×
Ad

ರುಕ್ಮಾ ಬಾಯ್ ರಾವತ್ ಗೆ ಗೂಗಲ್ ಡೂಡಲ್ ಗೌರವ ನೀಡಿದ್ದು ಏಕೆ ?

Update: 2017-11-22 15:56 IST

ಹೊಸದಿಲ್ಲಿ,ನ.22 : ಭಾರತದ ಪ್ರಪ್ರಥಮ ಮಹಿಳಾ ವೈದ್ಯೆಯರಲ್ಲೊಬ್ಬರಾಗಿದ್ದ ರುಕ್ಮಾ ಬಾಯ್ ರಾವತ್ ಅವರಿಗೆ ಬುಧವಾರ ಗೂಗಲ್ ತನ್ನ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಶ್ರೇಯಾ ಗುಪ್ತಾ ಅವರು ರಚಿಸಿದ್ದ ಈ ಡೂಡಲ್ ನಲ್ಲಿ  ಅವರು ರೋಗಿಗಳ ತಪಾಸಣೆ ಮಾಡುವ ಚಿತ್ರವಿದೆ.

ನವೆಂಬರ್ 23, 1864ರಂದು ಬಾಂಬೆ ನಗರದಲ್ಲಿ ಜನಾರ್ದನ ಪಾಂಡುರಂಗ ಹಾಗೂ ಜಯಂತಿ ಬಾಯ್ ಅವರ ಏಕೈಕ ಮಗಳಾಗಿ ರುಕ್ಮಾ ಬಾಯ್ ಜನಿಸಿದ್ದರು. ಆಕೆ ಎಂಟು ವರ್ಷದವಳಿರುವಾಗಲೇ ತಂದೆ ತೀರಿಕೊಂಡಿದ್ದರು. ಹನ್ನೊಂದರ ವಯಸ್ಸಿನಲ್ಲಿಯೇ ಆಕೆಯ ವಿವಾಹವನ್ನು ದಾದಾಜಿ ಭಿಕಾಜಿ ಎಂಬವರೊಂದಿಗೆ ನೆರವೇರಿಸಲಾಗಿತ್ತು. ಇತ್ತ ಅವರ ತಾಯಿ  ಸಖಾರಾಂ ಅರ್ಜುನ್ ಎಂಬ ಖ್ಯಾತ ವೈದ್ಯರನ್ನು ವಿವಾಹವಾದರು. ರುಕ್ಮಾ ಬಾಯ್ ತಮ್ಮ ವಿವಾಹದ ನಂತರವೂ ತಮ್ಮ ತಾಯಿ ಮತ್ತು ಮಲತಂದೆಯೊಂದಿಗೆ ವಾಸಿಸುತ್ತಿದ್ದರು. ವಿವಾಹವಾಗಿ ಏಳು ವರ್ಷಗಳ ನಂತರ ದಾದಾಜಿ ನ್ಯಾಯಾಲಯದ ಮೊರೆ ಹೋಗಿ ತನ್ನ ಪತ್ನಿ ತನ್ನೊಂದಿಗೆ ಬಾಳುವಂತೆ ಆದೇಶ ನೀಡಬೇಕೆಂದು ಕೋರಿದರು. ಆದರೆ ರುಕ್ಮಾ ಬಾಯಿ ಇದು ತಮಗಿಷ್ಟವಿಲ್ಲವೆಂದಿದ್ದರು. ವ್ಯಾಜ್ಯ ಮೂರು ವರ್ಷಗಳ ಕಾಲ ಮುಂದುವರಿದು ಕೊನೆಗೆ ದಾದಾಜಿ ಪರವಾಗಿ ತೀರ್ಪು ಬಂದಿತ್ತು. ಒಂದೋ ಗಂಡನ ಜತೆ ಬಾಳಬೇಕು ಇಲ್ಲವೇ ಆರು ತಿಂಗಳು ಜೈಲು ಶಿಕ್ಷೆಗೊಳಗಾಗಬೇಕು ಎಂದು ರುಕ್ಮಾಗೆ ಹೇಳಲಾಯಿತು, ಆಕೆ ಜೈಲು ಶಿಕ್ಷೆ ಆರಿಸಿಕೊಂಡಿದ್ದಳು. ನಂತರ ಈ ತೀರ್ಪನ್ನು ರಾಣಿ ವಿಕ್ಟೋರಿಯಾ ರದ್ದುಗೊಳಿಸಿದ್ದರು. ಈ ಬೆಳವಣಿಗೆಯ ನಂತರ ಏಜ್ ಆಫ್ ಕನ್ಸೆಂಟ್ ಆಕ್ಟ್ 1891 ಜಾರಿಗೆ ಬಂದಿತ್ತು.

ಗಂಡನಿಂದ ಕಾನೂನಾತ್ಮಕವಾಗಿ ಪ್ರತ್ಯೇಕಗೊಂಡ ನಂತರ 1888ರಲ್ಲಿ ಆಕೆ ಇಂಗ್ಲೆಂಡಿಗೆ ತೆರಳಿ ಅಲ್ಲಿನ ಲಂಡನ್ ಸ್ಕೂಲ್ ಆಫ್ ಮೆಡಿಸಿನ್ ಫಾರ್ ವಿಮೆನ್ ಇಲ್ಲಿ ವೈದ್ಯಕೀಯ ಶಿಕ್ಷಣ ಪಡೆದು  ಭಾರತಕ್ಕೆ ಮರಳಿದ್ದರು. 35 ವರ್ಷಗಳ ಕಾಲ ಸೂರತ್, ರಾಜಕೋಟ್ ಹಾಗೂ ಬಾಂಬೆ ಇಲ್ಲಿ ವೈದ್ಯ ವೃತ್ತಿ ನಡೆಸಿದ ಆಕೆ ಸೆಪ್ಟೆಂಬರ್ 25, 1955ರಲ್ಲಿ ಕೊನೆಯುಸಿರೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News