ಎಲ್ಪಿಜಿ ಸಬ್ಸಿಡಿ ಹಣ ಏರ್‌ಟೆಲ್‌ನ ಬ್ಯಾಂಕ್ ಖಾತೆಗೆ!

Update: 2017-11-25 07:10 GMT

ಮಂಗಳೂರು, ನ.24: ನೀವು ಬಳಸುವ ಅಡುಗೆ ಅನಿಲ (ಗ್ಯಾಸ್)ಕ್ಕಾಗಿ ಸರಕಾರದಿಂದ ನೀಡಲಾಗುವ ಸಬ್ಸಿಡಿ ಹಣ ನೀವು ಒದಗಿಸಿರುವ ನಿಮ್ಮ ಅಧಿಕೃತ ಬ್ಯಾಂಕ್ ಖಾತೆಗೆ ಸಮರ್ಪಕವಾಗಿ ಜಮಾ ಆಗುತ್ತಿದೆಯೇ? ಆಗಿಲ್ಲವಾದಲ್ಲಿ ಪರಿಶೀಲಿಸಿಕೊಳ್ಳಿ. ಯಾಕೆಂದರೆ ನೀವು ಏರ್‌ಟೆಲ್ ಸಿಮ್ ಕಾರ್ಡ್ ಬಳಕೆದಾರರಾಗಿದ್ದಲ್ಲಿ ನಿಮ್ಮ ಅಡುಗೆ ಅನಿಲದ ಸಬ್ಸಿಡಿ ಹಣ ಏರ್‌ಟೆಲ್ ಬ್ಯಾಂಕ್‌ಗೆ ವರ್ಗಾವಣೆ ಆಗಿರಬಹುದು.

ಇದು ಆಧಾರ್ ಕಾರ್ಡ್ ಲಿಂಕಿಂಗ್‌ನ ಅವ್ಯವಸ್ಥೆಯ ಪರಮಾವಧಿಯೋ, ಸರಕಾರ ಸಾರ್ವಜನಿಕರ ಮೇಲೆ ಒಂದರ ಮೇಲೊಂದರಂತೆ ಹೊರಿಸುತ್ತಿರುವ ಹೊರೆಯೋ? ಬ್ಯಾಂಕಿಂಗ್ ಹೆಸರಿನಲ್ಲಿ ಖಾಸಗಿ ಕಂಪೆನಿಗಳು ಸಾರ್ವಜನಿಕರ ದುಡ್ಡನ್ನು ಲೂಟಿ ಹೊಡೆಯಲು ಇದೊಂದು ಸರಕಾರದಿಂದಲೇ ಮಾಡಲಾದ ವ್ಯವಸ್ಥೆಯೋ? ಎಂಬ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗುತ್ತಿಲ್ಲ! ಈಗಾಗಲೇ ಆಧಾರ್ ಲಿಂಕಿಂಗ್ ವ್ಯವಸ್ಥೆಯಿಂದ ಸಾರ್ವಜನಿಕರ ಮಾಹಿತಿಗಳು ಸೋರಿಕೆಯಾಗಿರುವ ಭೀತಿಯ ಜತೆಗೆ, ಸಾರ್ವಜನಿಕರು ಇನ್ನಷ್ಟು ಗೊಂದಲಕ್ಕೀಡಾಗುವ ಪರಿಸ್ಥಿತಿಯನ್ನು ಕೇಂದ್ರ ಸರಕಾರದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಾರ್ವಜನಿಕರ ಮುಂದಿಟ್ಟಿದೆ.

