9/11ರ ದಾಳಿ: ಕಟ್ಟಡ ಮಾಲಕರಿಗೆ 617 ಕೋಟಿ ರೂ ನೀಡಲು ಒಪ್ಪಿಗೆ

Update: 2017-11-22 15:11 GMT

ನ್ಯೂಯಾರ್ಕ್, ನ. 22: 2001 ಸೆಪ್ಟಂಬರ್ 11ರ ಭಯೋತ್ಪಾದಕ ದಾಳಿಗಳಲ್ಲಿ ಧ್ವಂಸಗೊಂಡ ಇಲ್ಲಿನ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಮಾಲಕರಿಗೆ ಪರಿಹಾರವಾಗಿ 95.1 ಮಿಲಿಯ ಡಾಲರ್ (ಸುಮಾರು 617 ಕೋಟಿ ರೂಪಾಯಿ) ನೀಡಲು ಅಮೆರಿಕನ್ ಏರ್‌ಲೈನ್ಸ್ ಮತ್ತು ಯುನೈಟೆಡ್ ಏರ್‌ಲೈನ್ಸ್ ಒಪ್ಪಿಕೊಂಡಿವೆ.

ಲ್ಯಾರಿ ಸಿಲ್ವರ್‌ಸ್ಟೀನ್ ಒಡೆತನದ ವಿಶ್ವ ವಾಣಿಜ್ಯ ಕೇಂದ್ರದ ಕಟ್ಟಡಗಳಿಗೆ ನೀಡಬೇಕಾದ ಪರಿಹಾರವನ್ನು ವಿಮಾನಯಾನ ಕಂಪೆನಿಗಳ ವಿಮಾ ಕಂಪೆನಿಗಳು ನೀಡಲಿವೆ. ಇದರೊಂದಿಗೆ 13 ವರ್ಷಗಳ ವ್ಯಾಜ್ಯ ಕೊನೆಗೊಂಡಂತಾಗಿದೆ.

9/11ರ ದಾಳಿಯ ಆರು ತಿಂಗಳು ಮೊದಲು ಈ ಸ್ಥಳವನ್ನು 99 ವರ್ಷಗಳ ಲೀಸ್‌ಗೆ ಸಿಲ್ವರ್‌ಸ್ಟೀನ್ ನ್ಯೂಯಾರ್ಕ್ ಮತ್ತು ನ್ಯೂಜರ್ಸಿ ಬಂದರು ಪ್ರಾಧಿಕಾರದಿಂದ ಪಡೆದುಕೊಂಡಿದ್ದರು.

ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳನ್ನು ಎರಡು ವಿಮಾನಗಳು ಉರುಳಿಸಿದ ಬಳಿಕ, ಸಿಲ್ವರ್‌ಸ್ಟೀನ್ ತನ್ನ ವಿಮಾ ಕಂಪೆನಿಯಿಂದ 4.55 ಬಿಲಿಯ ಡಾಲರ್ (29,536 ಕೋಟಿ ರೂಪಾಯಿ) ಪರಿಹಾರ ಪಡೆದಿದ್ದರು. ಇದಕ್ಕಾಗಿ ಹಲವಾರು ವರ್ಷಗಳ ಸಂಧಾನ ನಡೆದಿತ್ತು.

ಬಳಿಕ, ಅವರು ಅಮೆರಿಕನ್ ಮತ್ತು ಯುನೈಟೆಡ್ ಏರ್‌ಲೈನ್ ಕಂಪೆನಿಗಳಿಂದಲೂ ಪರಿಹಾರ ಕೋರಿದ್ದರು. ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳನ್ನು ಕೆಡವಲು ಈ ಕಂಪೆನಿಗಳ ವಿಮಾನಗಳನ್ನು ಅಪಹರಿಸಿ ಬಳಸಲಾಗಿತ್ತು.

ಅವರು ಆರಂಭದಲ್ಲಿ ಎರಡು ವಿಮಾನಯಾನ ಕಂಪೆನಿಗಳು ಮತ್ತು ವಿಮಾನ ನಿಲ್ದಾಣ ಭದ್ರತಾ ಕಂಪೆನಿಗಳಿಂದ 12.3 ಬಿಲಿಯ ಡಾಲರ್ (ಸುಮಾರು 79,845 ಕೋಟಿ ರೂಪಾಯಿ) ಪರಿಹಾರ ಕೋರಿದ್ದರು.

ಈಗ ಉಭಯ ಪಕ್ಷಗಳು ಈ 617 ಕೋಟಿ ರೂಪಾಯಿ ಪರಿಹಾರ ನೀಡುವ ಒಪ್ಪಂದಕ್ಕೆ ಬಂದಿವೆ.

2001 ಸೆಪ್ಟಂಬರ್ 11ರಂದು ಅಲ್-ಖಾಯಿದ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 2,750ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನೊಂದು ಅಪಹೃತ ವಿಮಾನ ವಾಶಿಂಗ್ಟನ್‌ನಲ್ಲಿರುವ ಪೆಂಟಗನ್ ಕಟ್ಟಡಕ್ಕೆ ಅಪ್ಪಳಿಸಿತ್ತು ಹಾಗೂ ನಾಲ್ಕನೆ ವಿಮಾನ ಪೆನ್ಸಿಲ್ವೇನಿಯದಲ್ಲಿ ಗದ್ದೆಯೊಂದಕ್ಕೆ ಅಪ್ಪಳಿಸಿತ್ತು. ಈ ಸರಣಿ ದಾಳಿಗಳಲ್ಲಿ ಒಟ್ಟು ಸುಮಾರು 3,000 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News