ಮ್ಯಾನ್ಮಾರ್ ನಿಯಂತ್ರಣ ವರ್ಣಭೇದ ನೀತಿಗೆ ಸಮ

Update: 2017-11-21 16:11 GMT

ಯಾಂಗನ್, ನ. 21: ರೊಹಿಂಗ್ಯಾ ಮುಸ್ಲಿಮರ ಮೇಲೆ ಮ್ಯಾನ್ಮಾರ್ ವಿಧಿಸಿರುವ ಉಸಿರುಗಟ್ಟಿಸುವ ನಿಯಂತ್ರಣ ವರ್ಣಭೇದ ನೀತಿಗೆ ಸಮವಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಮಂಗಳವಾರ ಹೇಳಿದೆ.

ನಿರ್ವಸಿತ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶದ ಶಿಬಿರಗಳಲ್ಲಿ ವಾಸಿಸುತ್ತಿರುವ ದೃಶ್ಯಗಳು ಜಗತ್ತಿನಾದ್ಯಂತ ಆಕ್ರೋಶ ಹುಟ್ಟುಹಾಕಿವೆ. ಮ್ಯಾನ್ಮಾರ್ ಸೈನಿಕರು ನಡೆಸುತ್ತಿರುವ ಹತ್ಯೆಗಳು, ಅತ್ಯಾಚಾರ ಮತ್ತು ಗ್ರಾಮಗಳಿಗೆ ಬೆಂಕಿ ಕೊಡುತ್ತಿರುವ ಘಟನೆಗಳ ಬಗ್ಗೆ ಅಲ್ಲಿಂದ ಪಾರಾಗಿ ಬಂದ ರೊಹಿಂಗ್ಯಾ ನಿರಾಶ್ರಿತರು ಜಗತ್ತಿಗೆ ಹೇಳುತ್ತಿದ್ದಾರೆ.

ಕೆಲವು ರೊಹಿಂಗ್ಯಾ ಮುಸ್ಲಿಮರ ವಾಪಸಾತಿ ಬಗ್ಗೆ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳು ತಾತ್ವಿಕವಾಗಿ ಒಪ್ಪಿವೆ, ಆದರೆ, ವಾಪಸಾತಿ ವಿವರಗಳ ಬಗ್ಗೆ ಅವುಗಳ ನಡುವೆ ಭಿನ್ನಮತವಿದೆ. ಬಾಂಗ್ಲಾದೇಶ ಹೇಳುತ್ತಿರುವಷ್ಟು ಸಂಖ್ಯೆಯ ನಿರಾಶ್ರಿತರನ್ನು ವಾಪಸ್ ಪಡೆಯುವುದು ಸಾಧ್ಯವಿಲ್ಲ ಎಂದು ಮ್ಯಾನ್ಮಾರ್ ಸೇನಾ ಮುಖ್ಯಸ್ಥ ಕಳೆದ ವಾರ ಹೇಳಿದ್ದಾರೆ.

 ‘ಸರಕಾರಿ ಪ್ರಾಯೋಜಿತ’ ಕಾರ್ಯಾಚರಣೆಯು ರೊಹಿಂಗ್ಯಾ ಬದುಕಿನ ಎಲ್ಲ ಚಟುವಟಿಕೆಗಳನ್ನು ವಾಸ್ತವಿಕವಾಗಿ ನಿಯಂತ್ರಿಸಿದೆ ಎಂದು ಆ್ಯಮ್ನೆಸ್ಟಿ ಅಧ್ಯಯನ ವರದಿಯೊಂದು ಹೇಳಿದೆ. ಇದರಿಂದಾಗಿ, ರೊಹಿಂಗ್ಯ ಮುಸ್ಲಿಮರು ಬೌದ್ಧ ಬಾಹುಳ್ಯದ ದೇಶದಲ್ಲಿ ‘ಕೊಳೆಗೇರಿ’ ಮಾದರಿಯ ಜೀವನ ಮಾಡಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಆ್ಯಮ್ನೆಸ್ಟಿಯ ಹಿರಿಯ ಸಂಶೋಧನಾ ನಿರ್ದೇಶಕಿ ಆ್ಯನಾ ನೀಸ್ಟಾಟ್ ಸಂಶೋಧನಾ ವರದಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News