ಆಧಾರ್ ಕಾರ್ಡ್‌ನ ಗೊಂದಲದಿಂದ ಕಂಗೆಟ್ಟಿರುವ ಸಾರ್ವಜನಿಕರು ತಮ್ಮ ಗ್ಯಾಸ್ ಸಂಪರ್ಕ, ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡುವ ಹೆಚ್ಚುವರಿ ಕಾರ್ಯಗಳಿಂದ ಹೈರಾಣಾಗಿದ್ದಾರೆ. ಇದೀಗ ಮತ್ತೆ ಸರಕಾರದ ಸಬ್ಸಿಡಿ ಹಣ ಕೂಡಾ ತಮಗರಿವಿಲ್ಲದೆಯೇ ಏರ್‌ಟೆಲ್ ಖಾತೆಗೆ ಜಮಾವಣೆ ಆಗಿದ್ದಲ್ಲಿ ಅದನ್ನು ವರ್ಗಾಯಿಸಲು ಮತ್ತೆ ಕಚೇರಿಗಳಿಗೆ ಅಲೆದಾಟ ಮಾಡಬೇಕಾದ ಜವಾಬ್ದಾರಿಯನ್ನು ಸಾರ್ವಜನಿಕರೇ ಹೊರಬೇಕಾಗಿದೆ.

ಇದು ಅಘಾತಕಾರಿ, ಅಚ್ಚರಿಯ ವಿಷವಾದರೂ ನಿಜ. ಸರಕಾರದಿಂದ ಸಬ್ಸಿಡಿ ರೂಪದಲ್ಲಿ ನೀವು ಅಧಿಕೃತವಾಗಿ ಒದಗಿಸಿದ್ದ ಬ್ಯಾಂಕ್ ಖಾತೆಯ ಬದಲಿಗೆ ನಿಮಗೆ ಮಾಹಿತಿ ಇಲ್ಲದೆಯೇ ಏರ್‌ಟೆಲ್ ಬ್ಯಾಂಕ್ ಖಾತೆಗೆ ಜಮಾ ಆಗಿರಬಹುದು. ಒಂದು ವೇಳೆ ಹಾಗೇನಾದರೂ ಆಗಿದ್ದಲ್ಲಿ, ಮತ್ತೆ ಅದನ್ನು ನೀವು ನಿಮ್ಮ ಅಧಿಕೃತ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಬ್ಯಾಂಕ್ ಕಚೇರಿಗೆ ತೆರಳಿ ಅಲ್ಲಿ ಮನವಿ ಸಲ್ಲಿಸಿ ನೀವು ಈಗಾಗಲೇ ಬ್ಯಾಂಕ್‌ಗೆ ಮಾಡಿರುವ ಆಧಾರ್ ಲಿಂಕನ್ನು ಡಿ ಲಿಂಕ್ ಮಾಡಿ ಮತ್ತೆ ಲಿಂಕ್ ಮಾಡಬೇಕಾಗುತ್ತದೆ. ಈ ರೀತಿಯ ಉತ್ತರ ನಿಮಗೆ ನೀವು ಉಪಯೋಗಿಸುವ ಗ್ಯಾಸ್ ಕಂಪೆನಿ ಅಥವಾ ಏರ್‌ಟೆಲ್ ಬ್ಯಾಂಕ್‌ನಿಂದ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಸಿಗುತ್ತದೆ!

ಅಡುಗೆ ಅನಿಲ ಪೂರೈಸುವಂತಹ ಭಾರತ್ ಗ್ಯಾಸ್, ಎಚ್‌ಪಿಸಿಎಲ್ ಮೊದಲಾದ ಸಂಸ್ಥೆಗಳ ಹೇಳಿಕೆಯ ಪ್ರಕಾರ, ಇದು ಸರಕಾರ ಮಟ್ಟದಲ್ಲೇ ಆಗಿರುವಂತಹ ಎಡವಟ್ಟು! ಇದರಲ್ಲಿ ತಮ್ಮದೇನೂ ಪಾತ್ರವಿಲ್ಲ. ಸಾರ್ವಜನಿಕರ ಬವಣೆಗೆ ನಾವಂತೂ ಹೊಣೆ ಅಲ್ಲ ಎಂದು ಕೈ ಚೆಲ್ಲಿಬಿಡುತ್ತಾರೆ. ಇನ್ನು ಸಾರ್ವಜನಿಕರು ಮಾತ್ರ ಬ್ಯಾಂಕ್ ಕಚೇರಿ, ಏರ್‌ಟೆಲ್ ಕಚೇರಿ ಅಥವಾ ಸಂಬಂಧಪಟ್ಟ ಸರಕಾರಿ ಇಲಾಖಾ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಮಾತ್ರ ತಪ್ಪುವುದಿಲ್ಲ.

