವರಿತ ಪರಿಸ್ಥಿತಿಗಳಲ್ಲಿ ಅಪಾಯ ತಗ್ಗಿಸಲು ಪ್ರತಿಫಲಿತ ಗುರುತುಗಳು, ಸೋಲಾರ್ ಬ್ಲಿಂಕರ್‌ಗಳು, ಸುಧಾರಿತ ಸಂಕೇತಗಳು, ವೇರಿಯಬಲ್ ಮೆಸೇಜ್ ಸೈನ್‌ಬೋರ್ಡ್‌ಗಳು ಹಾಗೂ ಪೊಲೀಸ್ ಮತ್ತು ಆಂಬ್ಯುಲೆನ್ಸ್‌ಗಳನ್ನು ಒಳಗೊಂಡ ಜಂಟಿ ತುರ್ತು ಕಾರ್ಯಾಚರಣೆಗಳನ್ನು ಬಳಸಲಾಗುತ್ತಿದೆ.

2019ರ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆಯಡಿಯಲ್ಲಿ ಇಲೆಕ್ಟ್ರಾನಿಕ್ ಜಾರಿ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ. ಸ್ಪೀಡ್ ಕ್ಯಾಮೆರಾಗಳು, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ವ್ಯವಸ್ಥೆಗಳು, CCTV, ಕ್ರ್ಯಾಶ್ ಬ್ಯಾರಿಯರ್‌ಗಳು ಹಾಗೂ 2025–26ರ SASCI ಯೋಜನೆಯಡಿ 3,000 ಕೋಟಿ ರೂ. ಹಂಚಿಕೆಯೊಂದಿಗೆ ಇ-ಚಲನ್ ವ್ಯವಸ್ಥೆಗೆ ಉತ್ತೇಜನ ನೀಡಲಾಗಿದೆ.

ಹೆದ್ದಾರಿ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಯಾವ ಬದಲಾವಣೆಗಳನ್ನು ಮಾಡಲಾಗುತ್ತಿದೆ?

ಎಲ್ಲಾ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ವಿನ್ಯಾಸ, ನಿರ್ಮಾಣ ಹಾಗೂ ಕಾರ್ಯಾಚರಣೆಯ ಹಂತಗಳಲ್ಲಿ ರಸ್ತೆ ಸುರಕ್ಷತಾ ಲೆಕ್ಕಪರಿಶೋಧನೆಯನ್ನು MoRTH ಕಡ್ಡಾಯಗೊಳಿಸಿದೆ. ಅಪಘಾತ-ಪೀಡಿತ ಸ್ಥಳಗಳನ್ನು ಸುಧಾರಿತ ಜ್ಯಾಮಿತಿ, ಸರ್ವೀಸ್ ರಸ್ತೆಗಳು, ಅಪಘಾತ ತಡೆಗೋಡೆಗಳು, ಪಾದಚಾರಿ ದಾಟುವಿಕೆಗಳು ಮತ್ತು ಸ್ಪಷ್ಟ ಸೂಚನಾ ಫಲಕಗಳೊಂದಿಗೆ ಮರುವಿನ್ಯಾಸಗೊಳಿಸಲಾಗುತ್ತಿದೆ.

ಹೊಸ ಎಕ್ಸ್‌ಪ್ರೆಸ್‌ವೇಗಳು ಮಧ್ಯದ ತಡೆಗೋಡೆಗಳು, ವಿಶಾಲ ಶೋಲ್ಡರ್‌ಗಳು, ಸುರಕ್ಷಿತ ಇಳಿಜಾರುಗಳು ಹಾಗೂ ಪ್ರವೇಶ-ನಿಯಂತ್ರಿತ ವಿನ್ಯಾಸಗಳನ್ನು ಹೆಚ್ಚಾಗಿ ಅನುಸರಿಸುತ್ತಿವೆ. ವೇಗದ ಸಂಚಾರದೊಂದಿಗೆ ಸಂಘರ್ಷ ಕಡಿಮೆ ಮಾಡಲು ವಾಸಸ್ಥಳಗಳ ಬಳಿ ಪಾದಚಾರಿ ಅಂಡರ್‌ಪಾಸ್‌ಗಳು ಮತ್ತು ಸರ್ವೀಸ್ ಲೇನ್‌ ಗಳಿಗೆ ಆದ್ಯತೆ ನೀಡಲಾಗುತ್ತಿದೆ.

