ಆತನ ಜೀವಕ್ಕೆ ರಕ್ಷಣೆ ಸಿಗಬಹುದೇ?

Update: 2017-11-24 18:40 GMT

ಮಾನ್ಯರೆ,

ಒಮ್ಮೆ ರೌಡಿಯಾದವನು ಪ್ರಾಮಾಣಿಕವಾಗಿ ಬದುಕಬಯಸಿದರೂ ಸಮಾಜ ಅವನನ್ನು ತಿರಸ್ಕರಿಸಿ ಹಳೆಯ ದಾರಿಗೆ ತಳ್ಳುತ್ತದೆ. ಬಲವಂತದಿಂದ ವೇಶ್ಯಾಗೃಹಕ್ಕೆ ತಳ್ಳಲ್ಪಟ್ಟ ಯುವತಿ ಹೊರಬಂದು ಗೌರವದಿಂದ ಬದುಕಲು ಶತಪ್ರಯತ್ನ ಮಾಡಿದರೂ ಪುರುಷಮೃಗಗಳು ಅವಳನ್ನು ಹರಿದು ತಿನ್ನಲು ಹವಣಿಸುತ್ತವೆ. ಇಂತಹ ದುಷ್ಟ ಸಮಾಜದಲ್ಲಿ ಉಗ್ರವಾದಿ ಸಂಘಟನೆಯೊಳಗೆ ಕಾಲಿಟ್ಟು ಹೊರಬಂದ ಕಾಶ್ಮೀರದ ಫುಟ್‌ಬಾಲ್ ಆಟಗಾರ ಮಜೀದ್ ಖಾನ್ ಎಷ್ಟರ ಮಟ್ಟಿಗೆ ಗಣ್ಯಮಾನ್ಯನಾಗಿ ಬದುಕಬಲ್ಲ ಎಂದು ಯೋಚಿಸಿದರೆ ಆತಂಕ ಉಂಟಾಗುತ್ತದೆ.

ಬಲಪಂಥೀಯ ಕೇಸರಿವಾದಿಗಳ ಕ್ರೌರ್ಯ, ದುರಹಂಕಾರಗಳು ಪರಾಕಾಷ್ಠೆ ಮುಟ್ಟಿರುವ ಕಾಲ ಇದು. ನಮ್ಮ ನಿಮ್ಮ ವಾಸದ ಬೀದಿಗಳಲ್ಲಿ ಪೇಪರ್ ಮಾರುವ, ಹಣ್ಣು ಮಾರುವ ಮುಸ್ಲಿಮರನ್ನು ‘ಅನ್ಯರು’ ಎಂದು ಸಂಶಯದೃಷ್ಟಿಯಿಂದ ನೋಡುವಂತೆ ಸಂಘಿಗಳು ಸಾಮಾನ್ಯ ಹಿಂದೂಗಳಿಗೆ ತರಬೇತಿ ಕೊಟ್ಟಿದ್ದಾರೆ. ರಾಜಕಾರಣ, ಪೊಲೀಸ್, ಮಿಲಿಟರಿಗಳಲ್ಲಿ ಇರುವ ಕೆಲವೇ ಮುಸ್ಲಿಮರ ವೃತ್ತಿ-ಬದುಕು ಕತ್ತಿಯ ಮೇಲಿನ ನಡಿಗೆಯಂತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಗಂಧಗಾಳಿ ಇಲ್ಲದವರು ಅಧಿಕಾರದಲ್ಲಿದ್ದಾರೆ. ಈ ಪರಿವಾರ ಕಾಶ್ಮೀರದ ಸ್ವಾಯತ್ತೆಯನ್ನು ಪ್ರತಿಪಾದಿಸಿದ ಚಿದಂಬರಂ, ಫಾರೂಕ್ ಅಬುಲ್ಲ್ಲಾ, ಅರುಂಧತಿ ರಾಯ್‌ರನ್ನು ಬಾಯಿಗೆ ಬಂದಂತೆ ಬಯ್ಯುತ್ತಾ ದೇಶದ್ರೋಹಿ ಪಟ್ಟ ಕಟ್ಟಿದೆ.

ಅಧಿಕಾರಕ್ಕೋಸ್ಕರ ಮುಸ್ಲಿಂದ್ವೇಷಿಗಳ ಕೈಹಿಡಿದಿರುವ ಪಿಡಿಪಿ ಕಾಶ್ಮೀರಿ ಮುಸ್ಲಿಮರ ಪ್ರಾಣ ಉಳಿಸಲು ಅಸಮರ್ಥ ವಾಗಿದೆ. ಹೀಗಿರುವಾಗ ಮಜೀದ್ ಖಾನ್ ಫುಟ್‌ಬಾಲ್ ಆಟಗಾರನಾಗಿ ಏನನ್ನಾದರೂ ಸಾಧಿಸುವುದು ಹಾಗಿರಲಿ, ಆತನ ಜೀವಕ್ಕಾದರೂ ರಕ್ಷಣೆ ಸಿಗಬಹುದೇ?
 

Writer - -ಕಸ್ತೂರಿ, ತುಮಕೂರು

contributor

Editor - -ಕಸ್ತೂರಿ, ತುಮಕೂರು

contributor

Similar News