ವ್ಯಾಪಂ ಹಗರಣ: 592 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ದಾಖಲು

Update: 2017-11-23 18:04 GMT

ಭೊಪಾಲ್, ನ.23: ಬಹುಕೋಟಿ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ಪಡೆ ಸಿಬಿಐ ಮಧ್ಯಪ್ರದೇಶದ ನಾಲ್ವರು ಖಾಸಗಿ ವೈದ್ಯಕೀಯ ಕಾಲೇಜು ಮುಖ್ಯಸ್ಥರೂ ಸೇರಿದಂತೆ 592 ಜನರ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದೆ. ಭೋಪಾಲ್‌ನಲ್ಲಿರುವ ಎಲ್ ಎನ್ ವೈದ್ಯಕೀಯ ಕಾಲೇಜಿನ ಮುಖ್ಯಸ್ಥರಾದ ಜೆ ಎನ್ ಚೋಕ್ಸೆ, ಪೀಪಲ್ಸ್ ಮೆಡಿಕಲ್ ಕಾಲೇಜಿನ ಎಸ್ ಎನ್ ವಿಜಯವರ್ಗೀಯ, ಚಿರಾಯು ವೈದ್ಯಕೀಯ ಕಾಲೇಜಿನ ಅಜಯ್ ಗೊಯೆಂಕಾ ಮತ್ತು ಇಂದೊರ್‌ನಲ್ಲಿರುವ ಇಂಡೆಕ್ಸ್ ವೈದ್ಯಕೀಯ ಕಾಲೇಜಿನ ಸುರೇಶ್ ಬಡೊರಿಯಾ ಹೆಸರನ್ನು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಆರೋಪ ಹೊತ್ತಿರುವ ಮೂವರು ಮುಖ್ಯಸ್ಥರು ಮಾಧ್ಯಮಕ್ಕೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದರೆ ಬಡೊರಿಯಾ ಮಾತ್ರ ತಾನು ಅಥವಾ ತನ್ನ ಕಾಲೇಜಿನ ಹೆಸರನ್ನು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ತಿಳಿಸಿದ್ದಾರೆ.

ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ ಅಥವಾ ವ್ಯಾಪಂ 2012ರಲ್ಲಿ ನಡೆಸಿದ್ದ ಪ್ರೀ-ಮೆಡಿಕಲ್ ಟೆಸ್ಟ್ (ಪಿಎಂಟಿ) ವಿರುದ್ಧ ಭೋಪಾಲ್‌ನ ವಿಶೇಷ ಸಿಬಿಐ ನ್ಯಾಯಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ರಾಜ್ಯದಲ್ಲಿರುವ ವಿವಿಧ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಪಡೆಯಲು ಅರ್ಹತೆಗಾಗಿ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾದ 334 ಮಂದಿ ಅಭ್ಯರ್ಥಿಗಳಾಗಿದ್ದರೆ 155 ಮಂದಿ ಅಭ್ಯರ್ಥಿಗಳ ಪೋಷಕರಾಗಿದ್ದಾರೆ. 46 ಮಂದಿ ಪರೀಕ್ಷೆಯ ಸಮಯದಲ್ಲಿ ನೇಮಕಗೊಂಡಿದ್ದ ಪರಿಶೀಲಕರು, ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜಿನ 26 ಅಧಿಕಾರಿಗಳು, 22 ಮಧ್ಯವರ್ತಿಗಳು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಇಬ್ಬರ ಹೆಸರನ್ನು ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಗರಣ ನಡೆದ ಸಮಯದಲ್ಲಿ ಇಲಾಖೆಯ ನಿರ್ದೇಶಕರಾಗಿದ್ದ ಎಸ್ ಸಿ ತಿವಾರಿ ಮತ್ತು ಜಂಟಿ ನಿರ್ದೇಶಕ ಎನ್ ಎಂ ಶ್ರೀವಾಸ್ತವ ಅವರ ಹೆಸರುಗಳನ್ನು ಸಿಬಿಐ ತನ್ನ ಚಾರ್ಜ್‌ಶಿಟ್‌ನಲ್ಲಿ ಉಲ್ಲೇಖಿಸಿದೆ. ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾಗಿರುವ ವ್ಯಕ್ತಿಗಳ ಪೈಕಿ 245 ಮಂದಿಯನ್ನು ಮೊದಲ ಬಾರಿಗೆ ಆರೋಪಿಗಳೆಂದು ಹೆಸರಿಸಲಾಗಿದೆ. ಇತರರ ಹೆಸರುಗಳನ್ನು ಈ ಹಿಂದೆ ಸಿಬಿಐ ಸಲ್ಲಿಸಿದ್ದ ದೋಷಾರೋಪ ಪಟ್ಟಿಗಳಲ್ಲೂ ಉಲ್ಲೇಖಿಸಲಾಗಿತ್ತು. ವೈದ್ಯಕೀಯ ಕಾಲೇಜುಗಳಿಗೆ ಮತ್ತು ರಾಜ್ಯದ ವಿವಿಧ ಸರಕಾರಿ ಉದ್ಯೋಗಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವ್ಯಾಪಂ ನಡೆಸಿರುವ ವಿವಿಧ ಪರೀಕ್ಷೆಗಳಲ್ಲಿ ನಡೆದಿರುವ ಬೃಹತ್ ಪ್ರಮಾಣದ ಅವ್ಯವಹಾರದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News