ವನ್ಯಜೀವಿ-ಸೂಕ್ಷ್ಮ ವಲಯಗಳಲ್ಲಿ ನಾವೀನ್ಯತೆ ಸ್ಪಷ್ಟವಾಗಿದೆ. ವೀರಾಂಗಣ ದುರ್ಗಾವತಿ ಹುಲಿ ಅಭಯಾರಣ್ಯದ ಮೂಲಕ ಸಾಗುವ ಹೆದ್ದಾರಿಯಲ್ಲಿ, NHAI ಭಾರತದ ಮೊದಲ ‘ಟೇಬಲ್-ಟಾಪ್ ರೆಡ್ ಮಾರ್ಕಿಂಗ್’ ಪರಿಚಯಿಸಿದೆ. ಇದು ಎತ್ತರದ ಕೆಂಪು ಥರ್ಮೋಪ್ಲಾಸ್ಟಿಕ್ ಮೇಲ್ಮೈಯಾಗಿದ್ದು, ವಾಹನಗಳನ್ನು ನಿಧಾನಗೊಳಿಸಲು ದೃಶ್ಯ ಮತ್ತು ಸ್ಪರ್ಶ ಸೂಚನೆಗಳನ್ನು ನೀಡುತ್ತದೆ. ಈ ಪ್ರದೇಶದಲ್ಲಿ ಪ್ರಾಣಿಗಳ ಅಂಡರ್‌ಪಾಸ್‌ಗಳು, ಫೆನ್ಸಿಂಗ್, ಸೌರ ಬೆಳಕು ಹಾಗೂ ಕ್ಯಾಮೆರಾ ಮೇಲ್ವಿಚಾರಣೆಯೂ ಇದೆ.

ನಿರ್ಮಾಣ ಗುಣಮಟ್ಟವನ್ನು ಸುಧಾರಿಸಲು NHAI ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಗುತ್ತಿಗೆದಾರರ ಕಾರ್ಯಕ್ಷಮತೆಯೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಟೋಲ್ ಮತ್ತು ಹೆದ್ದಾರಿ ಕಾರ್ಯಾಚರಣೆಗಳನ್ನು ಹೇಗೆ ಮರುವಿನ್ಯಾಸಗೊಳಿಸಲಾಗುತ್ತಿದೆ?

ಟೋಲ್ ಪ್ಲಾಝಾಗಳು ಬಹುಕಾಲದಿಂದ ದಟ್ಟಣೆ ಮತ್ತು ಅಪಾಯಕಾರಿ ಲೇನ್ ಬದಲಾವಣೆಗಳಿಗೆ ಕಾರಣವಾಗಿವೆ. MoRTH ಈಗ ನಗದುರಹಿತ, ಪ್ರಯಾಣಿಕ ಸ್ನೇಹಿ ಟೋಲಿಂಗ್ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ. ಆಗಸ್ಟ್ 2025ರಲ್ಲಿ ಪ್ರಾರಂಭವಾದ FASTag ವಾರ್ಷಿಕ ಪಾಸ್ ಮೂಲಕ, 1,150 ಟೋಲ್ ಪ್ಲಾಜಾಗಳಲ್ಲಿ ರೂ.3,000ಕ್ಕೆ 200 ಪ್ರಯಾಣಗಳು ಅಥವಾ ಒಂದು ವರ್ಷದ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ನವೆಂಬರ್ 2025ರ ವೇಳೆಗೆ 36 ಲಕ್ಷಕ್ಕೂ ಹೆಚ್ಚು ಪಾಸ್‌ಗಳು ಮಾರಾಟವಾಗಿವೆ.

UPI ಟೋಲ್ ಪಾವತಿಗಳ ಮೇಲಿನ ಸರ್‌ಚಾರ್ಜ್ ಕಡಿತಗೊಳಿಸಿರುವುದು ಡಿಜಿಟಲ್ ವಹಿವಾಟುಗಳಿಗೆ ಉತ್ತೇಜನ ನೀಡಿದ್ದು, ನಗದು ಬಳಕೆಯನ್ನು ಕಡಿಮೆ ಮಾಡಿದೆ. FASTag ಹಾಗೂ ANPR ಆಧಾರಿತ ಬಹು-ಲೇನ್ ಮುಕ್ತ ಹರಿವಿನ (MLFF) ಟೋಲಿಂಗ್ ವ್ಯವಸ್ಥೆಯತ್ತ ಭಾರತ ಸಾಗುತ್ತಿದೆ. ಮೊದಲ MLFF ಕಾರಿಡಾರ್ 2026ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

ಹೆದ್ದಾರಿ ಅಗಲೀಕರಣದ ಸಮಯದಲ್ಲಿ ಬಳಕೆದಾರರಿಗೆ ಕೇವಲ 50% ಟೋಲ್ ಶುಲ್ಕ ವಿಧಿಸುವ ನಿಯಮ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಬಲಪಡಿಸುತ್ತದೆ.

