ಟಿಬೆಟ್ ಚೀನಾದೊಂದಿಗಿರಲಿ ಆದರೆ ಹೆಚ್ಚಿನ ಅಭಿವೃದ್ಧಿ ಕಾಣಲಿ: ದಲಾಯಿ ಲಾಮಾ

Update: 2017-11-23 18:18 GMT

ಕೊಲ್ಕತ್ತಾ, ನ.23: ಟಿಬೆಟ್ ಚೀನಾದಿಂದ ಸ್ವಾತಂತ್ರವನ್ನು ಬಯಸುವುದಿಲ್ಲ ಆದರೆ ಹೆಚ್ಚಿನ ಅಭಿವೃದ್ಧಿಯನ್ನು ಬಯಸುತ್ತದೆ ಎಂದು ಟಿಬೆಟ್‌ನ ಆಧ್ಯಾತ್ಮಿಕ ಗುರು ದಲಾಯಿ ಲಾಮಾ ಗುರುವಾರದಂದು ತಿಳಿಸಿದರು.

ಕೆಲವೊಂದು ಸಂದರ್ಭದಲ್ಲಿ ಜಗಳಗಳು ನಡೆದರೂ ಟಿಬೆಟ್ ಚೀನಾದ ಜೊತೆಗಿನ ಸಂಬಂಧವನ್ನು ಇಷ್ಟಪಡುತ್ತದೆ ಎಂದು ದಲಾಯಿ ಲಾಮಾ ಕೊಲ್ಕತ್ತಾದಲ್ಲಿ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಿಳಿಸಿದರು.

ನಡೆದದ್ದು ನಡೆದು ಹೋಗಿದೆ. ಈಗ ನಾವು ಭವಿಷ್ಯದ ಕಡೆಗೆ ನೋಡಬೇಕಿದೆ. ನಾವು ಚೀನಾದಿಂದ ಸ್ವಾತಂತ್ರವನ್ನು ಬಯಸುತ್ತಿಲ್ಲ. ನಾವು ಚೀನಾದ ಜೊತೆಗೆ ಇರಲು ಬಯಸುತ್ತೇವೆ. ಆದರೆ ಹೆಚ್ಚಿನ ಅಭಿವೃದ್ಧಿಯನ್ನೂ ನಾವು ಬಯಸುತ್ತೇವೆ ಎಂದು ಆಧ್ಯಾತ್ಮಿಕ ಗುರು ತಿಳಿಸಿದರು. ಚೀನಾವು ಟಿಬೆಟ್‌ನ ಸಂಸ್ಕೃತಿಯನ್ನು ಗೌರವಿಸಬೇಕು. ಟಿಬೆಟ್‌ಗೆ ಬೇರೆಯದ್ದೇ ಸಂಸ್ಕೃತಿಯಿದೆ. ಚೀನಾದ ಜನರು ಅವರ ತಾಯ್ನಾಡನ್ನು ಇಷ್ಟಪಡುವಂತೆ ನಾವು ನಮ್ಮ ತಾಯ್ನಾಡನ್ನು ಇಷ್ಟಪಡುತ್ತೇವೆ ಎಂದು ದಲಾಯಿ ಲಾಮಾ ನುಡಿದರು.

ಕಳೆದ ಕೆಲವು ದಶಕಗಳಲ್ಲಿ ಏನು ನಡೆದಿದೆ ಎಂಬ ಬಗ್ಗೆ ಚೀನೀಯರಿಗೆ ತಿಳಿದಿಲ್ಲ. ದೇಶವು ಈಗ ಬದಲಾಗಿದೆ. ಚೀನಾವು ಜಗತ್ತಿನೊಂದಿಗೆ ಸೇರುವ ಮೂಲಕ 40%ದಿಂದ 50% ಬದಲಾಗಿದೆ ಎಂದು ವಿವರಿಸಿದ ದಲಾಯಿ ಲಾಮಾ ಚೀನಾದ ಪರಿಸರತಜ್ಞರು ಟಿಬೆಟ್ ಪ್ರಸ್ಥಭೂಮಿಯ ಪರಿಸರದ ಮೇಲಿನ ಪರಿಣಾಮವು ದಕ್ಷಿಣ ಧ್ರುವ ಮತ್ತು ಉತ್ತರ ಧ್ರುವದಷ್ಟೇ ಇದೆ ಎಂದು ತಿಳಿಸಿದ್ದಾರೆ ಟಿಬೆಟನ್ನು ಪರಿಸರತಜ್ಞರು ಮೂರನೇ ಧ್ರುವ ಎಂದು ಕರೆದಿದ್ದಾರೆ ಎಂದು ತಿಳಿಸಿದರು.

ಯಾಂಗ್ಸ್ಟೆಯಿಂದ ಸಿಂಧು ನದಿಯವರೆಗೆ ಎಲ್ಲ ಪ್ರಮುಖ ನದಿಗಳ ಉಗಮಸ್ಥಾನ ಟಿಬೆಟ್ ಆಗಿದೆ. ಅವುಗಳ ಮೇಲೆ ಮಿಲಿಯನ್‌ಗಟ್ಟಲೆ ಜೀವಗಳು ಅವಲಂಬಿತವಾಗಿವೆ. ಹಾಗಾಗಿ ಟಿಬೆಟ್ ಪ್ರಸ್ಥಭೂಮಿಯನ್ನು ರಕ್ಷಿಸುವುದರಿಂದ ಕೇವಲ ಟಿಬೆಟ್‌ಗೆ ಮಾತ್ರವಲ್ಲ ಆ ಮಿಲಿಯನ್ ಜನರಿಗೂ ಒಳ್ಳೆಯದಾಗುತ್ತದೆ ಎಂದು ಅವರು ಹೇಳಿದರು.

 ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದನ್ನು ಆಕ್ಷೇಪಿಸಿರುವ ಚೀನಾದ ನಡೆಯ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಹಿಂದಿ-ಚೀನಿ ಬಾಯಿ ಬಾಯಿ ಎಂಬ ಸ್ಫೂರ್ತಿಯ ವಾಕ್ಯವನ್ನು ಗೌರವಿಸುವ ಮೂಲಕ ಭಾರತ-ಚೀನಾ ಸಂಬಂಧ ಮುಂದುವರಿಯಬೇಕು ಎಂದು ಹೇಳಿದ ಟಿಬೆಟ್‌ನ ಗುರು ಭಾರತಕ್ಕೆ ಚೀನಾದ ಮತ್ತು ಚೀನಾಕ್ಕೆ ಭಾರತದ ಅಗತ್ಯವಿದೆ. ಅವರು ಜೊತೆಯಾಗಿಯೇ ಬದುಕಬೇಕಿದೆ ಎಂದು ತಿಳಿಸಿದರು. ಶಾಂತಿಯುತವಾಗಿ ಬದುಕಿ ಇತರರಿಗೆ ನೆರವಾಗುವ ಹೊರತಾಗಿ ಬೇರೆ ಯಾವುದೇ ದಾರಿಯಿಲ್ಲ ಎಂದು ದಲಾಯಿ ಲಾಮಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News