ಐಪಿಎಲ್: ಇಂಗ್ಲೆಂಡ್‌ನಲ್ಲಿ ಆಟಗಾರರ ಹರಾಜಿಗೆ ಆಸಕ್ತಿ ವಹಿಸಿದ ಎರಡು ತಂಡದ ಮಾಲಕರು

Update: 2017-11-21 18:33 GMT

ಹೊಸದಿಲ್ಲಿ, ನ.21: ಮುಂದಿನ ಆವೃತ್ತಿಗೆ ಐಪಿಎಲ್ ಆಟಗಾರರ ಹರಾಜನ್ನು ಇಂಗ್ಲೆಂಡ್‌ನಲ್ಲಿ ನಡೆಸಲು ಎರಡು ತಂಡಗಳ ಮಾಲಕರು ಆಸಕ್ತಿ ವಹಿಸಿದ್ದು, ಆದರೆ ಈ ಪ್ರಸ್ತಾವನೆಯನ್ನು ಬಹುತೇಕ ತಂಡಗಳ ಮಾಲಕರು ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.

 ಮುಂಬೈನಲ್ಲಿ ಮಂಗಳವಾರ ನಡೆದ ಬಿಸಿಸಿಐ ಸಭೆಯಲ್ಲಿ ಎರಡು ತಂಡಗಳ ಮಾಲಕರು ಈ ಪ್ರಸ್ತಾವನೆಯನ್ನು ಮುಂದಿಟ್ಟರು ಎಂದು ಗೊತ್ತಾಗಿದೆ.

  ಹಿಂದಿನ ಆವೃತ್ತಿಗಳಲ್ಲಿ ಆಡಿದ್ದ ಕೆಲವು ಆಟಗಾರರನ್ನು ಉಳಿಸಿಕೊಳ್ಳುವ ನಿಯಮವನ್ನು ಮತ್ತು ಆರ್‌ಟಿಎಂ ನಿಯಮವನ್ನು ಕೈ ಬಿಡುವಂತೆ ರಾಜಸ್ಥಾನ ರಾಯಲ್ಸ್ ಮನವಿ ಮಾಡಿತು. ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಎರಡಕ್ಕಿಂತ ಹೆಚ್ಚು ಆಟಗಾರರನ್ನು ಅದೇ ತಂಡದಲ್ಲಿ ಉಳಿಸಿಕೊಳ್ಳಬಾರದು ಎಂದು ಸಭೆಯ ಗಮನ ಸೆಳೆಯಿತು. ಎರಡೂ ನಿಯಮದಲ್ಲಿ ಆಟಗಾರರ ಸಂಖ್ಯೆ 3ನ್ನು ಮೀರಬಾರದು ಎಂದು ಕೆಲವು ತಂಡಗಳು ಬಿಸಿಸಿಐ ಸಭೆಯಲ್ಲಿ ಒತ್ತಾಯಿಸಿದವು.

  ವಿವಿಧ ತಂಡಗಳ ಮಾಲಕರಾದ ಡೇರ್‌ಡೆವಿಲ್ಸ್ ತಂಡದ ಜಿ.ಎಂ.ರಾವ್, ಮುಂಬೈ ಇಂಡಿಯನ್ಸ್ ನ ಆಕಾಶ್ ಅಂಬಾನಿ, ಕೋಲ್ಕತಾ ನೈಟ್ ರೈಡರ್ಸ್‌ ನ ಶಾರುಕ್ ಖಾನ್ ಮತ್ತು ಜಯ ಮೆಹ್ತಾ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೋಹಿತ್ ಬರ್ಮನ್ ಮತ್ತು ನೆಸ್ ವಾಡಿಯಾ ಭಾಗವಹಿಸಿದ್ದರು. ಆದರೆ ರಾಜಸ್ಥಾನ ರಾಯಲ್ಸ್ ಪ್ರತಿನಿಧಿಯಾಗಿ ಮನೋಜ್ ಬದಾಲೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಜಾನ್ ಜಾರ್ಜ್ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News