ಅಪಘಾತಗಳ ನಂತರದ ಪ್ರತಿಕ್ರಿಯೆ

ಅಪಘಾತದ ತೀವ್ರತೆಯಿಗಿಂತಲೂ ವೈದ್ಯಕೀಯ ಆರೈಕೆಯ ವಿಳಂಬವೇ ಅನೇಕ ಸಾವುಗಳಿಗೆ ಕಾರಣವಾಗುತ್ತಿದೆ. MoRTHನ ಅಪಘಾತಾನಂತರದ ತಂತ್ರ ‘ಗೋಲ್ಡನ್ ಅವರ್’ ಮೇಲೆ ಕೇಂದ್ರೀಕೃತವಾಗಿದೆ. ರಾಹ್-ವೀರ್ (Good Samaritan) ಯೋಜನೆಯಡಿ, ಅಪಘಾತ ಪೀಡಿತರನ್ನು ಒಂದು ಗಂಟೆಯೊಳಗೆ ಆಸ್ಪತ್ರೆಗೆ ತಲುಪಿಸಲು ಸಹಾಯ ಮಾಡುವ ನಾಗರಿಕರಿಗೆ ಪ್ರತಿ ಘಟನೆಗೆ 25,000 ರೂ. ಪ್ರೋತ್ಸಾಹಧನ ಹಾಗೂ ಕಾನೂನು ರಕ್ಷಣೆಯನ್ನು ಒದಗಿಸಲಾಗುತ್ತದೆ.

ಇತರ ಕ್ರಮಗಳಲ್ಲಿ ನಗದುರಹಿತ ಚಿಕಿತ್ಸೆ ಯೋಜನೆ, ಟ್ರಾಮಾ ಕೇರ್ ಸೆಂಟರ್‌ಗಳು, 112 ತುರ್ತು ಸೇವೆಗಳೊಂದಿಗೆ ಏಕೀಕರಣ ಮತ್ತು e-DAR ಡಿಜಿಟಲ್ ಅಪಘಾತ ವರದಿ ವೇದಿಕೆಯ ಕಡ್ಡಾಯ ಬಳಕೆ ಸೇರಿವೆ.

ರಾಜ್ಯಗಳು, ಜಿಲ್ಲೆಗಳು ಮತ್ತು ನಾಗರಿಕರ ಪಾತ್ರ

ರಸ್ತೆ ಸುರಕ್ಷತೆ ಸಮಕಾಲೀನ ವಿಷಯವಾಗಿದ್ದು, ಕೇಂದ್ರ–ರಾಜ್ಯ ಸಮನ್ವಯ ಅಗತ್ಯವಾಗಿದೆ. ಜನವರಿ 2026ರಲ್ಲಿ ಕೇಂದ್ರ ಸಾರಿಗೆ ಸಚಿವರು ಜಾರಿ, ಡಿಜಿಟಲೀಕರಣ ಮತ್ತು ಶಾಸನಾತ್ಮಕ ಸುಧಾರಣೆಗಳನ್ನು ಒಟ್ಟುಗೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಸ್ಥಳೀಯ ಮಟ್ಟದಲ್ಲಿ ‘ಸಡಕ್ ಮಿತ್ರ’ ಯುವ ಸ್ವಯಂಸೇವಕರಿಗೆ ಅಪಘಾತ ತಾಣಗಳನ್ನು ಗುರುತಿಸಿ ಪ್ರತಿಕ್ರಿಯೆ ಕಾರ್ಯಾಚರಣೆಗಳಿಗೆ ನೆರವಾಗುವ ತರಬೇತಿ ನೀಡಲಾಗುತ್ತಿದೆ. ರಾಷ್ಟ್ರವ್ಯಾಪಿ ಸಡಕ್ ಸುರಕ್ಷಾ ಅಭಿಯಾನವು ಹೆಲ್ಮೆಟ್, ಸೀಟ್ ಬೆಲ್ಟ್ ಮತ್ತು ಸುರಕ್ಷಿತ ಚಾಲನೆಯನ್ನು ಉತ್ತೇಜಿಸುತ್ತದೆ.

