ಇಂಗ್ಲೆಂಡ್ 196/4

Update: 2017-11-23 18:59 GMT

ಬ್ರಿಸ್ಬೇನ್, ನ.23: ಬೆಳಕಿನ ಅಭಾವ ಹಾಗೂ ಮಳೆ ಅಡ್ಡಿಯಿಂದಾಗಿ ಇಲ್ಲಿ ಗುರುವಾರ ಆರಂಭವಾದ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯದ ವಿರುದ್ಧ ಇಂಗ್ಲೆಂಡ್ 4 ವಿಕೆಟ್‌ಗಳ ನಷ್ಟಕ್ಕೆ 196 ರನ್ ಗಳಿಸಿದೆ.

 ನಾಯಕ ಜೋ ರೂಟ್(15) ಹಾಗೂ ಮಾಜಿ ನಾಯಕ ಅಲಿಸ್ಟರ್ ಕುಕ್(2) ಅಲ್ಪ ಮೊತ್ತಕ್ಕೆ ಔಟಾದರು. 10 ಎಸೆತಗಳನ್ನು ಎದುರಿಸಿದ್ದ ಕುಕ್ ಪಂದ್ಯದ ಮೂರನೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆಗ ಜೇಮ್ಸ್ ವಿನ್ಸಿ(83, 170 ಎಸೆತ, 12 ಬೌಂಡರಿ) ತಂಡಕ್ಕೆ ಆಸರೆಯಾದರು. ಜೋಶ್ ಹೇಝಲ್‌ವುಡ್ ಬೌಲಿಂಗ್‌ನಲ್ಲಿ ರನ್ ಕದಿಯಲು ಹೋದ ವಿನ್ಸಿ ಅವರು ನಥಾನ್ ಲಿಯೊನ್ ಅವರಿಂದ ರನೌಟಾದರು. ಆ್ಯಶಸ್‌ನಲ್ಲಿ ಚೊಚ್ಚಲ ಶತಕ ದಿಂದ ವಂಚಿತರಾದರು.

 68 ರನ್ ಗಳಿಸಿದ್ದಾಗ ಆಸ್ಟ್ರೇಲಿಯದ ವಿಕೆಟ್ ಕೀಪರ್ ಟಿಮ್ ಪೈನ್ ಅವರಿಂದ ಜೀವದಾನ ಪಡೆದಿದ್ದ ವಿನ್ಸಿ ಅವರು ಸ್ಟೋನ್‌ಮನ್ ಅವರೊಂದಿಗೆ (53 ರನ್)ಎರಡನೇ ವಿಕೆಟ್‌ಗೆ 125 ರನ್ ಜೊತೆಯಾಟ ನಡೆಸಿದರು.

ದಿನದಾಟದಂತ್ಯಕ್ಕೆ ಡೇವಿಡ್ ಮಾಲನ್(28) ಹಾಗೂ ಮೊಯಿನ್ ಅಲಿ(13) ಕ್ರೀಸ್ ಕಾಯ್ದುಕೊಂಡಿದ್ದಾರೆ. 2 ವಿಕೆಟ್ ಪಡೆದ ಕಮಿನ್ಸ್(2-59) ಯಶಸ್ವಿ ಬೌಲರ್ ಎನಿಸಿಕೊಂಡರು.

ಆಸ್ಟ್ರೇಲಿಯ ಗಾಬಾ ಸ್ಟೇಡಿಯಂನಲ್ಲಿ 1988ರ ಬಳಿಕ ಒಂದೂ ಪಂದ್ಯವನ್ನು ಸೋಲದೇ ಅಜೇಯ ದಾಖಲೆ ಕಾಯ್ದುಕೊಂಡಿದೆ. ಆರಂಭಿಕ ಆಟಗಾರ ಡೇವಿಡ್ ವಾರ್ನರ್(ಕುತ್ತಿಗೆ) ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಶಾನ್ ಮಾರ್ಷ್(ಬೆನ್ನುನೋವು) ಫಿಟ್‌ನೆಸ್ ಟೆಸ್ಟ್‌ನಲ್ಲಿ ಪಾಸಾಗಿ ಮೊದಲ ಟೆಸ್ಟ್‌ನಲ್ಲಿ ಆಡುವ ಅರ್ಹತೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News