ಏರ್‌ಟೆಲ್ ಖಾತೆ ಹೊಂದಿಲ್ಲದಿದ್ದರೂ ಸಬ್ಸಿಡಿ ವರ್ಗಾವಣೆ!
ಅಡುಗೆ ಅನಿಲ ವಿತರಕ ಸಂಸ್ಥೆಗಳು, ಅಧಿಕಾರಿಗಳು ಹೇಳುವ ಪ್ರಕಾರ ಕೊನೆಯದಾಗಿ ಆಧಾರ್ ಸಂಖ್ಯೆ ಲಿಂಕ್ ಆಗುವ ಬ್ಯಾಂಕ್‌ನ ಖಾತೆಗಳಿಗೆ ಸಬ್ಸಿಡಿ ಹಣ ವರ್ಗಾವಣೆಯಾಗುತ್ತಿದೆ. ಏರ್‌ಟೆಲ್ ಕೂಡಾ ಬ್ಯಾಂಕಿಂಗ್ ಕ್ಷೇತ್ರವನ್ನು ತೆರೆದಿದ್ದು, ರಿಸರ್ವ್ ಬ್ಯಾಂಕ್‌ನಿಂದ ಅನುಮತಿಯನ್ನೂ ಪಡೆದು ಕೊಂಡಿದೆ. ಹಾಗಾಗಿ ಏರ್‌ಟೆಲ್ ಖಾತೆಗೂ ಸಬ್ಸಿಡಿ ಹಣ ವರ್ಗಾವಣೆ ಆಗುತ್ತಿದೆ.

ಆದರೆ ವಿಶೇಷವೆಂದರೆ, ಏರ್‌ಟೆಲ್ ಬ್ಯಾಂಕ್‌ನಲ್ಲಿ ಯಾವುದೇ ಖಾತೆ ಹೊಂದಿಲ್ಲವಾದರೂ, ವ್ಯವಹಾರ ನಡೆಸುತ್ತಿಲ್ಲವಾದರೂ ಸಬ್ಸಿಡಿ ಹಣ ಆ ಖಾತೆಗೆ ಜಮಾವಣೆ ಆಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ.

 ‘‘ನಾನು ಎಚ್‌ಪಿಸಿಎಲ್ ಗ್ಯಾಸ್ ಬಳಕೆದಾರ. ನನ್ನ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಜಮಾ ಆಗುತ್ತಿತ್ತು. ಕೆಲ ತಿಂಗಳಿನಿಂದ ಸಬ್ಸಿಡಿ ಜಮಾ ಆಗಿರದ ಬಗ್ಗೆ ಇಲಾಖೆಯಲ್ಲಿ ವಿಚಾರಿಸಿದಾಗ ಏರ್‌ಟೆಲ್ ಕಂಪೆನಿಯಲ್ಲಿ ಕೇಳಿ ಎಂಬ ಸಲಹೆ ಬಂತು. ಅದರಂತೆ ಅಲ್ಲಿ ಹೋಗಿ ವಿಚಾರಿಸಿದಾಗ ನನ್ನ ಏರ್‌ಟೆಲ್ ಖಾತೆಗೆ 255 ರೂ. ಜಮಾ ಆಗಿತ್ತು. ಆದರೆ ನಾನು ಏರ್‌ಟೆಲ್‌ನಲ್ಲಿ ವ್ಯವಹಾರ ಖಾತೆ ಹೊಂದಿಲ್ಲ. ಹಾಗಿರುವಾಗ ನನ್ನ ಹೆಸರಿನಲ್ಲಿ ಖಾತೆ ತೆರೆದಿದ್ದು ಯಾರು?’’ ಎಂದು ಗ್ರಾಹಕರಾದ ಪಿ.ಕೆ. ಶಂಸುದ್ದೀನ್ ಆತಂಕ ವ್ಯಕ್ತಪಡಿಸುತ್ತಾರೆ.