ಚಾಲಕರ ತರಬೇತಿಯನ್ನು ಆಧುನಿಕ ಸಂಸ್ಥೆಗಳು ಮತ್ತು ಸಿಮ್ಯುಲೇಟರ್‌ಗಳ ಮೂಲಕ ನವೀಕರಿಸಲಾಗುತ್ತಿದೆ. ಅದೇ ವೇಳೆ, ಭಾರತ್ NCAP ರೇಟಿಂಗ್‌ಗಳು, ಕಡ್ಡಾಯ ಏರ್‌ಬ್ಯಾಗ್‌ಗಳು, ABS ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಅನ್ನು ಹಂತ ಹಂತವಾಗಿ ಅಳವಡಿಸುವ ಮೂಲಕ ವಾಹನ ಸುರಕ್ಷತಾ ಮಾನದಂಡಗಳನ್ನು ಬಿಗಿಗೊಳಿಸಲಾಗುತ್ತಿದೆ.

2030ರೊಳಗೆ ರಸ್ತೆ ಅಪಘಾತ ಸಾವುಗಳನ್ನು 50% ಕಡಿಮೆ ಮಾಡುವ ಗುರಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಅವರು, ಫೆಬ್ರವರಿ 2020ರಲ್ಲಿ ನಡೆದ ರಸ್ತೆ ಸುರಕ್ಷತೆ ಕುರಿತ 3ನೇ ಜಾಗತಿಕ ಸಚಿವರ ಸಮ್ಮೇಳನದಲ್ಲಿ ಅಂಗೀಕರಿಸಲಾದ ಸ್ಟಾಕ್‌ಹೋಮ್ ಘೋಷಣೆಯಂತೆ, 2030ರೊಳಗೆ ರಸ್ತೆ ಸಂಚಾರ ಸಾವುಗಳು ಮತ್ತು ಗಾಯಗಳನ್ನು 50% ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದು ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಮಾಹಿತಿಯಂತೆ, 2024ರ ಕ್ಯಾಲೆಂಡರ್ ವರ್ಷದಲ್ಲಿ ದೇಶದಲ್ಲಿ ವರದಿಯಾದ ಒಟ್ಟು ರಸ್ತೆ ಅಪಘಾತ ಸಾವುಗಳ ಸಂಖ್ಯೆ 1,77,177. ಇದರಲ್ಲಿ e-DAR ಪೋರ್ಟಲ್‌ನಿಂದ ಪಡೆದ ಪಶ್ಚಿಮ ಬಂಗಾಳದ ಮಾಹಿತಿಯೂ ಸೇರಿದೆ ಎಂದು ಅವರು ಹೇಳಿದ್ದಾರೆ.

2023ರಲ್ಲಿ ದೇಶಾದ್ಯಂತ 4,80,583 ರಸ್ತೆ ಅಪಘಾತಗಳು ವರದಿಯಾಗಿದ್ದು, 1,72,890 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 4,62,825 ಮಂದಿ ಗಾಯಗೊಂಡಿದ್ದಾರೆ.

2024ರ ವಿಶ್ವ ರಸ್ತೆ ಅಂಕಿಅಂಶಗಳ ಪ್ರಕಾರ, ಪ್ರತಿ ಲಕ್ಷ ಜನಸಂಖ್ಯೆಗೆ ಮರಣ ಪ್ರಮಾಣ ಚೀನಾದಲ್ಲಿ 4.3, ಅಮೆರಿಕದಲ್ಲಿ 12.76 ಆಗಿದ್ದು, ಭಾರತದಲ್ಲಿ ಇದು 11.89 ಆಗಿದೆ.

ರಸ್ತೆ ಸುರಕ್ಷತೆ ಸಮಸ್ಯೆಯನ್ನು ಪರಿಹರಿಸಲು ಶಿಕ್ಷಣ, ಇಂಜಿನಿಯರಿಂಗ್ (ರಸ್ತೆ ಮತ್ತು ವಾಹನ ಎರಡೂ), ಜಾರಿ ಮತ್ತು ತುರ್ತು ಆರೈಕೆ ಎಂಬ 4Eಗಳ ಆಧಾರದ ಮೇಲೆ ಸರಕಾರ ಬಹುಮುಖಿ ಕಾರ್ಯತಂತ್ರ ರೂಪಿಸಿದೆ. ಅದರಂತೆ, ದೇಶದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News