ವಿಶ್ವಸಂಸ್ಥೆಯಲ್ಲಿ ವೀಟೊ ಅಧಿಕಾರ ವಿಸ್ತರಣೆಗೆ ಅಮೆರಿಕ ವಿರೋಧ

Update: 2017-11-22 15:37 GMT

ವಾಶಿಂಗ್ಟನ್, ನ. 22: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರು ಹೊಂದಿರುವ ವೀಟೊ ಅಧಿಕಾರದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡುವುದನ್ನು ಅಥವಾ ವಿಸ್ತರಿಸುವುದಕ್ಕೆ ಅಮೆರಿಕ ವಿರುದ್ಧವಾಗಿದೆ ಎಂದು ಉನ್ನತ ದರ್ಜೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದಾಗ್ಯೂ, 15 ಸದಸ್ಯರ ಭದ್ರತಾ ಮಂಡಳಿಯಲ್ಲಿ ಅಲ್ಪ ವಿಸ್ತರಣೆ ಮಾಡುವುದನ್ನು ಅದು ಬೆಂಬಲಿಸುತ್ತದೆ.

ಸುಧಾರಿತ ಭದ್ರತಾ ಮಂಡಳಿಯು 21ನೆ ಶತಮಾನದ ವಾಸ್ತವಗಳನ್ನು ಪ್ರತಿನಿಧಿಸಬೇಕು ಹಾಗೂ ಈ ಶತಮಾನದ ಸವಾಲುಗಳನ್ನು ಎದುರಿಸಲು ಸಮರ್ಥವಾಗಬೇಕು ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದರು.

 ಇತ್ತೀಚೆಗೆ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ನಡೆದ ಚುನಾವಣೆಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಸಮಿತಿ ಮತ್ತು ಭದ್ರತಾ ಮಂಡಳಿಗಳ ನಡುವೆ ಏರ್ಪಟ್ಟ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ, ಭದ್ರತಾ ಮಂಡಳಿಯ ಸುಧಾರಣೆ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ವಕ್ತಾರರು ಉತ್ತರಿಸುತ್ತಿದ್ದರು.

ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಭಾರತದ ದಲ್ವೀರ್ ಭಂಡಾರಿ ವಿಶ್ವಸಂಸ್ಥೆಯ ಸದಸ್ಯರಿಂದ ಭಾರೀ ಬೆಂಬಲ ಪಡೆದಿರುವುದನ್ನು ಸ್ಮರಿಸಬಹುದಾಗಿದೆ. ಅವರು ವಿಶ್ವಸಂಸ್ಥೆಯ ಪ್ರಧಾನ ಸಮಿತಿಯಲ್ಲಿ 193 ಮತಗಳ ಪೈಕಿ 183ನ್ನು ಪಡೆದರೆ, ಭದ್ರತಾ ಮಂಡಳಿಯಲ್ಲಿ ಎಲ್ಲ 15 ಮತಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News