‘‘ಈ ರೀತಿ ಅದೆಷ್ಟೋ ಮಂದಿಯ ಸಬ್ಸಿಡಿ ಹಣ ಏರ್‌ಟೆಲ್ ಖಾತೆಗೆ ಜಮಾ ಆಗಿರಬಹುದು. ನಾನು ವಿಚಾರಿಸಿದ್ದರಿಂದ ನನ್ನ ಹಣ ನನಗೆ ವಾಪಸ್ ನೀಡಿದರು. ಆದರೆ ಅದೆಷ್ಟೋ ಮಂದಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ. ಅವರು ಗಮನ ಹರಿಸಲೂ ಹೋಗುವುದಿಲ್ಲ. ಹಾಗಿದ್ದಲ್ಲಿ ಇದೆಂತಹ ಮೋಸ’’ ಎನ್ನುವ ಪ್ರಶ್ನೆಯೂ ಅವರದ್ದು.

ಸಾರ್ವಜನಿಕರಿಗೆ ಅಲೆದಾಟ ತಪ್ಪಿದ್ದಲ್ಲ: ‘‘ಯಾವ ಬ್ಯಾಂಕ್ ಅಕೌಂಟ್‌ಗೆ ಸಬ್ಸಿಡಿ ಮೊತ್ತ ಬರಬೇಕೋ ಆ ಖಾತೆಗೆ ನಿಮ್ಮ ಆಧಾರ್ ಲಿಂಕ್ ಮಾಡಬೇಕು. ಹಾಗೆ ಮಾಡಿದ್ದರೂ ಏರ್‌ಟೆಲ್ ಬ್ಯಾಂಕ್‌ಗೆ ವರ್ಗಾವಣೆಯಾಗುತ್ತಿದ್ದಲ್ಲಿ ನೀವು ಇತ್ತೀಚೆಗೆ ಆ ಖಾತೆಯನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಿದ್ದೀರೆಂದರ್ಥ. ಅಂತಹ ಸಂದರ್ಭಗಳಲ್ಲಿ ನೀವು ನಿಮಗೆ ಯಾವ ಖಾತೆಗೆ ಜಮಾ ಆಗಬೇಕು ಆ ಬ್ಯಾಂಕ್ ಶಾಖೆಗೆ ತೆರಳಿ ಅಲ್ಲಿ ಡಿ ಲಿಂಕ್ ಮಾಡಿ ರಿ ಲಿಂಕ್ ಮಾಡಲು ತಿಳಿಸಿದಾಗ ಮತ್ತೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತದೆ’’ ಇದು ಗ್ರಾಹಕರೊಬ್ಬರಿಗೆ ಎಚ್‌ಪಿಸಿಎಲ್‌ನ ಎಲ್‌ಪಿಜಿ ರೀಜನಲ್ ಕಚೇರಿಯಿಂದ ದೊರಕಿದ ಉತ್ತರ.

