ಬಿದಿರು ಇನ್ನು ಮುಂದೆ ‘ಮರ’ವಲ್ಲ !

Update: 2017-11-23 16:57 GMT

► ಅರಣ್ಯೇತರ ಪ್ರದೇಶಗಳಲ್ಲಿ ಬೆಳೆಯುವ ಬಿದಿರಿನ ಕಡಿತ, ಸಾಗಣೆಗೆ ಬೇಕಿಲ್ಲ ಪರ್ಮಿಟ್

► ಬಿದಿರು ಕೃಷಿಗೆ ಉತ್ತೇಜನದ ಉದ್ದೇಶ

► 2022ರೊಳಗೆ ಬಿದಿರು ಕೃಷಿಕರ ಆದಾಯ ದ್ವಿಗುಣ ನಿರೀಕ್ಷೆ

ಹೊಸದಿಲ್ಲಿ,ನ.23: ಮಹತ್ವದ ಭಾರತೀಯ ಅರಣ್ಯ ಕಾಯ್ದೆ 1927ರ ತಿದ್ದುಪಡಿ ಅಧ್ಯಾದೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಅಂಕಿತ ಹಾಕಿದ್ದಾರೆ.

 ಈ ಅಧ್ಯಾದೇಶವು ಅರಣ್ಯೇತರ ಪ್ರದೇಶಗಳಲ್ಲಿ ಬೆಳಸಲಾಗುವ ಬಿದಿರನ್ನು ಮರಗಳ ವ್ಯಾಖ್ಯಾನದಿಂದ ಹೊರತುಪಡಿಸಲಿದೆ. ಆ ಮೂಲಕ ಬಿದಿರುಗಳನ್ನು ಕಡಿಯುವುದಕ್ಕೆ ಹಾಗೂ ಅವುಗಳ ಸಾಗಣೆಗೆ ಪರವಾನಿಗೆಯ ಪಡೆಯುವುದರಿಂದ ವಿನಾಯಿತಿ ನೀಡಲಿದೆ.

  ಈ ಸಂಕ್ಷಿಪ್ತ ಅಧ್ಯಾದೇಶವು ಜಾರಿಗೆ ಬರುವ ಮೊದಲು ಅರಣ್ಯ ಕಾಯ್ದೆಯಡಿ ತಾಳೆಮರ,ಬಿದಿರು, ಬೆತ್ತ ಹಾಗೂ ಕುರುಚಲುಗಿಡಗಳನ್ನು ಮರವೆಂದೇ ವ್ಯಾಖ್ಯಾನಿಸಲಾಗಿತ್ತು.ಆದರೆ ನೂತನ ಅಧ್ಯಾದೇಶದಿಂದಾಗಿ ಭಾರತೀಯ ಅರಣ್ಯ ಕಾಯ್ದೆಯ 2ನೆ ಸೆಕ್ಷನ್‌ನ 7 ಪರಿಚ್ಛೇದದಲ್ಲಿ ಮರದ ವ್ಯಾಖ್ಯಾನದಿಂದ ‘ಬಿದಿರು’ ಪದವನ್ನು ಕೈಬಿಡಲಾಗಿದೆ.

 ಬಿದಿರು ಕೃಷಿಯನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ ಈ ನಡೆಯು, 2022ರೊಳಗೆ ಬಿದಿರು ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವ ಯೋಜನೆಯನ್ನು ಹೊಂದಿದೆಯೆಂದು ಮೂಲಗಳು ತಿಳಿಸಿವೆ.

 ಆದರೆ, ಅರಣ್ಯ ಪ್ರದೇಶಗಳಲ್ಲಿ ಬೆಳೆಯುವ ಬಿದಿರನ್ನು ಮುಂದೆಯೂ 1980ರ ಅರಣ್ಯ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಲ್ಲಿ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News