ಬೆರೂತ್‌ಗೆ ವಾಪಸಾದ ಹರೀರಿ

Update: 2017-11-22 15:29 GMT

ಬೆರೂತ್, ನ. 22: ಅಧ್ಯಕ್ಷ ಮೈಕಲ್ ಅವುನ್ ಮನವಿಯಂತೆ, ಲೆಬನಾನ್ ಪ್ರಧಾನಿ ಸಅದ್ ಅಲ್-ಹರೀರಿ ಬುಧವಾರ ರಾಜೀನಾಮೆ ನೀಡುವ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ನವೆಂಬರ್ 4ರಂದು ಸೌದಿ ಅರೇಬಿಯದಿಂದ ಟಿವಿ ಮೂಲಕ ತನ್ನ ರಾಜೀನಾಮೆ ಘೋಷಿಸಿದ ಬಳಿಕ ಮೊದಲ ಬಾರಿಗೆ ಬೆರೂತ್‌ಗೆ ಮರಳಿದ ಹರೀರಿ ತನ್ನ ಹೊಸ ನಿರ್ಧಾರವನ್ನು ಘೋಷಿಸಿದರು.

ತನ್ನ ಈ ನಿರ್ಧಾರವು ಜವಾಬ್ದಾರಿಯುತ ಮಾತುಕತೆಗೆ ಅವಕಾಶ ಕಲ್ಪಿಸುತ್ತದೆ ಹಾಗೂ ದೇಶ ಎದುರಿಸುತ್ತಿರುವ ವಿಭಜನವಾದಿ ವಿಷಯಗಳು ಹಾಗೂ ಅವುಗಳು ಅರಬ್ ಸಹೋದರರೊಂದಿಗಿನ ಲೆಬನಾನ್‌ನ ಸಂಬಂಧಗಳ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ಈಗ ಮಾತುಕತೆ ನಡೆಸಬಹುದಾಗಿದೆ ಎಂದು ಬೆರೂತ್ ಸಮೀಪದ ಅಧ್ಯಕ್ಷೀಯ ಅರಮನೆಯಲ್ಲಿ ಹರೀರಿ ಹೇಳಿದರು.

‘‘ನಾನು ಇಂದು ಅಧ್ಯಕ್ಷರಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದೆ. ರಾಜೀನಾಮೆಗೆ ಕಾರಣವಾದ ಅಂಶಗಳು ಹಾಗೂ ರಾಜಕೀಯ ಹಿನ್ನೆಲೆ ಬಗ್ಗೆ ಹೆಚ್ಚಿನ ಮಾತುಕತೆ ನಡೆಯುವವರೆಗೆ ಕಾಯುವಂತೆ ಅವರು ನನಗೆ ಸೂಚಿಸಿದರು. ನಾನು ಅದನ್ನು ಒಪ್ಪಿದೆ’’ ಎಂದು ಟೆಲಿವಿಶನ್‌ನಲ್ಲಿ ಪ್ರಸಾರಗೊಂಡ ಹೇಳಿಕೆಯೊಂದರಲ್ಲಿ ಅವರು ತಿಳಿಸಿದರು.

ಪ್ರಾದೇಶಿಕ ಸಂಘರ್ಷಗಳಿಂದ ದೇಶವನ್ನು ಕಾಪಾಡಲು ಎಲ್ಲ ಲೆಬನಾನಿಗಳು ಒಗ್ಗೂಡಬೇಕು ಎಂದು ಅವರು ಇರಾನ್ ಬೆಂಬಲಿತ ಶಕ್ತಿಶಾಲಿ ಸಂಘಟನೆ ಹಿಝ್ಬುಲ್ಲಾವನ್ನು ಉಲ್ಲೇಖಿಸುತ್ತಾ ಹೇಳಿದರು.

 ಹರೀರಿ ನವೆಂಬರ್ 4ರಂದು ರಾಜೀನಾಮೆ ಘೋಷಿಸಿದಾಗ ಲೆಬನಾನ್ ಆಘಾತಕ್ಕೆ ಒಳಗಾಗಿತ್ತು. ರಾಜೀನಾಮೆ ನೀಡುವಂತೆ ಸೌದಿ ಅರೇಬಿಯ ಅವರನ್ನು ಬಲವಂತಪಡಿಸಿದೆ ಹಾಗೂ ಅವರನ್ನು ಹಿಡಿದಿಟ್ಟಿದೆ ಎಂಬುದಾಗಿ ಲೆಬನಾನ್ ಸರಕಾರಿ ಅಧಿಕಾರಿಗಳು ಮತ್ತು ಸ್ವತಃ ಹರೀರಿ ನಿಷ್ಠರು ಆರೋಪಿಸಿದ್ದರು. ಆದರೆ, ಈ ಆರೋಪಗಳನ್ನು ಸೌದಿ ಅರೇಬಿಯ ಅಧಿಕಾರಿಗಳು ಮತ್ತು ಹರೀರಿ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News