ಆಧಾರ್ ಜತೆ ಕೊನೆಯದಾಗಿ ಲಿಂಕ್ ಆದ ಖಾತೆಗೆ ಸಬ್ಸಿಡಿ ವರ್ಗಾವಣೆ!: ‘‘ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್‌ನವರು ಆ ರೀತಿಯ ವ್ಯವಸ್ಥೆಯನ್ನು ಮಾಡಿದ್ದಾರೆ. ನೀವು ಕೊನೆಯದಾಗಿ ಯಾವ ಖಾತೆಗೆ ನಿಮ್ಮ ಆಧಾರ್ ಲಿಂಕ್ ಮಾಡಿರುತ್ತೀರೋ ಆ ಖಾತೆಗೆ ನಿಮ್ಮ ಸಬ್ಸಿಡಿ ಹಣ ವರ್ಗಾವಣೆ ಮಾಡುವ ರೀತಿಯಲ್ಲಿ ಸಿಸ್ಟಮ್ ಜನರೇಟ್ ಆಗಿದೆ. ಅಂತಹ ವ್ಯವಸ್ಥೆಯಲ್ಲಿ ನೀವು ನಿಮ್ಮ ಸಬ್ಸಿಡಿ ಹಣ ಜಮಾ ಆಗಬೇಕಿರುವ ಬ್ಯಾಂಕ್‌ನ ಶಾಖೆಗೆ ಹೋಗಿ ಅಲ್ಲಿ ರಿ ಲಿಂಕ್ ಮಾಡಲು ಮನವಿ ಸಲ್ಲಿಸಬೇಕು. ಅವರು ಲಿಂಕ್ ಮಾಡಿದರೆ ಆಯಿತು. ಇಲ್ಲವಾದರೆ ನಾವೇನೂ ಮಾಡಲು ಸಾಧ್ಯವಾಗುವುದಿಲ್ಲ’’ ಎಂಬ ಅಸಹಾಯಕತೆಯನ್ನು ಗ್ಯಾಸ್ ವಿತರಕ ಸಂಸ್ಥೆಯವರು ವ್ಯಕ್ತಪಡಿಸುತ್ತಾರೆ.

ಸರಕಾರಿ ಅಧಿಕಾರಿಗಳಿಗೂ ಅನುಭವ ಆಗಿದೆ!: ಸಾರ್ವಜನಿಕರು ಎದುರಿಸುತ್ತಿರುವ ಈ ಸಮಸ್ಯೆ ಬಗ್ಗೆ ‘ವಾರ್ತಾಭಾರತಿ’ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಲ್ಲಿ ವಿಚಾರಿಸಲು ತೆರಳಿದಾಗ, ಅಲ್ಲಿನ ಅಧಿಕಾರಿಯೊಬ್ಬರು ಕೂಡಾ ತಮ್ಮ ಅನುಭವ ಹಂಚಿಕೊಂಡರು.
‘‘ಸರಕಾರದ ನಿಯಮದ ಪ್ರಕಾರ ಯಾವ ಖಾತೆ ಆಧಾರ್‌ನೊಂದಿಗೆ ಕೊನೆಯದಾಗಿ ಲಿಂಕ್ ಆಗಿರುತ್ತದೆ ಆ ಖಾತೆಗೆ ನಿಮ್ಮ ಸಬ್ಸಿಡಿ ಜಮಾ ಆಗುತ್ತದೆ.

ನಾನು ಲಾಲ್‌ಬಾಗ್‌ನಲ್ಲಿ ಖಾತೆಯೊಂದಕ್ಕೆ ಲಿಂಕ್ ಮಾಡಿದ್ದೆ. ಅದಕ್ಕೆ ಸಬ್ಸಿಡಿ ಬರುತ್ತಿತ್ತು. ಆಮೇಲೆ ಎಲ್ಲರಿಗೂ ಆಧಾರ್ ಕಡ್ಡಾಯವಾದಾಗ ನಾನು ನನ್ನ ಇನ್ನೊಂದು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದಾಗ ಹಣ ಅದಕ್ಕೆ ಬರಲಾರಂಭಿಸಿತು. ಆ ಮೇಲೆ ಮೊಬೈಲ್ ಸಂಖ್ಯೆಗಳಿಗೂ ಆಧಾರ್ ಲಿಂಕ್ ಮಾಡಬೇಕು ಎಂಬ ನಿಯಮ ಬಂದಾಗ ನಾನು ನನ್ನ ಏರ್‌ಟೆಲ್ ಖಾತೆಗೆ ಆಧಾರ್ ಲಿಂಕ್ ಮಾಡಿದೆ. ನನ್ನ ಸಬ್ಸಿಡಿ ಈಗ ಏರ್‌ಟೆಲ್ ಖಾತೆಗೆ ಬರುತ್ತಿದೆ. ಈ ಬಗ್ಗೆ ನನಗೆ ಮೊಬೈಲ್‌ನಲ್ಲಿ ಸಂದೇಶವೂ ಬಂದಿದೆ. ನಾನು ಹಣವನ್ನು ಏರ್‌ಟೆಲ್ ಖಾತೆಯಿಂದ ಪಡೆಯಬೇಕಿದ್ದಲ್ಲಿ ಸಮೀಪದ ‘ಬ್ಯಾಂಕಿಂಗ್ ಪಾಯಿಂಟ್- ರೋಲಾ ಟೈಮ್, ರೋಲಾ ಟೈಮ್ ನಂ. 10, ನಗರ ಪಾಲಿಕೆ ಕಟ್ಟಡ ಮುಖ್ಯ ರಸ್ತೆ, ಮಂಗಳೂರು, ದಕ್ಷಿಣ ಕನ್ನಡ ಇಲ್ಲಿಗೆ ಭೇಟಿ ಕೊಡಿ’ ಎಂಬ ಸಂದೇಶದೊಂದಿಗೆ ಮೊಬೈಲ್ ಸಂಖ್ಯೆಯನ್ನೂ ನೀಡಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿ ಮಾಹಿತಿ ನೀಡಿದರು.

ಅಧಿಕೃತ ಬ್ಯಾಂಕ್ ಖಾತೆಗೆ ರಿ ಲಿಂಕ್ ಮಾಡುವುದು ಸದ್ಯದ ಪರಿಹಾರ!: ‘‘ಏರ್‌ಟೆಲ್‌ನದ್ದೂ ಬ್ಯಾಂಕಿಂಗ್ ವ್ಯವಸ್ಥೆ ಇದೆ. ಏರ್‌ಟೆಲ್ ಸಿಮ್ ಹೊಂದಿರುವವರು ಆಧಾರ್ ಲಿಂಕ್ ಮಾಡಿದಾಕ್ಷಣ ಅದು ಕೊನೆಯ ಆಧಾರ್ ಲಿಂಕ್ ಆಗಿದ್ದಲ್ಲಿ ಆ ಏರ್‌ಟೆಲ್ ಖಾತೆಗೆ ಸಬ್ಸಿಡಿ ಹಣ ಜಮಾ ಆಗುತ್ತದೆ. ಇದನ್ನು ತಪ್ಪಿಸಬೇಕಾದರೆ, ಹಿಂದಿನ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕೊಟ್ಟಿದ್ದನ್ನು ಅದನ್ನು ಡಿಲೀಟ್ ಮಾಡಿಸಿ ಮತ್ತೊಮ್ಮೆ ಲಿಂಕ್ ಮಾಡಿಸಿದಾಗ ಅದು ಕೊನೆಯ ಲಿಂಕ್ ಆಗಿ ಆ ಖಾತೆಗೆ ನಿಮ್ಮ ಹಣ ಜಮಾವಣೆ ಆಗುತ್ತದೆ’’ ಎಂದು ಸಲಹೆ ನೀಡುತ್ತಾರೆ ದ.ಕ. ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿ ಸುನಂದಾ.

ಏರ್‌ಟೆಲ್‌ನವರನ್ನೇ ವಿಚಾರಿಸಿ
‘ಅಡುಗೆ ಅನಿಲದ ಸಬ್ಸಿಡಿ ಹಣ ಏರ್‌ಟೆಲ್ ಖಾತೆಗೆ ಜಮಾ ಆಗುತ್ತಿದೆ ಎಂಬುದರ ಬಗ್ಗೆ ದೂರು ಇದೆ. ಆದರೆ, ಈ ಬಗ್ಗೆ ನಮ್ಮಲ್ಲಿ ಮಾಹಿತಿ ಇಲ್ಲ. ಏರ್‌ಟೆಲ್‌ನವರನ್ನೇ ವಿಚಾರಿಸಿ ನೋಡಿ’’.

ಅಡುಗೆ ಅನಿಲದ ಸಬ್ಸಿಡಿ ಖಾತೆಗೆ ಜಮಾ ಆಗದಿರುವ ಬಗ್ಗೆ ನಗರದ ಗ್ಯಾಸ್ ವಿತರಕ ಏಜೆನ್ಸಿಯೊಂದನ್ನು ಸಂಪರ್ಕಿಸಿದಾಗ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್‌ಗೆ ಲಿಂಕ್ ಕೊಟ್ಟಿರುವ ಗ್ರಾಹಕರಿಗೆ ಅದರಲ್ಲೂ ಏರ್‌ಟೆಲ್ ಸಿಮ್ ಕಾರ್ಡ್‌ನ್ನು ಹೊಂದಿದ್ದವರಿಗೆ ಮಾತ್ರ ಈ ರೀತಿಯ ಸಮಸ್ಯೆ ಸೃಷ್ಟಿಯಾಗಿದೆ. ಏರ್‌ಟೆಲ್‌ನವರದ್ದೇ ಪ್ರತ್ಯೆಕ ಖಾತೆ ಇದ್ದು, ಅದಕ್ಕೆ ಸಬ್ಸಿಡಿ ಹಣ ಜಮಾ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ನಮ್ಮಲ್ಲಿ ಮಾಹಿತಿ ಇಲ್ಲ ಎಂದು ಅನಿಲ ವಿತರಣಾ ಸಂಸ್ಥೆಯ ಸಿಬ್ಬಂದಿ ತಿಳಿಸಿದ್ದಾರೆ.

ಇತರ ಸಿಮ್ ಕಾರ್ಡ್‌ನವರಿಗೆ ಯಾಕೆ ಆಗ್ತಾ ಇಲ್ಲ
ಐಡಿಯಾ, ಡೊಕೊಮೊ, ಬಿಎಸ್ಸೆನ್ನೆಲ್ ಇತ್ಯಾದಿ ದೂರಸಂಪರ್ಕ ಸೇವೆ ಒದಗಿಸುತ್ತಿರುವ ಸಂಸ್ಥೆಗಳ ಸಿಮ್ ಕಾರ್ಡ್ ಹೊಂದಿದವರಿಂದ ಈ ದೂರು ಬರುತ್ತಿಲ್ಲ. ಆದರೆ, ಏರ್‌ಟೆಲ್ ಸಿಮ್ ಕಾರ್ಡ್ ಹೊಂದಿದವರಿಂದ ಮಾತ್ರ ಈ ಸಮಸ್ಯೆ ಉದ್ಭವವಾಗಿದೆ ಎಂದೂ ಅವರು ಹೇಳಿದ್ದಾರೆ. ಏರ್‌ಟೆಲ್ ಖಾತೆಗೆ ಹೋಗಿರುವ ಸಬ್ಸಿಡಿ ಹಣವನ್ನು ಹಿಂಪಡೆಯಲು ಏನು ಮಾಡಬೇಕೆಂಬುದನ್ನು ನೀವು ಏರ್‌ಟೆಲ್‌ನವರಿಗೇ ಕೇಳಬೇಕು ಎಂದವರು ಉತ್ತರಿಸಿದ್ದಾರೆ.

ಏರ್‌ಟೆಲ್ ಖಾತೆಯಲ್ಲಿ ಕೋಟಿಗಟ್ಟಲೆ ಸಬ್ಸಿಡಿ ಹಣ ಜಮೆ!
ಆಧಾರ್‌ಲಿಂಕ್‌ನ ಈ ಅವ್ಯವಸ್ಥೆಯಿಂದಾಗಿ ಈಗಾಗಲೇ ದೇಶಾದ್ಯಂತ ಏರ್‌ಟೆಲ್ ಖಾತೆಗೆ ಕೋಟ್ಯಂತರ ರೂ. ಸಬ್ಸಿಡಿ ಹಣ ಜಮಾ ಆಗಿದೆ ಎನ್ನಲಾಗುತ್ತಿದೆ. ಸಾರ್ವಜನಿಕರ ದುಡ್ಡು ಏರ್‌ಟೆಲ್ ಬ್ಯಾಂಕ್‌ನಲ್ಲಿ ಜಮಾ ಆಗುವ ಮೂಲಕ ಅವರು ಬಡ್ಡಿ ಪಡೆಯುವ ವ್ಯವಸ್ಥೆಯೆಂದೂ ಹೇಳಬಹುದು!
ಅಂದ ಹಾಗೆ, ಅಡುಗೆ ಅನಿಲದ ಸಬ್ಸಿಡಿ ಹಣ ಮಾತ್ರವಲ್ಲ, ಹಾಲು ಉತ್ಪಾದಕರಿಗೆ ರಾಜ್ಯ ಸರಕಾರದಿಂದ ನೀಡಲಾಗುವ ಪ್ರೋತ್ಸಾಹ ಧನವೂ ಏರ್‌ಟೆಲ್ ಖಾತೆಗೆ ಜಮಾ ಆಗುತ್ತಿರುವ ಮಾಹಿತಿ ಇದೆ.

‘‘ಏರ್‌ಟೆಲ್ ಸಂಸ್ಥೆಗೆ ಅದೆಷ್ಟೋ ಕೋಟಿ ಸಬ್ಸಿಡಿ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಇದೆ. ನಾವು ಈಗಾಗಲೇ ಆಯಿಲ್ ಕಂಪೆನಿಗಳಿಗೆ ಮಾಹಿತಿ ನೀಡಿದ್ದೇವೆ. ಎಚ್‌ಡಿಎಫ್‌ಸಿ, ಐಸಿಐಸಿಐನಂತೆ ಏರ್‌ಟೆಲ್ ಕೂಡಾ ಬ್ಯಾಂಕಿಂಗ್ ವ್ಯವಸ್ಥೆಯಾಗಿದೆ. ಆದ್ದರಿಂದ ಸರಕಾರದ ನಿಯಮದ ಪ್ರಕಾರ ಕೊನೆಯ ಆಧಾರ್ ಲಿಂಕ್ ಹೊಂದಿದ ಖಾತೆಗೆ ಸಬ್ಸಿಡಿ ಜಮಾ ಆಗುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ಸಬ್ಸಿಡಿ ಹಣ ಏರ್‌ಟೆಲ್ ಖಾತೆಗೆ ಬಿದ್ದಿದ್ದಲ್ಲಿ ಅದನ್ನು ಪಡೆಯುವ ವ್ಯವಸ್ಥೆ ಇರಬೇಕು. ನಾನು ಈ ಬಗ್ಗೆ ಎಚ್‌ಪಿಸಿಎಲ್ ಜಿಲ್ಲಾ ಸಂಯೋಜಕರ ಜತೆ ಮಾತನಾಡಿದ್ದೇನೆ. ಈ ಬಗ್ಗೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಮತ್ತು ಆಯಿಲ್ ಕಂಪೆನಿಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ನಮ್ಮ ಇಲಾಖೆಗೆ ಈ ಬಗ್ಗೆ ಆರ್‌ಟಿಐನಲ್ಲೂ ಅರ್ಜಿ ಬಂದಿದೆ. ನಾವೇನೂ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತಿಲ್ಲ. ಇದೇನಿದ್ದರೂ ಆಯಿಲ್ ಕಂಪೆನಿಗಳು ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ನಡುವಣ ಪ್ರಕ್ರಿಯೆ’’
ಸುನಂದಾ, ಹಿರಿಯ ಅಧಿಕಾರಿ,ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ದ.ಕ.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News